ದಾವಣಗೆರೆ: ಬಡವರಿಗಾಗಿ ಮೀಸಲಿಟ್ಟ ಸೈಟ್ಗಳನ್ನು ಬೇರೆಯವರಿಗೆ ನೀಡಲು ಮುಂದಾದ ಮಹಾನಗರ ಪಾಲಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಲಿ ಜಾಗದಲ್ಲಿ ತಮ್ಮ ಗುಡಿಸಲು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ ಬಡವರಿಗೆ ಉಚಿತ ಸೈಟ್ ನೀಡುವುದಾಗಿ ಹಲವು ವರ್ಷಗಳ ಹಿಂದೆಯೇ ತಿಳಿಸಲಾಗಿತ್ತು. ಹೀಗಾಗಿ ಈ ಭಾಗದ ಜನರು ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಆದರೆ ಇವರೆಗೂ ಯಾವುದೇ ಸೈಟ್ ಜನರ ಪಾಲಾಗಿಲ್ಲ. ಹೀಗಿರುವಾಗ ಧಾರವಾಡ ಮಹಾನಗರ ಪಾಲಿಕೆ ಈ ಜಾಗವನ್ನು ಬೇರೆಯವರಿಗೆ ನೀಡಿದೆ ಎಂಬ ಸುದ್ದಿ ಸಿಕ್ಕಿದ್ದು, ಸಿಡಿದೆದ್ದ ಈ ಭಾಗದ ಜನರು ಖಾಲಿ ಜಾಗದಲ್ಲಿ ಗುಡಿಸಲು ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರ ಹಳ್ಳದ ಬಳಿ ಇರುವ ಜಾಗದಲ್ಲಿ 110 ಸೈಟ್ಗಳಿವೆ. ಈ ಸೈಟ್ಗಳನ್ನು ಇಲ್ಲಿನ ಬಡವರಿಗೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಹಂಚಿತ್ತು. ಹೀಗಾಗಿ ನಮ್ಮದೆ ಸೈಟ್ ಎಂದು ಬಹುತೇಕರು ತಿಳಿದುಕೊಂಡಿದ್ದರು. ಆದರೆ ಇತ್ತೀಚಿಗೆ ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳು ಹಣ ಪಡೆದು ಬೇರೆಯವರು, ಅದರಲ್ಲೂ ಒಂದೇ ಮನೆಯವರಿಗೆ ಮೂರು-ನಾಲ್ಕು ಸೈಟ್ ಮಾಡಿದ್ದಾರೆ. ಇದರಿಂದ ಬಡವರಿಗೆ ಸೈಟ್ ಸಿಗುವುದು ಕಷ್ಟವಾಗಿದೆ ಎಂದು ಸ್ಥಳೀಯ ನಿವಾಸಿ ಕರಿಬಸಮ್ಮ ತಿಳಿಸಿದ್ದಾರೆ.
ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರು ಇದೇ ಬಸಾಪುರ ಪ್ರದೇಶದ ಬಡವರಿಗೆ ಸೈಟ್ ನೀಡುವಂತೆ ಆದೇಶ ಮಾಡಿದ್ದರು. ಆ ಪ್ರಕಾರ ಇಲ್ಲಿನ ಜನ ಮಹಾನಗರ ಪಾಲಿಕೆಗೆ ಅರ್ಜಿ ಸಹ ಸಲ್ಲಿಸಿದ್ದರು. ಹಳೇ ಪಟ್ಟಿಯಲ್ಲಿ ಇರುವ ಯಾವುದೇ ಹೆಸರು ಹೊಸ ಪಟ್ಟಿಯಲ್ಲಿ ಇಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಇದಕ್ಕೆ ಕಾರಣ ಮಹಾನಗರ ಪಾಲಿಕೆಯ ಸಿಬ್ಬಂದಿ ಗೋವಿಂದ್ ನಾಯ್ಕ. 110 ಸೈಟ್ಗಳಿಗೆ ತಲಾ 110000 ರೂಪಾಯಿ ಎಂದು ಹಣ ಪಡೆದು ಅವರವರ ಹೆಸರಿಗೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮಾತ್ರ ಇದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ತಾಜ್ ಫೀರ್ ಆರೋಪಿಸಿದ್ದಾರೆ.
ಈ ಹಿಂದೆ ಮನೆಯಲ್ಲಿನ ಚಿನ್ನ ಹಾಗೂ ವಸ್ತುಗಳನ್ನು ಮಾರಾಟ ಮಾಡಿ ಈ ಭಾಗದ ಜನರು ಸೈಟ್ಗಾಗಿ 30 ರಿಂದ 40 ಸಾವಿರ ರೂಪಾಯಿ ನೀಡಿದ್ದಾರೆ. ಕಳೆದ 13 ವರ್ಷಗಳಿಂದ ಈ ಸೈಟ್ಗಾಗಿ ಹೋರಾಟ ಮಾಡಲಾಗುತ್ತಿದ್ದೆ. ಕೆಲವರು ಇದೇ ಸ್ಥಳದಲ್ಲಿ ಗೂಡಿಸಲು ಹಾಕಿಕೊಂಡು ಜೀವನ ಸಹ ನಡೆಸುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅಧಿಕಾರಿಗಳು ಶಾಮೀಲಾಗಿ ಬೇಕಾದವರಿಗೆ ಸೈಟ್ ಮಾಡಿದ್ದು, ಸ್ಥಳೀಯರನ್ನು ಆಕ್ರೋಶಗೊಳಿಸಿದೆ. ಆದಷ್ಟು ಬೇಗ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಬಡವರ ನೆರವಿಗೆ ದಾವಿಸಬೇಕಿದೆ.