Home / ರಾಜಕೀಯ / ಸಹಕಾರದಲ್ಲಿ ಕುಟುಂಬ ರಾಜಕೀಯಕ್ಕೆ ಬ್ರೇಕ್‌

ಸಹಕಾರದಲ್ಲಿ ಕುಟುಂಬ ರಾಜಕೀಯಕ್ಕೆ ಬ್ರೇಕ್‌

Spread the love

ಸಹಕಾರ ಪದವೇ ಒಂದು ಆಕರ್ಷಣೆ. ಸಹಕಾರ ಸಂಘಗಳ ಕಲ್ಪನೆಯೇ ರೋಮಾಂಚನಗೊಳಿಸುವ ವಿಚಾರವಾಗಿದೆ. ಈ ಕಲ್ಪನೆ ರೂಪಗೊಂಡಿದ್ದು ಮೊದಲಿಗೆ ಇಂಗ್ಲೆಂಡಿನಲ್ಲಿ. ವಿಶ್ವದಲ್ಲಿ ಸಹಕಾರ ಕ್ಷೇತ್ರದ ಮೂಲವೇ ಇಂಗ್ಲೆಂಡ್‌ ದೇಶವಾಗಿದೆ.

ಭಾರತದಲ್ಲಿ ಮೊಟ್ಟ ಮೊದಲಿಗೆ ಶಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ನೇತೃತ್ವದಲ್ಲಿ ಕರ್ನಾಟಕದ ಗದಗ ತಾಲ್ಲೂಕಿನ ಕಣಗಿಹಾಳದಲ್ಲಿ 1905ರಲ್ಲಿ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜನ್ಮ ತಾಳಿತು. ಏಷ್ಯಾ ಖಂಡದ ಪ್ರಥಮ ಸಹಕಾರ ಸಂಘವೆನಿಸಿದ ಈ ಸಂಘದ ಅಧ್ಯಕ್ಷರಾದ ಶಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರು ಸಹಕಾರ ಆಂದೋಲನದ ಪಿತಾಮಹ ನೆಂದೇ ಜನಜನಿತ. ಕರ್ನಾಟಕ ಸಹಕಾರ ಆಂದೋಲನದ ತೊಟ್ಟಿಲು ಎಂಬ ಖ್ಯಾತಿಗೆ ಪಾತ್ರವಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯಿದೆ- 1959 ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ಸಂಘಗಳ ಕಾಯಿದೆ-1997 ಎಂಬ ಎರಡು ಸಹಕಾರ ಕಾಯ್ದೆಗಳು ಕರ್ನಾಟಕದಲ್ಲಿ ಜಾರಿಯಲ್ಲಿವೆೆ. ಇದರಲ್ಲಿ ಸೌಹಾರ್ದ ಸಹಕಾರ ಸಂಘಗಳ ಕಾಯ್ದೆಯು ಆಡಳಿತ ಮಂಡಳಿಗೆ ಹೆಚ್ಚಿನ ಅಧಿಕಾರ ನೀಡಿದೆ. ಸದರಿ ಕಾಯಿದೆಗಳು ಕಾಲಕಾಲಕ್ಕೆ ಆಯಾ ಸಂದರ್ಭದಲ್ಲಿನ ಅಗತ್ಯತೆಗನುಗುಣವಾಗಿ ತಿದ್ದುಪಡಿಗೊಳಪಡುತ್ತಿವೆ.

ಸಹಕಾರ ಸಂಸ್ಥೆಯ ಮೌಲ್ಯವೆಂದರೆ ಸ್ವ ಸಹಾಯ, ಸ್ವ ಜವಾಬ್ದಾರಿ, ಪ್ರಜಾಸತ್ತೆ, ಸಮಾನತೆ, ಸರ್ವಸಮ್ಮತ ಹಾಗೂ ದೃಢತೆಯಾಗಿದೆ. ಈ ಮೌಲ್ಯಗಳು ಸಹಕಾರಿಗಳ ಸಂಪ್ರದಾಯವಾಗಿರಬೇಕು. ಸಹಕಾರಿಗಳಲ್ಲಿ ನಂಬಿಕೆ, ಪ್ರಾಮಾಣಿಕತೆ, ಸಾಮಾಜಿಕ ಜವಾಬ್ದಾರಿ, ನೈತಿಕತೆಯ ಮುಕ್ತ ನಡವಳಿಕೆ ಅವರ ಮೌಲ್ಯಗಳಾಗಿರಬೇಕು ಹಾಗೂ ಆ ಮೌಲ್ಯಗಳನ್ನು ಇತರರಿಗೆ ಮುಟ್ಟಿಸುವ ಮನಸ್ಸುಳ್ಳವರಾಗಿರಬೇಕು. ಆದರೆ ಸಹಕಾರ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾಗಿ ಸಹಕಾರಿಗಳು ನಡೆದುಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಅದು ಸಾಲದೆಂಬಂತೆ ಮನುಷ್ಯನಿಗೆ ಕೊರೋನ-19 ಸೋಂಕು 2020 ರಿಂದ ಕಾಡಲಾರಂಭಿಸಿ, ಸಹಕಾರ ವ್ಯವಸ್ಥೆಯ ಬುಡವನ್ನೆ ಸಡಿಲಗೊಳಿಸಿದೆ.

ಆಗಿಂದಾಗ್ಗೆ ಕರ್ನಾಟಕ ಸಹಕಾರ ಕಾಯ್ದೆಗೆ ಹಲವು ತಿದ್ದುಪಡಿ ತರಲಾಗಿದ್ದರೂ ಇನ್ನೂ ಹಲವು ಕಲಂಗಳಿಗೆ ತಿದ್ದುಪಡಿಯ ಅಗತ್ಯವಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ಇದೀಗ ವಿಧಾನ ಮಂಡಲ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ 2021ನ್ನು ದಿನಾಂಕ 23-03-2021 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಸದರಿ ತಿದ್ದುಪಡಿ ಪ್ರಸ್ತಾವಗಳ ಕೆಲ ಕಲಂಗಳ ಬಗ್ಗೆ ಈ ಕೆಳಗೆ ಸಹಕಾರಿಗಳಿಗೆ ಅನುಕೂಲವಾಗುವಂತೆ ವಿವರಿಸಲು ಪ್ರಯತ್ನಿಸಲಾಗಿದೆ.
“ಪ್ರತಿನಿಧಿ’ ಎಂದರೆ, ಮಹಾ ಸಭೆಯಲ್ಲಿ ಭಾಗವಹಿ ಸುವ ಮತ್ತು ಮತ ಚಲಾಯಿಸುವ ಅಧಿಕಾರದೊಂದಿಗೆ ಇತರ ಸಹಕಾರ ಸಂಘಗಳಲ್ಲಿ ಆ ಸಹಕಾರ ಸಂಘವನ್ನು ಪ್ರತಿನಿಧಿಸಲು ಮತ್ತು ಆತ ಪ್ರತಿನಿಧಿ ಎಂದು ಯಾವುದಕ್ಕೆ ನೇಮಕವಾಗಿರುವನೋ ಆ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಅನುಮೋದಿಸಲು ಅಥವಾ ಬೆಂಬಲಿಸಲು ಮಂಡಳಿಯಿಂದ ನೇಮಕವಾದ ಸಹಕಾರ ಸಂಘದ ನಿರ್ದೇಶಕ.

ಕಲಂ 6(ಬಿ)ರಲ್ಲಿ ಸಹಕಾರ ಸಂಘಗಳ ನೋಂದಣಿ ಸಂಬಂಧ ಅರ್ಜಿದಾರರ ಸಂಖ್ಯೆ 10 ಇದ್ದುದನ್ನು (ಬಿ) ಎಲ್ಲಾ ಅರ್ಜಿದಾರರು ವ್ಯಕ್ತಿಗಳಾಗಿರುವಲ್ಲಿ, ಅರ್ಜಿದಾರರ ಸಂಖ್ಯೆಯು ಇಪ್ಪತ್ತಕ್ಕಿಂತ ಕಡಿಮೆ ಇರತಕ್ಕದ್ದಲ್ಲ ಮತ್ತು ಅರ್ಜಿದಾರರು ಒಂದೇ ಕುಟುಂಬಕ್ಕೆ ಸೇರಿರ ತಕ್ಕದ್ದಲ್ಲ ಎಂದು ತಿದ್ದುಪಡಿ ಮಾಡಲಾಗಿದೆ. ಬಹಳಷ್ಟು ಸಂದರ್ಭದಲ್ಲಿ ಸಹಕಾರ ಸಂಘಗಳನ್ನು ಖಾಸಗಿ ಟ್ರಸ್ಟ್‌ ರೂಪದಲ್ಲಿ ರೂಪಿಸಿಕೊಂಡು ಸ್ವಲಾಭ ಮಾಡಿ ಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಅರ್ಜಿದಾರರು ಒಂದೇ ಕುಟುಂಬಕ್ಕೆ ಸೇರಿರತಕ್ಕದ್ದಲ್ಲ ಎಂದು ತಿದ್ದುಪಡಿ ತಂದಿರುವುದು ಸೂಕ್ತವಾಗಿದೆ.

ಸದಸ್ಯ ಸತತ 3 ವರ್ಷಗಳ ಕಾಲ ತನ್ನ ಕರ್ತವ್ಯಗಳನ್ನು ನೆರವೇರಿಸಲು ವಿಫಲನಾದರೆ, ಸದಸ್ಯನಾಗಿರುವುದು ನಿಂತುಹೋಗತಕ್ಕದ್ದು ಎಂದು ತರ್ಕಹೀನ ಹಾಗೂ ಗೊಂದಲದ ವಿಚಾರ ಕಲಂ17(2-ಎ) ರಲ್ಲಿ ಸೇರಿಕೊಂಡಿತ್ತು. ಸದರಿ ವಿಚಾರದ ಬದಲಿಗೆ ಈ ಕೆಳಕಂಡಂತೆ ತಿದ್ದುಪಡಿ ತರಲಾಗಿದೆ.

ಯಾರೇ ವ್ಯಕ್ತಿಯು ಒಂದೇ ಬಗೆಯ ವ್ಯವಹಾರ ನಡೆಸುತ್ತಿರುವ ಎರಡು ಅಥವಾ ಹೆಚ್ಚಿನ ಸಹಕಾರ ಸಂಘಗಳಲ್ಲಿ ಸದಸ್ಯನಾಗಿರುವುದು ಅಥವಾ ಸದಸ್ಯ ನಾಗಿ ಮುಂದುವರೆಯುತ್ತಿರುವುದು ಕಂಡು ಬಂದಲ್ಲಿ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ, 2021ರ ಪ್ರಾರಂಭದ ದಿನಾಂಕದಿಂದ ತೊಂಬತ್ತು ದಿನಗಳ ಅವಧಿಯ ಒಳಗಾಗಿ ಆತನ ಆಯ್ಕೆಯ ಯಾವುದೇ ಒಂದು ಸಂಘದಲ್ಲಿ ಸದಸ್ಯತ್ವ ಉಳಿಸಿ ಕೊಳ್ಳುವುದು ಆತನಿಗೆ ಬಾಧ್ಯವಾಗಿರತಕ್ಕದ್ದು. ಹಾಗೆ ಮಾಡಲು ಆತನು ವಿಫಲನಾದರೆ, ಆತ ಹೊಸ ದಾಗಿ ಯಾವ ಸಹಕಾರ ಸಂಘಕ್ಕೆ ಸೇರಿರುವನೋ ಅದರ ಸದಸ್ಯತ್ವವು ನಿಂತು ಹೋಗುವುದೆಂದು ಭಾವಿಸತಕ್ಕದ್ದು.

ಈ ತಿದ್ದುಪಡಿಯಲ್ಲಿ ದ್ವಿಸದಸ್ಯತ್ವದ ಬಗ್ಗೆ ಇದ್ದ ಗೊಂದಲಕ್ಕೆ ತೆರೆಯೆಳೆಯುವ ಕೆಲಸವಾಗಿದೆ. ಅಂದರೆ ಒಂದೇ ಉದ್ದೇಶದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಸದಸ್ಯರಿಗೆ ಯಾವ ಸಂಘದ ಸದಸ್ಯತ್ವ ಉಳಿಸಿಕೊಳ್ಳ ಬೇಕು ಎಂಬ ನಿರ್ಧಾರ ಕೈಗೊಳ್ಳಲು ತೊಂಬತ್ತು ದಿನಗಳ ಅವಕಾಶ ಕೊಟ್ಟಿದ್ದು, ತಿದ್ದುಪಡಿ ಜಾರಿಗೆ ಬಂದ ತೊಂಬತ್ತು ದಿನಗಳ ನಂತರ ಆ ಅವಕಾಶವೂ ಇರುವು ದಿಲ್ಲ. ಮೊದಲು ಯಾವ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವರೊ ಆ ಸಂಘದ ಸದಸ್ಯತ್ವ ಮಾತ್ರ ಉಳಿಯಬಲ್ಲದು. ನಂತರ ಹೆಚ್ಚುವರಿಯಾಗಿ ಪಡೆದ ಎಲ್ಲಾ ಸಂಘಗಳ ಸದಸ್ಯತ್ವ ನಿಂತುಹೋಗುವಂತೆ ಒಂದು ಸ್ಪಷ್ಟತೆ ತಂದುಕೊಡಲಾಗಿದೆ.

ಕಲಂ 20ರಲ್ಲಿ ಮತದಾನದ ಅರ್ಹತೆ ಪಡೆ ಯಲು ಕಳೆದ ಐದು ಸಾಮಾನ್ಯ ಸಭೆಗಳ ಪೈಕಿ ಮೂರು ಸಭೆಗಳಿಗೆ ಹಾಜರಾಗುವುದು ಕಡ್ಡಾಯ ವಾಗಿತ್ತು. ಸದರಿ ನಿರ್ಬಂಧ ಸಡಿಲಿಸಿ 2 ಸಭೆಗೆ ಸೀಮಿತಗೊಳಿಸಲಾ ಗಿದೆ. ಆತನಿಗೆ ಯುಕ್ತವಾಗಿ ತಿಳಿಸಲಾದ ಕಳೆದ ಐದು ವಾರ್ಷಿಕ ಮಹಾ ಸಭೆಗಳ ಪೈಕಿ ಕನಿಷ್ಠ ಯಾವುದೇ ಎರಡು ವಾರ್ಷಿಕ ಮಹಾ ಸಭೆಗೆ ಹಾಜರಾಗಲು ವಿಫಲನಾದ ಒಬ್ಬ ಪ್ರತಿನಿಧಿ ಅಥವಾ ಒಬ್ಬ ನಿಯೋಗಿ.

ಕಲಂ 20ರಲ್ಲಿ ನಿರ್ದಿಷ್ಟಪಡಿಸಿದ ಕನಿಷ್ಠ ಸೇವೆಗಳನ್ನು 3 ನಿರಂತರ ಸಹಕಾರ ವರ್ಷಗಳಲ್ಲಿ ಬಳಸಿಕೊಳ್ಳದಿದ್ದಲ್ಲಿ ಮತದಾನದ ಹಕ್ಕನ್ನು ಕಳೆದುಕೊಳ್ಳುವ ನಿರ್ಬಂಧವನ್ನು ಸಡಿಲಿಸಿ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ಸದಸ್ಯರು ಮೂರು ವರ್ಷಗಳ ಅವಧಿಗೆ ಸರ್ವಸದಸ್ಯರ ಸಭೆ ಅಥವಾ ಮಂಡಳಿಯ ಸದಸ್ಯ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ ಎಂಬ ವಿಚಾರಹೀನ ಹಾಗೂ ಅರ್ಥಹೀನ ನಿರ್ಬಂಧವಿತ್ತು. ಅದನ್ನು ತಿದ್ದುಪಡಿ ಮಾಡಿ, “3 ವರ್ಷಗಳ’ ಎಂಬ ಪದಗಳನ್ನು “ಒಂದು ವರ್ಷದ’ ಎಂಬ ಪದಕ್ಕೆ ಬದಲಾಯಿಸಲಾಗಿದೆ.

ಮಂಡಲಿಯ ಉಳಿದಿರುವ ಪದಾವಧಿಯು ಅದರ ಮೂಲ ಪದಾವಧಿಯ ಅರ್ಧಕ್ಕಿಂತ ಕಡಿಮೆ ಇರುವಲ್ಲಿ, ಯಾವ ವರ್ಗದ ಸದಸ್ಯರಿಗೆ ಸಂಬಂಧ ಪಟ್ಟಂತೆ ಸ್ಥಾನವು ಖಾಲಿಯಾಗಿದೆಯೊ ಅದೇ ವರ್ಗದ ಸದಸ್ಯರ ಪೈಕಿ ನಾಮನಿರ್ದೇಶನ ಮಾಡುವ ಮೂಲಕ ಮಂಡಲಿಯಲ್ಲಿನ ಖಾಲಿ ಸ್ಥಾನವನ್ನು ಮಂಡಳಿಯು ಭರ್ತಿ ಮಾಡಬಹುದು ಎಂದಿರುವುದನ್ನು ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ಮಂಡಲಿಯ ಅಂತಹ ರಿಕ್ತ ಸ್ಥಾನಕ್ಕಾಗಿ ಚುನಾವಣೆ ನಡೆಯುವವರೆಗೆ, ಉದ್ಭವವಾಗುವ ತಾತ್ಕಾಲಿಕ ಸ್ಥಾನಕ್ಕೆ ಸಂಬಂಧಿಸಿದಂತೆ, ಅದೇ ವರ್ಗದ ಸದಸ್ಯರುಗಳ ಪೈಕಿ ನಾಮನಿರ್ದೇಶನದ ಮೂಲಕ ಮಂಡಲಿಯ ತಾತ್ಕಾಲಿಕ ಸ್ಥಾನವನ್ನು ಮಂಡಳಿಯು ಭರ್ತಿ ಮಾಡಬಹುದು.

ತಿದ್ದುಪಡಿಯಲ್ಲಿರುವ ವಿಚಾರ ಗೊಂದಲ ಮೂಡಿಸುವ ಸಾಧ್ಯತೆ ಇದೆ. ಕಾರಣ ಅರ್ಧ ಅವಧಿ ಮುಗಿದ ಪ್ರಕರಣಗಳಿಗೆ ಅನ್ವಯ ಮಾಡಿಕೊಳ್ಳಬೇಕೇ ಅಥವಾ ಅರ್ಧ ಅವಧಿ ಮುಗಿಯದ ಪ್ರಕರಣಕ್ಕೂ ಅನ್ವಯವಾಗುವುದೇ ಎಂಬ ಪ್ರಶ್ನೆ ಕಾಡದೆ ಇರದು.

ತಿದ್ದುಪಡಿಯಲ್ಲಿ ತಾತ್ಕಾಲಿಕ ಸ್ಥಾನವನ್ನು ಚುನಾವಣೆ ನಡೆಯುವವರೆಗೆ ಮಂಡಳಿಯು ಭರ್ತಿ ಮಾಡಬಹುದು ಎಂದಿರುವುದರಿಂದ ಅವಧಿಯ ಮೊದಲರ್ಧದಲ್ಲಿ ತೆರವಾದ ಸ್ಥಾನಕ್ಕೂ ಮಂಡಲಿ ತಾತ್ಕಾಲಿಕವಾಗಿ ನಾಮ ನಿರ್ದೇಶನ ಮಾಡಿ, ಚುನಾವಣೆ ನಡೆದ ಬಳಿಕ ನಾಮ ನಿರ್ದೇಶನ ಮಾಡಿಕೊಂಡವರನ್ನು ಬಿಡುಗಡೆಗೊಳಿಸಬೇಕೆ ಎಂಬ ಪ್ರಶ್ನೆ ಕಾಡದೆ ಇರದು. ಈ ಬಗ್ಗೆ ಸಹಕಾರ ಇಲಾಖೆ ಸ್ಪಷ್ಟ ಪಡಿಸಬೇಕಾದ ಅಗತ್ಯವಿದೆ.


Spread the love

About Laxminews 24x7

Check Also

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Spread the love ಬೆಂಗಳೂರು: ಒಂದು ತಿಂಗಳಿಂದ ನಡೆಯುತ್ತಿದ್ದ ಅಬ್ಬರದ ಪ್ರಚಾರಕ್ಕೆ ಬುಧವಾರ ತೆರೆ ಬೀಳಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ