Home / ರಾಜ್ಯ / ಉತ್ತರ ಕನ್ನಡ: ಅಶ್ಲೀಲ ವಿಡಿಯೊ ನೋಡಿದರೆ ಪ್ರಕರಣ!

ಉತ್ತರ ಕನ್ನಡ: ಅಶ್ಲೀಲ ವಿಡಿಯೊ ನೋಡಿದರೆ ಪ್ರಕರಣ!

Spread the love

ಕಾರವಾರ: ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ಲೋಡ್ ಮಾಡಿದವರಿಗೆ, ಅದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡವರಿಗೆ (ಶೇರ್) ಪೊಲೀಸ್ ಇಲಾಖೆಯಿಂದ ಬಿಸಿ ಮುಟ್ಟತೊಡಗಿದೆ. ಒಂದೊಂದೇ ಪ್ರಕರಣಗಳನ್ನು ಹುಡುಕಿ ತೆಗೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.

ಮಕ್ಕಳಿಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ, ಅಶ್ಲೀಲ ವಿಡಿಯೊಗಳನ್ನು ನೋಡುವುದೂ ಭಾರತೀಯ ದಂಡಸಂಹಿತೆಯ ಪ್ರಕಾರ ಅಪರಾಧ. ಅದರಲ್ಲೂ ಫೇಸ್‌ಬುಕ್, ವಾಟ್ಸ್‌ಆಯಪ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದು, ಡೌನ್‌ಲೋಡ್ ಮಾಡುವುದು ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ.

ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಆರು ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸುಮಾರು ಒಂದು ತಿಂಗಳ ಅವಧಿಯಲ್ಲೇ ನಾಲ್ವರು ಪೊಲೀಸರ ತನಿಖೆಗೆ ಗುರಿಯಾಗಿದ್ದಾರೆ. ಈಗಾಗಲೇ ಮೂವರ ಬಂಧನವೂ ಆಗಿದೆ. ಪ್ರಕರಣ ದಾಖಲಾದವರ ಪೈಕಿ ಕಾರವಾರ ತಾಲ್ಲೂಕಿನ ಮಾಜಾಳಿ, ಶಿರಸಿ, ಜೊಯಿಡಾದವರು ಸೇರಿದ್ದಾರೆ. ಅವರಲ್ಲಿ ಬಹುತೇಕರು ಮಧ್ಯವಯಸ್ಕರು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಪೊಲೀಸ್ ಕಾರ್ಯಾಚರಣೆ ಹೇಗೆ?: ಮಕ್ಕಳ ಅಶ್ಲೀಲ ವಿಡಿಯೊ, ಫೋಟೊಗಳನ್ನು ಎರಡು, ಮೂರು ವರ್ಷಗಳ ಹಿಂದೆ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರೂ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ ಉದಾಹರಣೆಗಳಿವೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರವು, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆಂದೇ ರಾಷ್ಟ್ರೀಯ ಅಪರಾಧ ದಾಖಲೆ ಘಟಕದ (ಎನ್‌.ಸಿ.ಆರ್‌.ಟಿ) ಅಡಿಯಲ್ಲಿ ಪ್ರತ್ಯೇಕ ತಂಡವನ್ನು ರಚಿಸಿದೆ. ದೆಹಲಿಯಲ್ಲಿರುವ ಆ ತಂಡವು ಇಡೀ ದೇಶದಲ್ಲಿ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತದೆ.

ಆರೋಪಿಗಳ ಮೊಬೈಲ್ ಫೋನ್ ಸಂಖ್ಯೆ ಆಧರಿಸಿ ತಂಡವು ಕಾರ್ಯಾಚರಣೆ ಮಾಡುತ್ತದೆ. ಸಾಮಾಜಿಕ ಜಾಲತಾಣಗಳಿಗೆ ವಿಡಿಯೊ ಅಪ್‌ಲೋಡ್ ಆಗುವ ಸಂದರ್ಭದಲ್ಲಿ ಮೊಬೈಲ್ ಇದ್ದ ಸ್ಥಳವನ್ನು ಆಧರಿಸಿ ಆ ಜಿಲ್ಲೆಗಳ ಪೊಲೀಸರಿಗೆ ಮಾಹಿತಿ ರವಾನಿಸುತ್ತದೆ. ನಂತರದ ಸಂಪೂರ್ಣ ತನಿಖೆಯು ಸ್ಥಳೀಯ ಪೊಲೀಸರ ಮೂಲಕ ಆಗುತ್ತದೆ.

‘ಸಿಮ್ ಮಾಲೀಕರ ವಿರುದ್ಧ ಪ್ರಕರಣ’: ‘ಮೊಬೈಲ್ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಒಂದುವೇಳೆ, ಅಶ್ಲೀಲ ವಿಡಿಯೊ, ಫೋಟೊ ಅಪ್‌ಲೋಡ್ ಮಾಡಿದವರು ಬೇರೆಯವರಾಗಿದ್ದರೂ ಸಿಮ್ ಖರೀದಿಸಿದವರ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ’ ಎಂದು ಕಾರವಾರದ ಸಿ.ಇ.ಎನ್ ಠಾಣೆಯ ಇನ್‌ಸ್ಪೆಕ್ಟರ್ ಸೀತಾರಾಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಶ್ಲೀಲ ವಿಡಿಯೊಗಳನ್ನು ಅಪ್‌ಲೋಡ್ ಮಾಡುವ ಹಲವು ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಬೇರೆ ಬೇರೆ ವೆಬ್‌ಸೈಟ್‌ಗಳು ಹುಟ್ಟಿಕೊಳ್ಳುತ್ತಿವೆ. ಯಾವ ಮೂಲದಿಂದ ವಿಡಿಯೊ ಬಂತು, ಮೊಬೈಲ್ ಫೋನ್ ಸಂಖ್ಯೆ ಮಾಲೀಕರೇ ನಿಜವಾಗಿಯೂ ಅಪ್‌ಲೋಡ್ ಮಾಡಿದ್ದಾರೆಯೇ ಅಥವಾ ಅವರಿಂದ ಸಿಮ್ ಪಡೆದುಕೊಂಡ ಬೇರೆಯವರು ಆರೋಪಿಗಳೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ’ ಎಂದು ಅವರು ವಿವರಿಸಿದರು.

*
ಯಾವುದೇ ಅಶ್ಲೀಲ ವಿಡಿಯೊ, ಫೋಟೊಗಳನ್ನು ನೋಡುವುದು, ಶೇರ್ ಮಾಡುವುದು ಅಪರಾಧ. ಒಂದುವೇಳೆ, ವೆಬ್‌ಸೈಟ್‌ಗಳ ಲಿಂಕ್ ಬಂದರೂ ಅವುಗಳನ್ನು ತೆರೆಯಲೇಬಾರದು.
– ಸೀತಾರಾಮ, ಇನ್‌ಸ್ಪೆಕ್ಟರ್, ಸಿ.ಇ.ಎನ್ ಠಾಣೆ


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ