Home / ಜಿಲ್ಲೆ / ಬೆಂಗಳೂರು / ತಿರುಗಿ ಬಿದ್ದ ಸಚಿವಾಕಾಂಕ್ಷಿಗಳು, ಬಿಜೆಪಿಗೆ ಶುರುವಾಯ್ತು ಹೊಸ ಟ್ರಬಲ್..!

ತಿರುಗಿ ಬಿದ್ದ ಸಚಿವಾಕಾಂಕ್ಷಿಗಳು, ಬಿಜೆಪಿಗೆ ಶುರುವಾಯ್ತು ಹೊಸ ಟ್ರಬಲ್..!

Spread the love

ಬೆಂಗಳೂರು,ಜು.28- ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಉಂಟಾಗಬಹುದಾದ ಅಸಮಾಧಾನವನ್ನು ಶಮನಗೊಳಿಸಲು ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಬೆನ್ನಲ್ಲೇ, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದು, ಆಡಳಿತಾರೂಢ ಕಮಲ ಪಕ್ಷ ವಿಲವಿಲ ಎನ್ನುವಂತಾಗಿದೆ.

ಮಂತ್ರಿಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ಏಕಾಏಕಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದರಿಂದ ಶಾಸಕರಲ್ಲಿ ಅಸಮಾಧಾನ ಸ್ಫೋಟವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಬಿಳಿ ಆನೆ ಎಂದೆ ಕರೆಯಲ್ಪಡುವ ನಿಗಮ-ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಹುತೇಕ ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಪರಿಣಾಮ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಟೋಟಗೊಂಡಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವ ಹರತಾಳ್ ಹಾಲಪ್ಪ, ಶಾಸಕರಾದ ಎಂ.ಪಿ ಕುಮಾರಸ್ವಾಮಿ, ರಾಜು ಗೌಡ, ಎ.ಎಸ್. ಪಾಟೀಲ್ ನಡಹಳ್ಳಿ ಹಾಗೂ ಕಳಕಪ್ಪ ಬಂಡಿ ಅವರೂ ಕೂಡ ನೇಮಕಾತಿಗೆ ಅಸಮಾಧಾನಗೊಂಡಿದ್ದಾರೆ.

ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಚಿತ್ರದುರ್ಗದ ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರು, ನನ್ನ ನಿರೀಕ್ಷೆಯೇ ಬೇರೆ ಇತ್ತು. ನನಗೆ ನಿಗಮ ಮಂಡಳಿ ಸ್ಥಾನ ಬೇಕಾಗಿಲ್ಲ. ನನಗೆ ಅವಮಾನ ಮಾಡಲೆಂದೇ ಈ ಸ್ಥಾನ ನೀಡಲಾಗಿದೆ. ಇದು ನನಗೆ ನೋವಿನ ಸಂಗತಿ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ.

ನಾನು ಬೆಂಗಳೂರಿಗೆ ಹೋಗಿ ಮಾತನಾಡಲು ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರಿಗೆ ನೂರಾರು ಸಮಸ್ಯೆಗಳಿವೆ. 1994ರಲ್ಲೇ ನಾನು ಗೃಹಮಂಡಳಿ ಅಧ್ಯಕ್ಷನಾಗಿದ್ದವನು. ನಾನು ಕೇಳದಿದ್ದರೂ ಜೆ.ಎಚ್.ಪಟೇಲರು ನನಗೆ ಗೃಹಮಂಡಳಿ ಸ್ಥಾನ ನೀಡಿದ್ದರು.

ಈಗ ನನಗೆ ಬಹಳ ಅವಮಾನವಾಗಿದೆ, ರಾಜಕೀಯಕ್ಕೆ ಬಂದಿದ್ದೇ ತಪ್ಪು ಎಂಬ ಭಾವನೆ ಬಂದಿದೆ ಎಂದು ಸರ್ಕಾರದ ಒಂದು ವರ್ಷದ ಸಂಭ್ರಮದ ದಿನವೇ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಿರಿಯ ರಾಜಕಾರಣಿಗಳಲ್ಲಿ ಹೆಚ್ಚು ಬಾರಿ ಗೆದ್ದಿರುವರಲ್ಲಿ ನಾನೂ ಒಬ್ಬ. ನನಗೆ ಸಚಿವ ಸ್ಥಾನ ನೀಡಿ ಎಂದು ಸಾಕಷ್ಟು ಬಾರಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇನೆ. ಆದರೆ ಸಚಿವಸ್ಥಾನದ ಆಕಾಂಕ್ಷಿಯಾದ ನನಗೆ ಇವತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದು ನನಗೆ ಮಾಡಿರುವ ಅವಮಾನ. ಇದರಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ.

ನನಗೆ ಈ ತರದ ಪ್ರತಿಫಲ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಅವಮಾನ ಆಗಿರುವಾಗ ಈ ನಿಗಮ ಮಂಡಳಿ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಅವರು ಸುದ್ದಿಗೋಷ್ಠಿ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಸುರಪುರ ಶಾಸಕ ರಾಜೂಗೌಡ, ತಿರಸ್ಕರಿಸುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸದ್ಯ ಹೋಂ ಕ್ವಾರಂಟೈನ್‍ನಲ್ಲಿರುವ ಶಾಸಕರು, ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದು ನನಗೆ ತಿಳಿದಿರಲಿಲ್ಲ. ನನ್ನ ಬದಲಿಗೆ ಕ್ಷೇತ್ರದ ಮುಖಂಡರಿಗೆ ಅಧ್ಯಕ್ಷ ಸ್ಥಾನ ಕೊಡಬೇಕಾಗಿತ್ತು. ಸದ್ಯ ಈ ಬಗ್ಗೆ ಮಾತನಾಡುವುದಿಲ್ಲ. ಕ್ವಾರಂಟೈನ್ ಅವಧಿ ಮುಗಿದ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಸಿಎಂ ಯಡಿಯೂರಪ್ಪ ಅವರ ಅಂದಾಭಿಮಾನಿ ಎಂದು ಹೇಳಿರುವ ಹಾಸನ ಶಾಸಕ ಪ್ರೀತಮ್ ಗೌಡ ಅವರು, ಅರಣ್ಯ ವಸತಿ ಮತ್ತು ವಿಹಾರ ಧಾಮ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ.

ನಾನು ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿ ಅಲ್ಲ. ನನಗೆ ಈ ಸ್ಥಾನ ನೀಡಿದ್ದಕ್ಕೆ ಸಿಎಂಗೆ ಧನ್ಯವಾದ ಹೇಳುತ್ತೇನೆ. ನನ್ನ ಬದಲು ಬೇರೆ ಆಕಾಂಕ್ಷಿ ಅಥವಾ ಹಿರಿಯರಿಗೆ ನೀಡಲಿ. ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಸಿಎಂ ಯಡಿಯೂರಪ್ಪ ಹಾಕಿದ ಗೆರೆ ದಾಟಲ್ಲ. ಸರ್ಕಾರ ಇನ್ನು ಮೂರು ವರ್ಷ ಸುಭದ್ರವಾಗಿರಬೇಕು. ನನಗಿನ್ನು 38-39 ವರ್ಷ. ಇನ್ನೂ 49 ವರ್ಷದ ತನಕ ರಾಜಕಾರಣ ಮಾಡಬೇಕು ಎಂದಿದ್ದಾರೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದು, ಅಧ್ಯಕ್ಷ ಸ್ಥಾನ ಬೇಡ ಎಂದಿದ್ದಾರೆ. ಜೊತೆಗೆ ಹಾವೇರಿ ಶಾಸಕ ನೆಹರೂ ಒಲೇಕಾರ್ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಶಾಸಕ ನೆಹರು ಓಲೇಕಾರ ಅವರನ್ನು ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಗೊಳಿಸಿ ಸಿಎಂ ಆದೇಶ ಹೊರಡಿಸಿದ್ದರು.

ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಾಳೆ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಜೊತೆ ಮಾತನಾಡಿ, ಮುಂದೆ ಏನು ಮಾಡಬೇಕೆಂಬುದನ್ನು ನಿರ್ಧರಿಸುತ್ತೇನೆ. ಆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.

ಇನ್ನೊಂದೆಡೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕವಾಗಿರುವ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನಾನು ನಾಲ್ಕು ಬಾರಿ ಶಾಸಕ ಹಾಗೂ ಒಮ್ಮೆ ಸಚಿವನಾಗಿದ್ದೆ.

ನಾನು ಯಾವುದೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲು ನನ್ನ ಯಾರೂ ಸಂಪರ್ಕಿಸಿಲ್ಲ. ನಾನು ನಿಗಮ ಮಂಡಳಿಗೆ ಕಾರ್ಯಕರ್ತರ ಹೆಸರು ಸೂಚಿಸುತ್ತಿದ್ದೆ. ನನಗೆ ನಿಗಮ ಮಂಡಳಿ ಯಾಕೆ ಕೊಟ್ಟರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

# ಆದೇಶ ಹಿಂದಕ್ಕೆ:
ಬಿಜೆಪಿಯ 24 ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸಿಎಂ ಆದೇಶ ಮಾಡಿದ್ದರು. ಅದಾದ ಒಂದು ಗಂಟೆಯಲ್ಲಿಯೇ ಮತ್ತೊಂದು ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳು, ನಿಗಮ ಮಂಡಳಿಗಳ ನೇಮಕಾತಿಯಿಂದ ನಾಲ್ವರು ಶಾಸಕರನ್ನು ಕೈಬಿಟ್ಟಿದ್ದಾರೆ.

ಡಿ. ದೇವರಾಜು ಅರಸು ನಿಗಮಕ್ಕೆ ನೇಮಕ ಮಾಡಲಾಗಿದ್ದ ಚಿತ್ರದುರ್ಗದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕೆಎಸ್‍ಎಫ್‍ಸಿಗೆ ನೇಮಕ ಮಾಡಿದ್ದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕ ಮಾಡಲಾಗಿದ್ದ ಕಾಪು ಕ್ಷೇತ್ರದ ಲಾಲಾಜಿ ಆರ್.ಮೆಂಡನ್ ಹಾಗೂ ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ನೇಮಕ ಮಾಡಿದ್ದ ಬಸವರಾಜ್ ದಢೇಸೂರ್ ಅವ ನೇಮಕವನ್ನು ಯಡಿಯೂರಪ್ಪ ಹಿಂದಕ್ಕೆ ಪಡೆದಿದ್ದಾರೆ.

ಈ ನಡುವೆ 20 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡವುದರಿಂದ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ. ಸಿಪಿ ಯೋಗೇಶ್ವರ್ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಕೊಂಚ ನಿರಾಳವಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ