Home / ಜಿಲ್ಲೆ / ಬೆಂಗಳೂರು / ದಿಗ್ಗಜನಿಲ್ಲದ SRS ಟ್ರಾವೆಲ್ಸ್ ವಾರಸುದಾರನಿಲ್ಲದೆ ಎದುರಾಯ್ತು ಸಂಕಷ್ಟ?

ದಿಗ್ಗಜನಿಲ್ಲದ SRS ಟ್ರಾವೆಲ್ಸ್ ವಾರಸುದಾರನಿಲ್ಲದೆ ಎದುರಾಯ್ತು ಸಂಕಷ್ಟ?

Spread the love

ಬೆಂಗಳೂರು, ಜೂನ್ 20: ಏಷ್ಯಾ ಖಂಡದಲ್ಲಿಯೇ ಅತಿ ದೂರ ಪ್ರಯಾಣ ಸೇವೆ ಒದಗಿಸಿದ ಹೆಮ್ಮೆಯ ಸಂಸ್ಥೆ ಒಬ್ಬ ಕನ್ನಡಿಗ ಕಟ್ಟಿದ ಎಸ್‌ಆರ್‌ಎಸ್‌ ಟ್ರಾವೆಲ್ಸ್ ದು. ದಕ್ಷಿಣ ಭಾರತದ ದೈತ್ಯ ಸಾರಿಗೆ ಸೇವೆಯ ಕಂಪನಿ ಎಸ್‌ಆರ್‌ಎಸ್‌. ಸಾಮಾನ್ಯ ಸೇವೆಯಿಂದ ಐಶರಾಮಿ ಸೇವೆ ಒದಗಿಸುವ ಎಸ್‌ಆರ್‌ಎಸ್ ಟ್ರಾವೆಲ್ಸ್ ದಿಗ್ಗಜ ಕಳೆದುಕೊಂಡ ಬಳಿಕ ವಾರಸುದಾರನಿಲ್ಲದೇ ಅನಾಥವಾಗುವ ಹಾದಿ ಹಿಡಿದಿದೆ.

ಎಸ್‌ಆರ್‌ಎಸ್‌ ದೈತ್ಯ ಕಂಪನಿ ಹುಟ್ಟು ಹಾಕಿದ ಮಾಗಡಿ ಮೂಲದ ಕೆ.ಟಿ ರಾಜಶೇಖರ್ ಅವರನ್ನು ಕೊರೊನಾ ಸೋಂಕು ಒಂದು ತಿಂಗಳ ಹಿಂದೆ ಬಲಿ ಪಡೆದಿತ್ತು. ಅದಾದ ನಂತರ ಸಂಸ್ಥೆಯಲ್ಲಿ ಸಾಕಷ್ಟು ರಹಸ್ಯ ಬೆಳವಣಿಗೆಗಳು ನಡೆದಿವೆ. ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದ ವ್ಯಕ್ತಿ ಕಟ್ಟಿದ ದಕ್ಷಿಣ ಭಾರತದ ದೈತ್ಯ ಟ್ರಾವೆಲ್ಸ್ ಕಂಪನಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಎಂಥವರಿಗೂ ನೋವು ತರಿಸುತ್ತದೆ. ದಕ್ಷಿಣದ ರಾಜ್ಯಗಳಲ್ಲಿ ಹಗಳಿರುಳು ಸೇವೆ ಒದಗಿಸಿರುವ ಎಸ್‌ಆರ್‌ಎಸ್ ಸಂಸ್ಥೆ ಭವಿಷ್ಯದಲ್ಲಿ ಏನಾಗಲಿದೆಯೋ ಎಂಬ ಆತಂಕ ಮೂಡಿಸಿದೆ.

ಬುಕ್ಕಿಂಗ್ ಏಜೆಂಟ್ ನಿಂದ 5000 ಸಾವಿರ ಬಸ್: ಕೆ.ಟಿ. ರಾಜಶೇಖರ್ ಕೃಷಿಕ ಕುಟುಂಬದ ಹಿನ್ನೆಲೆಯುಳ್ಳವರು. ಆಟೋ ಮೊಬೈಲ್ ಕ್ಷೇತ್ರದಲ್ಲಿ ಡಿಪ್ಲೋಮಾ ಮಾಡಿದ್ದ ರಾಜಶೇಖರ್ ಬದುಕಿಗಾಗಿ ಬೆಂಗಳೂರಿನಲ್ಲಿ ಟ್ರಾವೆಲ್ ಏಜೆಂಟ್ ಆಗಿದ್ದರು. ಟಿಕೆಟ್ ಬುಕ್ಕಿಂಗ್ ಕೌಂಟರ್ ಮೂಲಕ ಟ್ರಾವೆಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಕೆ.ಟಿ. ರಾಜಶೇಖರ್ 1971 ರಲ್ಲಿ ಒಂದು ಬಸ್ ರಾತ್ರಿ ಸೇವೆ ಆರಂಭಿಸುವ ಮೂಲಕ ಸಾರಿಗೆ ಉದ್ಯಮಕ್ಕೆ ಕಾಲಿಟ್ಟರು. ಇವತ್ತು ರಾಜ್ಯದ ಪಾಲಿನ ದಿಗ್ಗಜ ಟ್ರಾವೆಲ್ ಕಂಪನಿ. ಬರೋಬ್ಬರಿ ಐದು ಸಾವಿರ ಬಸ್ ಗಳು ಇವೆ.

ಬಹುತೇಕ ಬಸ್ ಗಳು ಮಲ್ಟಿ ಆಕ್ಸಲ್ ಐಷಾರಾಮಿ ಬಸ್‌ಗಳು. ಏಷ್ಯಾದಲ್ಲಿಯೇ ಬೆಂಗಳೂರಿನಿಂದ ಅಜ್ಮೀರ್‌ವರೆಗೂ ಅತಿ ದೊಡ್ಡ ಬಸ್ ಸೇವೆ ಆರಂಭಿಸಿದ ಏಕೈಕ ಸಂಸ್ಥೆ ಎಸ್‌ಆರ್‌ಎಸ್‌. ಮಹಾರಾಷ್ಟ್ರ, ಗುಜರಾತ್, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಗೋವಾ, ಪಾಂಡಿಚೆರಿ, ಕರ್ನಾಟಕದಲ್ಲಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಬಸ್ ಸೇವೆ ಲಭ್ಯವಿದೆ. ಇಂತಹ ದೈತ್ಯ ಟ್ರಾವೆಲ್ ಕಂಪನಿ ಕಟ್ಟಿದ ಕೆ.ಟಿ. ರಾಜಶೇಖರ್ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಅಂದಿನಿಂದ ಎಸ್‌ಆರ್‌ಎಸ್‌ ವಾರಸದಾರನಿಲ್ಲದೇ ಸಂಕಷ್ಟ ಎದುರಿಸುತ್ತಿದೆ.

ಇದ್ದ ಮಗಳು ಕಥೆ ಬೇರೆ: ಕೆ.ಟಿ. ರಾಜಶೇಖರ್ ಗೆ ಗಂಡು ಮಕ್ಕಳು ಇಲ್ಲ. ಇದ್ದ ಹೆಣ್ಣು ಮಗಳನ್ನು ಗಂಡು ಮಗು ಎಂದು ಸಾಕಿದ್ದರು. ಸೂಕ್ತ ವರನನ್ನು ನೋಡಿ ಮದುವೆ ಮಾಡಿಸಿದ್ದರು. ಆಕೆಯದ್ದು ಪ್ರೇಮ ವಿಚಾರವಾಗಿ ಕೌಟುಂಬಿಕ ಜೀವನವೇ ಹಾದಿ ತಪ್ಪಿದೆ. ಸದ್ಯದ ಸ್ಥಿತಿಯಲ್ಲಿ ಆಕೆ ತನ್ನ ತಂದೆ ಕಟ್ಟಿ ಬೆಳೆಸಿದ ಎಸ್‌ಆರ್‌ಎಸ್‌ ಸಂಸ್ಥೆ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನು ಎಸ್‌ಆರ್‌ಎಸ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ಆಂಧ್ರ ಪ್ರದೇಶ ಮೂಲದ ಮಹಿಳೆಯೊಬ್ಬಳು ರಾಜಶೇಖರ್ ಅವರ ಸಮೀಪವರ್ತಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಅವರೇ ಪೂರ್ಣ ಅಧಿಕಾರ ಚಲಾವಣೆ ಮಾಡುತ್ತಿದ್ದಾರೆ. ವಾರ್ಷಿಕ 700 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದ ಎಸ್‌ಆರ್‌ಎಸ್‌ ಕಂಪನಿ ಸಾವಿರಾರು ಮಂದಿಗೆ ಅನ್ನ ನೀಡಿತ್ತು. ಚಾಲಕ, ನಿರ್ವಾಹಕ ಟಿಕೆಟ್ ಬುಕ್ಕಿಂಗ್ ಏಜೆಂಟರು ಟೂರ್ ಏಜೆಂಟರು ಹೀಗೆ ಸಾವಿರಾರು ಮಂದಿ ಅನ್ನ ಸಂಪಾದನೆ ಮಾಡುತ್ತಿದ್ದರು. ಆದರೆ ಈಗ ಸಂಸ್ಥೆಯ ಆಸ್ತಿ ಮತ್ತು ಸಂಪತ್ತಿನ ಮೇಲೆ ಹಲವರ ಕಣ್ಣು ಬಿದ್ದು ಸಾಕಷ್ಟು ಗುಪ್ತ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಆ ಸಂಸ್ಥೆಯ ಸಿಬ್ಬಂದಿ ಮಾಹಿತಿ ನೀಡಿದರು.

ಬ್ಯಾಂಕ್‌ಗಳಿಗೆ ನಡುಕ: ಇನ್ನು ಎಸ್‌ಆರ್‌ಎಸ್ ಸಂಸ್ಥೆ ಕೇಳಿದ ಕೂಡಲೇ ಕೋಟಿ ಕೋಟಿ ಕೋಟಿ ಸಾಲ ನೀಡಿದ ಬ್ಯಾಂಕ್‌ಗಳು ಇದೀಗ ತಲೆ ಮೇಲೆ ಕೈ ಇಟ್ಟು ಕೂತಿವೆ. ಎಸ್‌ಆರ್‌ಎಸ್‌ ಸಂಸ್ಥೆಗೆ ಸೇರಿದ ಸಾಕಷ್ಟು ಅಸ್ತಿಗಳು ಇವೆ. ಸಿಕ್ಕ ಸಿಕ್ಕಲ್ಲಿ ಜಮೀನು ಇದೆ. ಅನೇಕ ಜಿಲ್ಲೆ, ರಾಜಧಾನಿ ಕೇಂದ್ರಗಳಲ್ಲಿ ಸ್ವಂತ ಜಾಗಗಳಿವೆ. ಎಸ್‌ಆರ್‌ಎಸ್‌ ನಂಬಿ ನೂರಾರು ಕೋಟಿ ಸಾಲ ನೀಡಿದ್ದ ಬ್ಯಾಂಕ್‌ಗಳು ಇದೀಗ ವ್ಯವಸ್ಥಾಪಕ ನಿರ್ದೇಶಕ ಇಲ್ಲದೇ ವಸೂಲಿ ಮಾಡುವ ಬಗ್ಗೆ ಆತಂಕಕ್ಕೆ ಒಳಗಾಗಿವೆ. ಸಾಲ ಕೊಟ್ಟ ಬ್ಯಾಂಕ್ ಅಧಿಕಾರಿಗಳು ನಿದ್ದೆ ಕೆಟ್ಟಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಟ್ರಾವೆಲ್ ಸಂಸ್ಥೆ ಮಾಲೀಕರೊಬ್ಬರು ವಿವರ ನೀಡಿದ್ದಾರೆ. ಕೆ.ಟಿ ರಾಜಶೇಖರ್ ಇಳಿ ವಯಸ್ಸಿನಲ್ಲೂ ಎಲ್ಲವನ್ನೂ ಒಬ್ಬರೇ ನಿಭಾಯಿಸುತ್ತಿದ್ದರು. ಅವರ ಸಾವಿನ ಬಳಿಕ ರಾಜಶೇಖರ್ ಸಮೀಪವರ್ತಿಯಾಗಿದ್ದ ಆಂಧ್ರ ಪ್ರದೇಶ ಮೂಲದ ಮಹಿಳೆ ಸಂಸ್ಥೆಗೆ ಒಡತಿಯಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನು ಆಗಲಿದೆಯೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ