ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ 90 ವರ್ಷದ ವೃದ್ಧ ಸವಾಲು ಹಾಕಿದ್ದು, ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಅಜ್ಜ ಎಲ್ಲ ರೀತಿಯ ಹೋರಾಟ ನಡೆಸುತ್ತಿದ್ದಾನೆ.
ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದ ಬಿಹಾರ ಮೂಲದ ಕಾರ್ಮಿಕ ರೋಗಿ-419ರ ಸಂಪರ್ಕದಿಂದ ವೃದ್ಧನಿಗೆ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿತ್ತು. ಹೀಗಾಗಿ ಸದ್ಯ ಆತನನ್ನು ಪ್ರತ್ಯೇಕವಾಗಿಸಿರಿ ಚಿಕಿತ್ಸೆ ಕೊಡಲಾಗುತ್ತಿದೆ.
ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈದ್ಯರಿಗೆ ಎಲ್ಲವೂ ಕಷ್ಟ ಕಷ್ಟವಾಗಿದೆ. ಆದರೂ ಅಜ್ಜ 90 ವರ್ಷ ವಯಸ್ಸಿನಲ್ಲಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾನೆ. ಈ ನಿಟ್ಟಿನಲ್ಲಿ ವೈದ್ಯರು ವಯೋ ಸಹಜ ಕಾಯಿಲೆ ನೋಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಡಯಟ್ ಫುಡ್‍ನಲ್ಲೂ ಎಲ್ಲ ಭಿನ್ನವಾಗಿದೆ. ಡಯಾಬಿಟಿಕ್, ಬಿಪಿ ವ್ಯತ್ಯಾಸವಾಗದಂತೆ ನಿಗದಿತ ಪ್ರಮಾಣದಲ್ಲಿ ವೃದ್ಧನಿಗೆ ಊಟ ಕೊಡಲಾಗುತ್ತಿದೆ.
ವೃದ್ಧನಿಗೆ ಮರುಜನ್ಮ ನೀಡುವುದು ವೈದ್ಯರಿಗೆ ಬಾರಿ ಸವಾಲಿನ ಕೆಲಸವಾಗಿದೆ. ಆದರೆ ವೈದ್ಯರ ಮಾತನ್ನು ಅಜ್ಜ ಚಾಚು ತಪ್ಪದೇ ಆರೋಗ್ಯಕ್ಕಾಗಿ ಪಾಲಿಸುತ್ತಿದ್ದಾನೆ. ಹೀಗಾಗಿ ವೃದ್ಧನಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಕೊಂಚ ಬ್ಯಾಲೆನ್ಸಿಂಗ್ ಬಂದಿದೆ.