Breaking News
Home / ಜಿಲ್ಲೆ / ಬೆಂಗಳೂರು / ಕಮಿಷನ್‌ ಪಡೆದ ಆರೋಪ ; ಶಾಸಕ ರವಿ ಸುಬ್ರಮಣ್ಯ ವಿರುದ್ದ ಪೋಲೀಸ್‌ ದೂರು

ಕಮಿಷನ್‌ ಪಡೆದ ಆರೋಪ ; ಶಾಸಕ ರವಿ ಸುಬ್ರಮಣ್ಯ ವಿರುದ್ದ ಪೋಲೀಸ್‌ ದೂರು

Spread the love

ಬೆಂಗಳೂರು: ‘ಉಚಿತವಾಗಿ ನೀಡಬೇಕಾದ ಕೋವಿಡ್‌ ಲಸಿಕೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಬಸವನಗುಡಿ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಅವರಿಗೆ ಶನಿವಾರ ದೂರು ನೀಡಿದ್ದಾರೆ.

‘ಲಸಿಕೆ’ ಪಡೆಯುವ ಬಗ್ಗೆ ವಿಚಾರಿಸಲು ಹೊಸಕೆರೆಹಳ್ಳಿಯ ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ಮಾಡಿರುವ ವೆಂಕಟೇಶ್‌, ಅಲ್ಲಿನ ಸಿಬ್ಬಂದಿಜೊತೆ ಮಾತನಾಡಿದ ಆಡಿಯೊ ತುಣುಕನ್ನೂ ದೂರಿನ ಜೊತೆ ಒದಗಿಸಿದ್ದಾರೆ. ಮಾತುಕತೆ ನಡುವೆ ರವಿ ಸುಬ್ರಹ್ಮಣ್ಯ ಹೆಸರು ಪ್ರಸ್ತಾಪವಾಗಿದೆ. ಈ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ. ‘ನನಗೆ ಮತ್ತು ಮಗನಿಗೆ ಲಸಿಕೆ ಬೇಕಿತ್ತು’ ಎಂದು ವೆಂಕಟೇಶ್, ನಗರದ ಎ.ವಿ. (ಅನುಗ್ರಹ ವಿಠ್ಠಲ್) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದ್ದಾರೆ. ಸಿಬ್ಬಂದಿ, ‘ನೋಂದಣಿ ಮಾಡಿಕೊಳ್ಳಿ. ಸಂದೇಶ ಬಂದರೆ ಬನ್ನಿ. ಶಾಸಕ ರವಿ ಸುಬ್ರಹ್ಮಣ್ಯ ಕಚೇರಿ ಅಥವಾ ವಾಸವಿ ಆಸ್ಪತ್ರೆಯಿಂದ ಅನುಮತಿ ಕೊಡುತ್ತಾರೆ. ಅದನ್ನು ತೆಗೆದುಕೊಂಡು ಬನ್ನಿ. ಲಸಿಕೆಗೆ ₹ 900ಶುಲ್ಕವಿದೆ. ಆ ದುಡ್ಡು ನಮಗೆ ಬರುವುದಿಲ್ಲ. ಅದು ರವಿ ಸುಬ್ರಹ್ಮಣ್ಯ ಕಚೇರಿಗೆ ಹೋಗುತ್ತದೆ. ನಮಗೆ ಇನ್ನು ಲಸಿಕೆ ಬಂದಿಲ್ಲ. ಅವರ ಕಡೆಯವರೇ ಆಸ್ಪತ್ರೆಗೆಬಂದು ಲಸಿಕೆ ಹಾಕಿ ಹೋಗುತ್ತಿದ್ದಾರೆ. ಅವರೇ ಮಾರ್ಕೆಟ್ ಸಹ ಮಾಡುತ್ತಿದ್ದಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿ ಸಹ ಹಣ ಕೊಟ್ಟು ಲಸಿಕೆ ಹಾಕಿಸಿಕೊಂಡಿದ್ದೇವೆ’ ಎಂದಿರುವುದು ಆಡಿಯೊದಲ್ಲಿದೆ.

‘ಸರ್ಕಾರದ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ. ನಿಮಗೆ ಹೇಗೆ ಲಸಿಕೆ ಸಿಕ್ಕಿತು. ಬಿಬಿಎಂಪಿಯವರು ಉಚಿತವಾಗಿ ಲಸಿಕೆ ಕೊಡುತ್ತಿದ್ದಾರಲ್ಲ. ಜೊತೆಗೆ, ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಹಣ ಏಕೆ ಪಡೆಯುತ್ತಿದ್ದೀರಾ. ನಾವು ಬಡವರು. ನಿಗದಿತ ದರ ಪಡೆಯಿರಿ’ ಎಂದು ಸಾಮಾಜಿಕ ಕಾರ್ಯಕರ್ತ ಕೋರಿದ್ದರು. ಅದಕ್ಕೆ ಸಿಬ್ಬಂದಿ, ‘ಆಗುವುದಿಲ್ಲ ಸರ್. ಬಿಬಿಎಂಪಿಯವರಿಂದಲೇ ಇಲ್ಲಿ ಲಸಿಕೆ ಹಾಕಲಾಗುತ್ತಿದೆ. ಶಾಸಕರ ಅನುಮತಿ ತೆಗೆದುಕೊಂಡು ಬನ್ನಿ’ ಎಂದು ಕರೆ ಕಡಿತಗೊಳಿಸಿದ್ದಾರೆ.

ಡಿಸಿಪಿಗೂ ದೂರು: ‘ಖಾಸಗಿ ಆಸ್ಪತ್ರೆ ಕೋವಿಡ್ ಲಸಿಕೆ ಅಭಿಯಾನದ ಜಾಹೀರಾತು ನೀಡುತ್ತಿದ್ದ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರುತ್ತಿದ್ದಾರೆ ಎನ್ನಲಾದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರಿಗೆ ದೂರು ನೀಡಿದ್ದಾರೆ. ‘ಇದು ರಾಜಕೀಯ ಷಡ್ಯಂತ್ರ. ಕೆಲವರಿಗೆ ಕೆಲಸ ಮಾಡುವ ಯೋಗ್ಯತೆ ಹಾಗೂ ಅರ್ಹತೆ ಇರುವುದಿಲ್ಲ. ಅಂಥವರು ಇಂಥ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ. ಅವರಿಗೆ ನಾನು ಉತ್ತರ ಕೊಡಬೇಕಾಗಿಲ್ಲ’ ಎಂದು ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ