Breaking News
Home / Uncategorized / ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ ಸಚಿವ ಸುಧಾಕರ್ ನನ್ನು ಸಂಪುಟದಿಂದ ವಜಾ ಮಾಡಿ: ಡಿಕೆಶಿ

ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ ಸಚಿವ ಸುಧಾಕರ್ ನನ್ನು ಸಂಪುಟದಿಂದ ವಜಾ ಮಾಡಿ: ಡಿಕೆಶಿ

Spread the love

ಬೆಂಗಳೂರು, ಮೇ 14-ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಘಟನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ನಿರ್ಲಕ್ಷ್ಯದ ಕಾರಣಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಆಡಳಿತ ವೈಪಲ್ಯಗಳನ್ನು ತರಾಟೆಗೆ ತೆಗೆದುಕೊಂಡರು.

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಕೇವಲ ಮೂರು ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಘಟನೆ ನಡೆದ ದಿನ ಹೇಳಿಕೆ ನೀಡಿದ್ದರು. ಹೈಕೋರ್ಟ್ ನೇಮಿಸಿದ ನ್ಯಾಯಮೂರ್ತಿಗಳಾದ ವೇಣುಗೋಪಾಲ್, ಕೇಶವ ನಾರಾಯಣ ಹಾಗೂ ನಿವೃತ್ತ ಅಧಿಕಾರಿ ರಮೇಶ್ ಅವರ ಸಮಿತಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಿದ್ದು, ಅದರಲ್ಲಿ 24 ಮಂದಿ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಎಂದು ಹೇಳಿದೆ. ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿರುವ ಬಗ್ಗೆಯೂ ಉಲ್ಲೇಖಿಸಿದೆ. ಜನರಿಗೆ ಸುಳ್ಳು ಮಾಹಿತಿ ನೀಡಿದ ಸಚಿವರಾದ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಲಸಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರಿಗೆ ಮೋಸ ಮಾಡುತ್ತಿವೆ. ಅಗತ್ಯದಷ್ಟು ಲಸಿಕೆ ಪೂರೈಕೆಯಾಗದ ಕಾರಣಕ್ಕೆ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದೆ. ಅದಕ್ಕೆ ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗಳು ಖಂಡನೀಯ. ಸಿಟಿ ರವಿಗೆ ಕಾನೂನು ಗೋತ್ತಿಲ್ಲ, ಉಡಾಫೆ, ದುರಹಂಕಾರದಿಂದ ಮಾತನಾಡುತ್ತಾರೆ ಎನ್ನಬಹದು.

ಆದರೆ ಸದಾನಂದಗೌಡ ವಕೀಲರಾಗಿದ್ದವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಕೇಂದ್ರ ಕಾನೂನು ಸಚಿವರಾಗಿದ್ದರು. ಸಂವಿಧಾನ ತಿಳಿದುಕೊಂಡವ ಸದಾನಂದಗೌಡರು ಕೂಡ ಸಿ.ಟಿ.ರವಿ ಮಟ್ಟಕ್ಕೆ ಇಳಿದು ಮಾತನಾಡಿದರೆ ಇದಕ್ಕಿಂತ ಬೇಜವಾಬ್ದಾರಿ ಮತ್ತು ಜನ ದ್ರೋಹಿ ಹೇಳಿಕೆ ಮತ್ತೊಂದಿಲ್ಲ ಎಂದು ಕಿಡಿಕಾರಿದರು.

ಜನರ ಮೂಲಭೂತ ಹಕ್ಕುಗಳು ದಮನವಾದಾಗ ನ್ಯಾಯಾಲಯಗಳು ಮಧ್ಯ ಪ್ರವೇಶ ಮಾಡುತ್ತವೆ. ಉಡಾಫೆ ಮಾತನಾಡಿರುವ ಸದಾನಂದಗೌಡ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸಚಿವರಾಗಲು ಅವರು ಅರ್ಹರಲ್ಲ, ನ್ಯಾಯಾಧೀಶರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿ.ಟಿ.ರವಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರಲು ಯೋಗ್ಯರಲ್ಲ. ಅವರ ಹೇಳಿಕೆ ದುರಾಹಂಕಾರ ಹಾಗೂ ಮೂರ್ಖತನದ ಪರಮಾವಧಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕೋವಿಡ್ ವಿಷಯದಲ್ಲಿ ಯಾವುದೇ ನಿರ್ದೇಶನ ನೀಡುವ ಅಧಿಕಾರವನ್ನು ಹೈಕೋರ್ಟ್ ಹೊಂದಿಲ್ಲ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. ಈ ರೀತಿ ಹಿಂದೆ ನಾವು ಎಲ್ಲಿಯೂ ನೋಡಿರಲಿಲ್ಲ.

ಡಿ.ಕೆ.ಶಿವಕುಮಾರ್ ಮಾತನಾಡಿ, ಲಸಿಕೆ ಉತ್ಪಾದನೆಯಾಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂದು ಸದಾನಂದಗೌಡರು ಹೇಳಿದ್ದಾರೆ. ಹಾಗಿದ್ದರೆ ನಿಮಗೆ ಮತ ಹಾಕಿದ್ದ ಜನ ನೇಣು ಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಎಲ್ಲವನ್ನು ಗುಜರಾತ್ ಗೆ ರವಾನೆ ಮಾಡುತ್ತಿದೆ. ನಮ್ಮ ರಾಜ್ಯದಿಂದ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿರುವ ಸದಾನಂದಗೌಡರು ರಾಜ್ಯಕ್ಕೆ ಹೆಚ್ಚಿನ ನೆರವು ಕೊಡಿಸದೆ, 24 ಮಂದಿ ಸಂಸದರ ಜೊತೆ ಮೌನವಾಗಿ ಉಳಿದಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೈಕೋರ್ಟ್ ನ್ಯಾಯಾಧೀಶರ ಕುರಿತು ನೀಡಿರುವ ಹೇಳಿಕೆ ನ್ಯಾಯಾಂಗ ನಿಂಧನೆಯಾಗಲಿದೆ. ಸರ್ಕಾರ ವೈಪಲ್ಯವಾದಾಗ ನ್ಯಾಯಾಲಯ ಬಹಳಷ್ಟು ಬಾರಿ ಮಧ್ಯ ಪ್ರವೇಶ ಮಾಡಿ ಆದೇಶ ನೀಡಿದೆ. ತಮ್ಮ ಪಾಲಿನ ಜಬಾಬ್ದಾರಿಯನ್ಜು ಸರಿಯಾಗಿ ನಿಭಾಯಿಸದ ಬಿಜೆಪಿ ಅವರು ನ್ಯಾಯಾಂಗವನ್ನೇ ನಿಂಧಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ 12 ಸದಸ್ಯರ ಸಮಿತಿ ಮಾಡಿದೆ, ಹೈಕೋರ್ಟ್ ಕೂಡ ಪ್ರತ್ಯೇಕ ಸಮಿತಿ ಮಾಡಿದೆ. ಈ ಮೂಲಕ ಎರಡು ಸರ್ಕಾರಗಳು ವೈಪಲ್ಯ ಅನುಭವಿಸಿವೆ ಎಂದು ಆರೋಪಿಸಿದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಸರ್ಕಾರ ಪರೀಕ್ಷೆಗಳನ್ನು ಕಡಿಮೆ ಮಾಡುತ್ತಿದೆ. ಹೆಚ್ಚು ಪರೀಕ್ಷೆ ಮಾಡಿ, ಸೋಂಕನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ಸೋಂಕು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಲಾಕ್ ಡೌನ್ ಅವಧಿಯಲ್ಲಿ ಬಡ ವರ್ಗಕ್ಕೆ ಹೆಚ್ಚಿನ ಅಕ್ಕಿ ನೀಡಬೇಕು. ದುಡಿಯುವ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲು ಸರ್ಕಾರದ ಜೊತೆ ಕೈ ಜೊಡಿಸಲು ಕಾಂಗ್ರೆಸ್ ಸಿದ್ಧವಿದೆ. ಲಸಿಕೆಗಾಗಿ 100 ಕೋಟಿ ದೇಣಿಗೆ ನೀಡಲು ತಯಾರಿದ್ದೇವೆ. ಅದಕ್ಕೆ ಅವಕಾಶ ಮಾಡಿಕೊಡಿ. ವೈಯಕ್ತಿಕವಾಗಿ, ಪಕ್ಷದ ವತಿಯಿಂದ ಹಾಗೂ ಶಾಸಕರ ನಿಧಿಯಿಂದ ತಲಾ ಒಂದು ಕೋಟಿ ಸೇರಿಸಿ ಒಟ್ಟು 100 ಕೋಟಿ ನೀಡಲು ಚರ್ಚಿಸಿದ್ದೇವೆ. ಈ ಕುರಿತು ಇಂದೇ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದೇವೆ ಎಂದು ಉಭಯ ನಾಯಕರು ತಿಳಿಸಿದರು.

ಇಂದಿರಾ ಕ್ಯಾಂಟಿನ್ ನಲ್ಲಿ ಆಹಾರ ಪೊಟ್ಟಣ ವಿತರಿಸುವಾಗ ಗುರುತಿನ ಚೀಟಿ ಕೇಳುವ ಮೂಲಕ ವ್ಯಕ್ತಿಗತ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅವರು ಆರೋಪಿಸಿದರು.


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ