Breaking News
Home / ಜಿಲ್ಲೆ / ಬೆಂಗಳೂರು / ರಾಜೀನಾಮೆ ನೀಡುವವರೆಗೂ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್‌ನಿಂದ ಮೊಟ್ಟೆ ಕೊಡುವ ಅಭಿಯಾನ!

ರಾಜೀನಾಮೆ ನೀಡುವವರೆಗೂ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್‌ನಿಂದ ಮೊಟ್ಟೆ ಕೊಡುವ ಅಭಿಯಾನ!

Spread the love

ಬೆಂಗಳೂರು,: “ರಾಜ್ಯದಲ್ಲಿ ಅಪೌಷ್ಠಿಕತೆ ನೀಗಿಸಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡಲಾಗುವ ಮೊಟ್ಟೆಯಲ್ಲೂ ದುಡ್ಡು ಮಾಡಲು ಅಮಾನವೀಯ ಹೆಜ್ಜೆ ಇಟ್ಟುವ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ತನಿಖೆಯಾಗಬೇಕು’ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕಿಯರು ಜಂಟಿ ಸುದ್ದಿಗೋಷ್ಠಿ ಜೊಲ್ಲೆ ರಾಜೀನಾಮೆಗೆ ಆಗ್ರಹಿಸಿದರು. ಮಾಜಿ ಸಚಿವೆ ಉಮಾಶ್ರೀ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕುಸುಮಾ ಹನುಮಂತರಾಯಪ್ಪ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

‘ಮಕ್ಕಳು, ಗರ್ಭಿಣಿಯರ ಆರೋಗ್ಯ ಕಾಪಾಡಲು ಸರ್ಕಾರದ ವತಿಯಿಂದ ನೀಡಲಾಗುವ ಮೊಟ್ಟೆಯಲ್ಲಿ ಹಣ ಮಾಡಿ ಬದುಕುವ ದುಸ್ಥಿತಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬಂದಿದೆಯಾ?’ ಎಂದು ಮಾಜಿ ಸಚಿವೆ ಉಮಾಶ್ರೀ ಅವರು ಪ್ರಶ್ನಿಸಿದರು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡ, ದಲಿತ ವರ್ಗದ ಮಹಿಳೆಯರು ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ದೂರ ಮಾಡಲು ಅವರಿಗೆ ಮೊಟ್ಟೆ ನೀಡಲು ಯೋಜನೆ ರೂಪಿಸಿತ್ತು. ಆದರೆ ಈ ಮೊಟ್ಟೆಯಿಂದ ಕೋಟ್ಯಂತರ ರೂಪಾಯಿ ಕಮಿಷನ್ ಪಡೆಯುವ ಹುನ್ನಾರ ನಡೆಯುತ್ತಿರುವುದು ದುರಾದೃಷ್ಟಕರ. ಒಬ್ಬ ಸಚಿವೆಯೇ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಅದಕ್ಕೆ ದಾರಿ ಮಾಡಿಕೊಟ್ಟಿರುವುದು ದುಃಖದ ಸಂಗತಿ. ಅವರು ಕೂಡ ತಾಯಿಯಾಗಿ ಈ ರೀತಿ ನಡೆದುಕೊಳ್ಳಲು ಸಾಧ್ಯವೇ? ಇದು ಮಹಿಳೆಯರು ಮತ್ತು ಮಕ್ಕಳಿಗೆ ಮಾಡಿದ ದೊಡ್ಡ ದ್ರೋಹ’ ಎಂದು ಉಮಾಶ್ರೀ ಟೀಕಿಸಿದರು.

ಗುತ್ತಿಗೆದಾರರಿಂದ ಕಮಿಷನ್

‘ಇಂದು ಗರ್ಭಿಣಿಯರು ರಕ್ತಸ್ರಾವ, ರಕ್ತ ಹೀನತೆಯಿಂದ ಸಾಯುತ್ತಿದ್ದಾರೆ. ಇದನ್ನು ತಡೆಯಲು ಮಹಿಳೆಗೆ ಗರ್ಭಾವಸ್ಥೆಯಲ್ಲೇ ಪೌಷ್ಠಿಕ ಆಹಾರ ನೀಡಬೇಕು ಎಂದು ಕಾಂಗ್ರೆಸ್ ಕಾಂಗ್ರೆಸ್ ಮಾತೃಪೂರ್ಣ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲೂ ಭ್ರಷ್ಟಾಚಾರ ನಡೆಸುವುದು ಸರಿಯೇ? ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲೇ ಇಲಾಖೆ ಯೋಜನೆಯಲ್ಲಿ ಕಂಟ್ರಾಕ್ಟರ್‌ಗಳಿಗೆ ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇಲಾಖೆ ವಿಚಾರದಲ್ಲಿ ಟೆಂಡರ್ ಮೂಲಕವೇ ನಡೆಸಬೇಕು ಎಂದು ತೀರ್ಪು ನೀಡಿತ್ತು. ಆದರೂ ಸಚಿವರು ಟೆಂಡರ್ ಕರೆಯುವ ಮುನ್ನವೇ ಗುತ್ತಿಗೆದಾರರ ಬಳಿ ಕಮಿಷನ್ ಪಡೆಯಲು ಮುಂದಾಗಿದ್ದಾರೆ. ಇದು ನ್ಯಾಯಾಲಯ ತೀರ್ಪಿನ ಉಲ್ಲಂಘನೆಯಾಗಿದೆ’ ಎಂದು ಮಾಜಿ ಸಚಿವ ಉಮಾಶ್ರೀ ಟೀಕಿಸಿದ್ದಾರೆ.

‘ಪೌಷ್ಠಿಕ ಆಹಾರದಲ್ಲಿ ಭ್ರಷ್ಟಾಚಾರ ನಡೆಸಿರುವುದು ಅವರ ಹತ್ಯೆ ಮಾಡಿದಂತೆ ಎಂದು ಬಿಜೆಪಿ ನಾಯಕಿ ಪ್ರಮಿಳಾ ನೇಸರ್ಗಿ ಅವರೇ ಹೇಳಿದ್ದಾರೆ. ಈ ಪ್ರಕರಣವನ್ನು ಸಚಿವರು ಸಮರ್ಥನೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಮೊಟ್ಟೆ ಖರೀದಿ ಟೆಂಡರ್ ಅನ್ನು ಈ ಕೂಡಲೇ ಕೈಬಿಡಬೇಕು ಹಾಗೂ ಅದನ್ನು ಕರೆದಿದ್ದರೆ ರದ್ದುಗೊಳಿಸಬೇಕು. ಜತೆಗೆ ಈ ಪ್ರಕರಣದ ತನಿಖೆ ಆಗಲೇಬೇಕು’ ಎಂದು ಉಮಾಶ್ರಿ ಅವರು ಆಗ್ರಹಿಸಿದರು.

ಮಕ್ಕಳು ಪೌಷ್ಠಿಕ ಆಹಾರ ದುರ್ಬಳಕೆ

 

ನಂತರ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು, ‘ಮಕ್ಕಳು ಹಾಗೂ ಗರ್ಭಿಣಿಯರ ಪೌಷ್ಠಿಕ ಆಹಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಪಕ್ಷದ ಲೇಬಲ್ ಹಾಕಿಕೊಂಡ ಬಿಜೆಪಿ ನಾಯಕರು ಇಂದು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ದುಡ್ಡು ಮಾಡಲು ಹೊರಟಿರುವುದು ನಾಚಿಕೆಗೇಡಿನ ವಿಚಾರ. ಹೀಗಾಗಿ ಶಶಿಕಲಾ ಜೊಲ್ಲೆ ಅವರು ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

“ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂದು ಕೇಳುವ ಬಿಜೆಪಿ ನಾಯಕರು ಹಾಗೂ ನಾ ಖಾವೂಂಗಾ, ನಾ ಖಾನೇ ದೂಂಗ ಎನ್ನುವ ಪ್ರಧಾನಮಂತ್ರಿಗಳೇ ಈ ಪ್ರಕರಣದ ಬಗ್ಗೆ ಏನು ಹೇಳುತ್ತೀರಿ? ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಸಚಿವರುಗಳೇ ಇಲಾಖೆಗಳಲ್ಲಿ ಹಣವನ್ನು ಗುಡಿಸಿಹಾಕುತ್ತಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ? ಮಾತೃ ಪೂರ್ಣ ಯೋಜನೆಯನ್ನು ಮಾತೃ ಅಪೂರ್ಣ ಮಾಡಲು ಸಚಿವರು ಹೊರಟಿದ್ದು, ಇದು ಮಕ್ಕಳು ಹಾಗೂ ಗರ್ಭಿಣಿಯರಿಗೆ ಮಾಡಿರುವ ದ್ರೋಹ. ಹೀಗಾಗಿ ಅವರ ತಲೆದಂಡ ಆಗಲೇಬೇಕು’ ಎಂದು ಪುಷ್ಪಾ ಅಮರನಾಥ್ ಒತ್ತಾಯಿಸಿದರು.

ಮಕ್ಕಳನ್ನು ಬಲಿಕೊಡಲು ಮುಂದಾಗಿದೆ ಬಿಜೆಪಿ

 

“ಕೋವಿಡ್ ಮೂರನೇ ಅಲೆ ಎದುರಾಗುತ್ತಿದ್ದು, ಇದು ಮಕ್ಕಳಿಗೆ ಮಾರಕವಾಗಲಿದೆ ಎಂದು ತಜ್ಞರು ಹೇಳುತ್ತಿರುವಾಗ ಅವರ ರಕ್ಷಣೆ ಮಾಡಬೇಕಾಗಿರುವುದು ಸರ್ಕಾರದ ಕೆಲಸ. ಆದರೆ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರದಲ್ಲಿ ದುಡ್ಡು ಮಾಡಲು ಹೊರಟಿರುವುದು ಸಚಿವರ ಅಮಾನವೀಯ ಮನಸ್ಥಿತಿಗೆ ಸಾಕ್ಷಿ. ಮಹಿಳಾ ಕಾಂಗ್ರೆಸ್ ವತಿಯಿಂದ ಮಕ್ಕಳಿಗೆ ಪೌಷ್ಠಿಕ ಆಹಾರ ಕಿಟ್ ನೀಡಿ, ಈ ಬಗ್ಗೆ ಸರ್ಕಾರಕ್ಕೂ ವರದಿ ನೀಡಿದ್ದೆವು. ಆದರೆ ಈ ಸರ್ಕಾರ ಮಕ್ಕಳನ್ನು ರಕ್ಷಿಸಲು ಹೊರಟಿದೆಯಾ ಅಥವಾ ಬಲಿ ಕೊಡಲು ಹೊರಟಿದೆಯಾ’ ಎಂದು ಪುಷ್ಪಾ ಅಮರನಾಥ್ ಪ್ರಶ್ನಿಸಿದರು.

‘ಮುಖ್ಯಮಂತ್ರಿಗಳು ತಮ್ಮದೇ ಯೋಚನೆಗಳಲ್ಲಿ ಮಗ್ನರಾಗಿರಬಹುದು. ಆದರೂ ಗರ್ಭಿಣಿಯರು ಹಾಗೂ ಮಕ್ಕಳ ರಕ್ಷಣೆ ವಿಚಾರ ಇದಾಗಿದ್ದು, ಕೂಡಲೇ ಈ ಪ್ರಕರಣದ ತನಿಖೆಗೆ ಆದೇಶಿಸಿ, ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ರಾಜೀನಾಮೆ ಕೊಡುವವರೆಗೆ ಮೊಟ್ಟೆ

 

‘ಇನ್ನು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ರಾಜೀನಾಮೆ ನೀಡುವವರೆಗೂ ಸಚಿವರ ಮನೆಗೆ ನಿತ್ಯ ಮೊಟ್ಟೆ ನೀಡುವ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ” ಎಂದು ಕುಸುಮಾ ಹನುಮಂತರಾಯಪ್ಪ ಅವರು ಎಚ್ಚರಿಸಿದರು.

“ಇಂದು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದು ನಾವೆಲ್ಲರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ರಾಜ್ಯದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆಯಾದ ಶಶಿಕಲಾ ಜೊಲ್ಲೆ ಅವರು ಗರ್ಭಿಣಿಯರು ಹಾಗೂ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ನೀಡಲಾಗುವ ಮೊಟ್ಟೆಯಲ್ಲಿ ಹಣ ಮಾಡಲು ಮುಂದಾಗಿರುವುದು ರಾಜ್ಯವೇ ತಲೆತಗ್ಗಿಸುವಂತೆ ಮಾಡಿರುವುದು ದುರಂತ” ಎಂದು ಕುಸುಮಾ ಅವರು ಟೀಕಿಸಿದರು.

ಮಾತೃಪೂರ್ಣ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದು, ಅಲ್ಪ ಪ್ರಮಾಣದ ಮಾತೃತ್ವವೇ ಇಲ್ಲದಂತೆ ನಮ್ಮ ಸಚಿವರು ನಡೆದುಕೊಂಡಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರದಲ್ಲಿ ಭ್ರಷ್ಟಾಚಾರ ನಡೆಸುವ ಇವರಿಗೆ ಕಿಂಚಿತ್ತೂ ಕರುಣೆ ಇಲ್ಲವೇ? ಅದೇ ಸಚಿವಾಲಯ ಸಮೀಕ್ಷೆ ಮಾಡಿ ರಾಜ್ಯದಲ್ಲಿ ನಾಲ್ಕೂವರೆ ಲಕ್ಷದಷ್ಟು ಮಕ್ಕಳು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲೇ ಒಂದೂವರೆ ಲಕ್ಷದಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಬಂದಿದೆ. ಈ ಸಂದರ್ಭದಲ್ಲಿ ಎಲ್ಲವನ್ನೂ ತಿಳಿದು ಟೆಂಡರ್ ನೀಡಲು ಕೋಟ್ಯಂತರ ರೂಪಾಯಿ ಹಣ ಪಡೆಯುವುದು ಸರಿಯೇ? ಆ ರೀತಿ ಹಣ ಕೊಟ್ಟು ಟೆಂಡರ್ ಪಡೆದವರು ನಿಜಕ್ಕೂ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಮೊಟ್ಟೆ ನೀಡುತ್ತಾರಾ? ‘ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ’ ಎಂಬ ಗಾದೆ ಮಾತಿನಂತೆ ಇವರು ನಡೆದುಕೊಳ್ಳುತ್ತಿದ್ದಾರೆ. ಈ ರೀತಿ ಮನುಷ್ಯತ್ವ ಇಲ್ಲದಂತೆ ವರ್ತಿಸಿ ಜನರಿಗೆ ಯಾವ ಮಾದರಿಯಾಗಲು ಹೊರಟಿದ್ದಾರೆ? ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬದಾಗಿನಿಂದ ಅತ್ಯಾಚಾರ, ಅನಾಚಾರ, ಕೊಳ್ಳೆ ಹೊಡೆಯುವುದೇ ಆಗಿದೆ. ಜನಪರ ಕಾರ್ಯಕ್ರಮ ನೀಡುತ್ತಿಲ್ಲ’ ಎಂದು ಕುಸುಮಾ ಅವರು ಟೀಕಿಸಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ