ಉಡುಪಿ: ಯುಎಇಯಿಂದ ಉಡುಪಿಗೆ ಬಂದ 49 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇನ್ನಿಬ್ಬರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
47 ದಿನದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರಲಿಲ್ಲ, ಹೀಗಾಗಿ ಜಿಲ್ಲೆ ಗ್ರೀನ್ ಝೋನ್‍ನಲ್ಲಿ ಇತ್ತು. ಆದರೆ ವಿದೇಶಿ ನೆಲದಲ್ಲಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಭಾರತ ಮುಂದಾಗಿದ್ದು, ಉಡುಪಿ ಜಿಲ್ಲೆಗೆ 49 ಮಂದಿ ಯುಎಇಯಿಂದ ಬಂದಿದ್ದು, ಅವರಲ್ಲಿ ಐವರಿಗೆ ಕೊರೊನಾ ಪಾಸಿಟಿವ್ ಇದೆ. ಎಲ್ಲರ ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ, ಆರೋಗ್ಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಸೋಂಕಿತರನ್ನು ಕೂಡಲೇ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಡಿಸಿ ತಿಳಿಸಿದರು.
ಈಗಾಗಲೇ 47 ಮಂದಿಯ ವರದಿಗಳು ಕೈಸೇರಿವೆ. ಇನ್ನು ಎರಡು ವರದಿಗಳಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಸೋಂಕಿತರಲ್ಲಿ ಯಾರು ಗರ್ಭಿಣಿಯರಿಲ್ಲ. ಸೋಂಕಿತರಲ್ಲಿ ನಾಲ್ಕು ಮಂದಿ ಹೋಟೆಲ್‍ಗಳಲ್ಲಿ, ಒಬ್ಬರು ಹಾಸ್ಟೆಲ್‍ನಲ್ಲಿ ತಂಗಿದ್ದರು. ಆದರೆ ಈಗ ಸೋಂಕಿತರನ್ನು ಉಡುಪಿ ನಗರದಲ್ಲಿರುವ ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸುತ್ತೇವೆ. ಇನ್ನೆರಡು ವರದಿ ಇಂದು ಸಂಜೆ ಅಥವಾ ನಾಳೆ ಬರಬಹುದು ಎಂದು ಡಿಸಿ ಮಾಹಿತಿ ನೀಡಿದರು.