Breaking News
Home / ಜಿಲ್ಲೆ / ಬೆಂಗಳೂರು / ಸರ್ಕಾರದ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳು, ಅಧಿಕಾರಿಗಳಿಗೆ ಚಾಟಿ ಬೀಸಿದ ಸಿಎಂ..!

ಸರ್ಕಾರದ ಆದೇಶ ಪಾಲಿಸದ ಖಾಸಗಿ ಆಸ್ಪತ್ರೆಗಳು, ಅಧಿಕಾರಿಗಳಿಗೆ ಚಾಟಿ ಬೀಸಿದ ಸಿಎಂ..!

Spread the love

ಬೆಂಗಳೂರು,ಜು.24- ಸರ್ಕಾರದ ಆದೇಶವನ್ನು ಪಾಲನೆ ಮಾಡಲು ಮೀನಾಮೇಷ ಎಣಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಮತ್ತೆ ಚಾಟಿ ಬೀಸಿದ್ದಾರೆ.

ಒಪ್ಪಂದದಂತೆ ಖಾಸಗಿ ಆಸ್ಪತ್ರೆಯವರು ಸರ್ಕಾರಕ್ಕೆ ಈವರೆಗೂ ಕೊಟ್ಟ ಭರವಸೆಯಂತೆ ಹಾಸಿಗೆಗಳನ್ನು ನೀಡದೆ ನಮ್ಮ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ನೀಡುತ್ತಿಲ್ಲ. ಒಂದು ಹಂತದವರೆಗೂ ಸಹಿಸಿಕೊಳ್ಳಬಹುದು. ಖಾಸಗಿ ಆಸ್ಪತ್ರೆಗಳ ವರ್ತನೆ ಅತಿಯಾಗಿದೆ. ಕೂಡಲೇ ಕಾನೂನು ಕ್ರಮ ಜರುಗಿಸಿ ಎಂದು ಎಚ್ಚರಿಕೆ ಕೊಟ್ಟರು.

ಗೃಹ ಕಚೇರಿ ಕೃಷ್ಣದಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ದಕ್ಷಿಣ ವಲಯದ ಉಸ್ತುವಾರಿ ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ಕರೆದಿದ್ದ ಖಾಸಗಿ ಆಸ್ಪತ್ರೆಗಳ ಮಾಲೀಕರ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ.

ವೈದ್ಯಕೀಯ ಕಾಲೇಜುಗಳ ಮಾಲೀಕರು ಹಾಗೂ ಖಾಸಗಿ ಆಸ್ಪತ್ರೆಗಳ ಜೊತೆ ನಾಲ್ಕು ಸುತ್ತು ಸಭೆ ನಡೆಸಲಾಗಿದೆ. ಪ್ರತಿಯೊಂದು ಸಭೆಯಲ್ಲೂ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ ಎಂದು ಹೇಳುತ್ತಾರೆ. ಅದರೆ ಈವೆಗೂ ಏಕೆ ಹಾಸಿಗೆಗಳನ್ನು ಕೊಡುತ್ತಿಲ್ಲ ಎಂದು ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದರು.

ಎಷ್ಟೇ ಪ್ರಭಾವಿಗಳಾಗಿರಲಿ, ಯಾರೇ ಇರಲಿ ನೀವು ತಲೆಕೆಡಿಸಿಕೊಳ್ಳಬೇಡಿ. ಕೊನೆಯ ಸಭೆಯಲ್ಲಿ ಅವರಿಗೆ ಹಾಸಿಗೆಗಳನ್ನು ನೀಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದೆವು. ಇಷ್ಟಾದರೂ ಸರ್ಕಾರದ ಆದೇಶವನ್ನು ಪಾಲನೆ ಮಾಡದಿದ್ದರೆ ನಾವು ಕೈ ಕಟ್ಟಿ ಕೂರಬೇಕೆ? ನೀವು ಅವರ ಮೇಲೆ ಕ್ರಮ ಜರುಗಿಸುತ್ತಿಲ್ಲ ಎಂದು ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ಇನ್ನು ಕಾರಣಗಳನ್ನು ಹೇಳಬೇಡಿ. ಯಾವ ಆಸ್ಪತ್ರೆಗಳು ಹಾಸಿಗೆಗಳನ್ನು ಕೊಡುವುದಿಲ್ಲ ಎಂದು ಹೇಳುತ್ತಾರೋ ಅಂತಹ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ನಿಲ್ಲಿಸಿ.

ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಸರ್ಕಾರಕ್ಕೆ ಸಹಕಾರ ನೀಡದ ಯಾವುದೇ ಸಂಸ್ಥೆಗಳ ಮೇಲೂ ಕ್ರಮ ಜರುಗಿಸಲು ಕಾನೂನಿನಲ್ಲಿ ಅವಕಾಶವಿದೆ.

ಈಗ ಆಸ್ಪತ್ರೆಗಳಿಗೆ ವಿದ್ಯುತ್, ನೀರು ಸೇರಿದಂತೆ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಬಂದ್ ಮಾಡಲೇಬೇಕಾಗುತ್ತದೆ. ಅಷ್ಟಕ್ಕೂ ಬಗ್ಗದಿದ್ದರೆ ಆಯಾ ವಲಯಗಳಲ್ಲಿ ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳು ತಮ್ಮಗಿರುವ ಅಧಿಕಾರವನ್ನು ಚಲಾಯಿಸುವಂತೆ ಸೂಚನೆ ಕೊಟ್ಟರು.

ಇನ್ನು ಬೆಂಗಳೂರು ದಕ್ಷಿಣ ವಲಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಬಗ್ಗೆಯೂ ಸಿಎಂ ಬಿಎಸ್‍ವೈ ಅಸಮಾಧಾನ ಹೊರಹಾಕಿದ್ದಾರೆ. ನನ್ನ ನಿರೀಕ್ಷೆಗೆ ತಕ್ಕಂತೆ ಈ ವಲಯದಲ್ಲಿ ಕೊರೊನಾ ಸೋಂಕು ಹಬ್ಬುತ್ತಿರುವುದು ನಿಯಂತ್ರಣಕ್ಕೆ ಬರುತ್ತಿಲ್ಲ.

ಹಿರಿಯ ಸಚಿವರನ್ನೇ ಉಸ್ತುವಾರಿಯನ್ನಾಗಿ ನೀಡಲಾಗಿದೆ. ಅಲ್ಲದೆ ಈ ವ್ಯಾಪ್ತಿಯಲ್ಲಿ ಅತ್ಯಂತ ಜನಪರ ಕಾಳಜಿಯುಳ್ಳ ಜನಪ್ರತಿನಿಧಿಗಳು ಇದ್ದಾರೆ. ಅಧಿಕಾರಿಗಳು ಮೈ ಚಳಿ ಬಿಟ್ಟು ಕೆಲಸ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಇನ್ನು 10 ದಿನದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ನಿಯಂತ್ರಣ ಮಾಡಲೇಬೇಕು. ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ನನಗೆ ಹತ್ತು ದಿನದಲ್ಲಿ ಫಲಿತಾಂಶ ಕೊಡಿ ಎಂದು ಸಿಎಂ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ