ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಕ್ಷ ನನ್ನನ್ನ ನೇಮಿಸಿದೆ, ನಮ್ಮಲ್ಲಿ ಸಾಂಕೇತಿಕವಾಗಿ ಪದಗ್ರಹಣ ಮಾಡುವುದಿದೆ ಕೋವಿಡ್-19ನಿಂದಾಗಿ ನಮಗೆ ಆ ಭಾಗ್ಯ ಸಿಕ್ಕಿರಲಿಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಕೇತಿವಾಗಿ ಮಾಡಲಿಲ್ಲ ಅಂತ ಮನೆಯಲ್ಲಿ ಕೂರಲಿಲ್ಲ, ನಾವು ರಸ್ತೆಗಿಳಿದು ಪ್ರತಿಪಕ್ಷವಾಗಿ ವರ್ತಿಸಿದ್ದೇವೆ. ಜನರ ಮಧ್ಯೆಯಿದ್ದು ಪ್ರಾಮಾಣಿಕ ಸೇವೆ ಮಾಡಿದ್ದೇವೆ. ನಮ್ಮ ನಾಯಕರ ಜೊತೆ ಸೇರಿ ಸರ್ಕಾರ ಎಚ್ಚರಿಸಿದ್ದೇವೆ ಎಂದು ಅವರು ತಮ್ಮ ಜವಾಬ್ದಾರಿ ತಿಳಿಸಿದರು.
ಇನ್ನು ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಸಮಸ್ಯೆಗೆ ಸ್ಪಂದಿಸಿದ್ದೇವೆ. ಈಗ ಸಾಂಕೇತಿಕವಾಗಿ ಪದಗ್ರಹಣ ಮಾಡಬೇಕಿದೆ. ಮೇ 31ರಂದು ಕಾರ್ಯಕ್ರಮ ಮಾಡಬೇಕಿತ್ತು. ಭಾನುವಾರ ಟ್ರಾಫಿಕ್ ಕಡಿಮೆ ಅಂತ ನಿರ್ಧರಿಸಿದ್ದೆ. ಆದರೆ, ಭಾನುವಾರ ಕರ್ಪ್ಯೂ ಅಂತ ಹೇಳಿ ಬಿಟ್ಟಿದ್ದಾರೆ. ಭಾನುವಾರದಂದೇ ಅವರು ಪಾಪ ಘೋಷಿಸಿದ್ದಾರೆ. ಹೀಗಾಗಿ ನಾನು ಬೇರೊಂದು ದಿನ ಅಧಿಕಾರ ಸ್ವೀಕರಿಸುತ್ತೇನೆ ಎಂದು ಅವರು ಅಧಿಕಾರದ ಪದಗ್ರಹಣ ಬಗ್ಗೆ ಮಾಹಿತಿ ನೀಡಿದರು.
ಸದ್ಯ ಅಧಿಕಾರಸ್ವೀಕಾರಿಸುವ ದಿನ ರಾಜ್ಯದ ಉದ್ದಗಲಕ್ಕೂ ಗ್ರಾಮ ಪಂಚಾಯ್ತಿ, ವಾರ್ಡ್ ಮಟ್ಟದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ವಿನೂತನ ಕಾರ್ಯಕ್ರಮ ಮಾಡುತ್ತೇವೆ. ಆ ಕಾರ್ಯಕ್ರಮ ಡೈರೆಕ್ಟ್ ರಿಲೆ ಮಾಡಲು ಚಿಂತನೆ ನಡೆಸಲಾಗಿದ್ದು, ಸಂವಿಧಾನ ಪೀಠಿಕೆ ಓದಿ ಅಧಿಕಾರ ಸ್ವೀಕರಿಸುತ್ತೇನೆ. ಹೀಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಅವರು ನುಡಿದರು.
ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಯಾವುದೇ ಜನಪರ ಕಾರ್ಯಕ್ರಮ ಮಾಡಲಿಲ್ಲ, ಕೇಂದ್ರ 20+1 ಲಕ್ಷ ಕೋಟಿ ರೂ. ಘೋಷಿಸಿದೆ. ಆದರೆ, ಎಲ್ಲೂ ಕೇಂದ್ರ ಸರ್ಕಾರ ನೆರವು ಘೋಷಿಸುತ್ತಿಲ್ಲ, ಬ್ಯಾಂಕುಗಳಿಂದ ಸಾಲ ನೀಡಿ ಬಡ್ಡಿ ಕಟ್ಟುವಂತೆ ಮಾಡುತ್ತಿದೆ. ಎಲ್ಲರನ್ನು ಮೋದಿ ಸರ್ಕಾರ ಸಾಲಗಾರರನ್ನಾಗಿ ಮಾಡುತ್ತಿದೆ. ಅದೇ ಸಬ್ಸಿಡಿ, ಗ್ರಾಂಟ್ ಮೂಲಕ ಕೊಟ್ಟಿದ್ದರೆ ಒಪ್ಪುತ್ತಿದ್ದೆ ಎಂದು ಕೇಂದ್ರ ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಎಂ 1,600 ಕೋಟಿ ಘೋಷಣೆ ಮಾಡಿದ್ದಾರೆ. ಇಲ್ಲಿಯ ವರೆಗೆ ಒಂದು ರೂಪಾಯಿ ಯಾರಿಗೂ ಸಿಕ್ಕಿಲ್ಲ, ಪೀಣ್ಯದಲ್ಲಿ ನಾಲ್ಕೂವರೆ ಲಕ್ಷ ಉದ್ಯಮಗಳಿವೆ. ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಅಲ್ಲಿ ಮೂರುವರೆ ಸಾವಿರ ಮಾತ್ರ ಕಿಟ್ ಹಂಚಿದ್ದೀರ. ಇಲ್ಲೇ ಗೊತ್ತಾಗುತ್ತದೆ ನಿಮ್ಮ ಜನಪರ ಕಾಳಜಿ. ದೇಶ ಕಟ್ಟುವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ, ಇವತ್ತು ಅವರು ಊರಿಗೆ ವಾಪಸ್ ಹೋಗುವಂತೆ ಮಾಡಿದ್ದೀರ. ದೇಶಕ್ಕೆ ದುಡಿದವರಿಗೆ ಅಪಮಾನಿಸಿದ್ದೀರ. ಲಾಕ್ಡೌನ್ ಸಡಿಲಿಕೆ ನಂತರ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ನೊಂದವರಿಗೆ ಸಾಂತ್ವನ ಹೇಳಿ ಧ್ವನಿಯಾಗುತ್ತೇನೆ. ಎಲ್ಲಾ ವರ್ಗ, ಎಲ್ಲಾ ಧರ್ಮದ ಜನರನ್ನು ಭೇಟಿ ಮಾಡುತ್ತೇನೆ. ಯಾವ ವರ್ಗಕ್ಕೆ ನೋವು ಮಾಡಿದ್ದೀರ ಅವರಿಗೂ ಶಕ್ತಿ ತುಂಬುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.