Breaking News
Home / ಜಿಲ್ಲೆ / ಬೆಂಗಳೂರು / ಸಚಿವ ಮುರುಗೇಶ್ ನಿರಾಣಿಗೆ ಬಂಪರ್ ಆಫರ್..!

ಸಚಿವ ಮುರುಗೇಶ್ ನಿರಾಣಿಗೆ ಬಂಪರ್ ಆಫರ್..!

Spread the love

ಬೆಂಗಳೂರು,ಜೂ.20- ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕನಾಗಿ ಹೊರಹೊಮ್ಮುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಸದ್ಯದಲ್ಲೇ ಮಹತ್ವದ ಹುದ್ದೆ ಲಭಿಸಲಿದೆ ಎನ್ನಲಾಗುತ್ತಿದೆ.ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರ ವರಿಷ್ಠರು ಕಳೆದ ಎರಡು ತಿಂಗಳಿನಿಂದ ಮುರುಗೇಶ್ ನಿರಾಣಿ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಸಂಘಪರಿವಾರದ ಪ್ರಮುಖರ ಜೊತೆ ನಿರಂತರ ಸಂಪರ್ಕದಲ್ಲಿರುವ ನಿರಾಣಿ ಅವರಿಗೆ ಪ್ರಮುಖ ಹುದ್ದೇಯನ್ನು ನೀಡುವ ಬಗ್ಗೆ ಪಕ್ಷದಲ್ಲಿ ಚಿಂತನ-ಮಂಥನ ನಡೆದಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವವನ್ನು ಒಂದು ವೇಳೆ ಕೇಂದ್ರ ವರಿಷ್ಠರು ಬದಲಾಯಿಸಿದರೆ ಅದೇ ಸಮುದಾಯವನ್ನು ಪ್ರತಿನಿಸುವ ನಿರಾಣಿ ಅವರನ್ನೂ ಸಹ ಉನ್ನತ ಹುದ್ದೆಗೆ ಪರಿಗಣಿಸಲಾಗಿದೆ ಎಂಬ ಮಾತು ಪಕ್ಷದೊಳಗೆ ಕೇಳಿಬರುತ್ತಿದೆ.

ಆದರೆ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ನಿರಾಣಿ ಅವರು ಪಕ್ಷ ನಿಷ್ಠೆ, ಯಡಿಯೂರಪ್ಪನವರ ನಾಯಕತ್ವಕ್ಕೆ ಬೆಂಬಲ ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ದ ಎನ್ನುವ ಮೂಲಕ ಗುಟ್ಟು ರಟ್ಟು ಮಾಡುತ್ತಿಲ್ಲ.ಜೊತೆಗೆ ವಿವಾದದಿಂದಲೂ ದೂರ ಇರುವ ಅವರು ಮುಖ್ಯಮಂತ್ರಿ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವತ್ತ ದೃಷ್ಟಿ ಹರಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ನಂತರ ಕೆಲವು ಅಮೂಲಾಗ್ರ ಬದಲಾವಣೆ, ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿರುವುದು ಕೂಡ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ.ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬಂದಾಗ ಅವರನ್ನು ಸಂಪುಟದಿಂದ ಕೈಬಿಟ್ಟರೂ ಕೂಡ ಯಾವುದೇ ರೀತಿಯ ಸಣ್ಣ ಅಸಮಾಧಾನವನ್ನೂ ವ್ಯಕ್ತಪಡಿಸಿರಲಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ ಹಾಗೂ ಯಡಿಯೂರಪ್ಪನವರ ಬೆನ್ನಿಗೆ ನಿಂತು ಸ್ವಾಮಿನಿಷ್ಠೆ ತೋರಿದ್ದರು.

ಪಂಚಮ ಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆ ಬಂದಾಗಲೂ ಸರ್ಕಾರಕ್ಕೆ ಎಲ್ಲಿಯೂ ಕೂಡ ಮುಜುಗರಕ್ಕೆ ಸಿಲುಕದಂತೆ ಅತ್ಯಂತ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದರು.ಇದೀಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬರುತ್ತಿದೆ.

ಒಂದು ಕಡೆ ಯಡಿಯೂರಪ್ಪನವರನ್ನು ಬದಲಾಯಿಸಿ ಬೇರೊಬ್ಬರಿಗೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ಬರುವ ಆಗಸ್ಟ್ ತಿಂಗಳಾಂತ್ಯದೊಳಗೆ ವರಿಷ್ಠರು ನಾಯಕತ್ವ ಬದಲಾವಣೆ ಕುರಿತಂತೆ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದಿಂದ ಸುಮಾರು 13ಕ್ಕೂ ಹೆಚ್ಚು ಶಾಸಕರು,ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು ಇದ್ದಾರೆ. ಆ ಸಮುದಾಯಕ್ಕೂ ಒಂದು ಅವಕಾಶ ಸಿಗಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ.

ಯಡಿಯೂರಪ್ಪ ಅಕಾರದಿಂದ ಕೆಳಗಿಳಿದರೆ ಅದೇ ಸಮುದಾಯದ ನಿರಾಣಿ ಅವರಿಗೆ ಪಟ್ಟ ಕಟ್ಟಿ ಪಕ್ಷಕ್ಕೆ ಭದ್ರವಾಗಿರುವ ವೀರಶೈವ ಲಿಂಗಾಯಿತ ಸಮುದಾಯದ ಮತಗಳನ್ನು ಉಳಿಸಿಕೊಳ್ಳಲು ಬಿಜೆಪಿ ವರಿಷ್ಠರು ತಮ್ಮದೇ ಆದ ಲೆಕ್ಕಾಚಾರ ಹೆಣೆದಿದ್ದಾರೆ.

# ಮುರುಗೇಶ್ ನಿರಾಣಿ ರಾಜಕೀಯ ಹಾದಿ:
ಮುರುಗೇಶ್ ನಿರಾಣಿ 30ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. 30ವರ್ಷದ ಹಿಂದೆ ಬಿ ಎಸ್ ಯಡಿಯೂರಪ್ಪರೊಂದಿಗೆ ಆತ್ಮೀಯತೆ ಬೆಳೆದು,ಅವರ ರಾಜಕೀಯ ಗರಡಿಯಲ್ಲಿ ಮುರುಗೇಶ್ ನಿರಾಣಿ ಪಳಗಿದ್ದಾರೆ.ಹೀಗಾಗಿ ಬಿ ಎಸ್ ಯಡಿಯೂರಪ್ಪ ಆಪ್ತ ಶಾಸಕರಲ್ಲಿ ಮುರುಗೇಶ್ ನಿರಾಣಿ ಪ್ರಥಮರು.

ಪಂಚಮಸಾಲಿ ಲಿಂಗಾಯತ ಕೋಟಾದಡಿ ಸಚಿವ ಸ್ಥಾನ ಲಭಿಸುತ್ತಿದ್ದು, ಬೀಳಗಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ,ಎರಡನೇ ಬಾರಿಗೆ ಸಚಿವರಾಗುತ್ತಿದ್ದಾರೆ.ಇನ್ನು 1993ರಿಂದ 2000ವರೆಗೆ ಮುರುಗೇಶ್ ನಿರಾಣಿ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜಕಾರಣದೊಂದಿಗೆ ಕೈಗಾರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮುರುಗೇಶ್ ನಿರಾಣಿ, ಎಂ ಆರ್ ಎನ್ (ನಿರಾಣಿ) ಉದ್ಯಮ ಸಂಸ್ಥೆ ಸ್ಥಾಪಿಸಿ, ಕೈಗಾರಿಕೆ, ಜೊತೆಗೆ ಶೈಕ್ಷಣಿಕ, ಸಾಮಾಜಿಕ ಚಟುವಟಿಕೆ ಮಾಡುತ್ತಿದ್ದಾರೆ. ಸದ್ಯ 6ಸಕ್ಕರೆ ಕಾರ್ಖಾನೆ,1ಸಿಮೆಂಟ್ ಕಾರ್ಖಾನೆ ಒಡೆತನಹೊಂದಿದ್ದು, ವಿಜಯ್ ಸೌಹಾರ್ದ ಸಹಕಾರಿ ಬ್ಯಾಂಕ್, ತೇಜಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸ್ಥಾಪಿಸಿದ್ದು, ಕೈಗಾರಿಕೆಯಲ್ಲಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ.

# ನಿರಾಣಿ ಸಚಿವರಾಗಿ ಸೇವೆ..!
2008ರಿಂದ 2013-14ವರೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಅವರ ಮುಖ್ಯಮಂತ್ರಿ ಅವಯಲ್ಲೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ 2010-11ರಲ್ಲಿ ರಾಜ್ಯದಲ್ಲಿ ಎರಡು ಬಾರಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿ, ಕೈಗಾರಿಕೆ ಕ್ಷೇತ್ರದಲ್ಲಿ ಸಾಧನೆ ಅಮೂಲಾಗ್ರ ಬದಲಾವಣೆಗೆ ಕಾರಣರಾಗಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ