Breaking News
Home / ಜಿಲ್ಲೆ / ಬೆಳಗಾವಿ / ಗೌರವಕ್ಕೆ ಧಕ್ಕೆಯಾಗಿರಬಹುದು, ನಮ್ಮೊಂದಿಗೆ ಬೆಂಬಲಿಗರಿದ್ದಾರೆ: ಸತೀಶ ಜಾರಕಿಹೊಳಿ

ಗೌರವಕ್ಕೆ ಧಕ್ಕೆಯಾಗಿರಬಹುದು, ನಮ್ಮೊಂದಿಗೆ ಬೆಂಬಲಿಗರಿದ್ದಾರೆ: ಸತೀಶ ಜಾರಕಿಹೊಳಿ

Spread the love

ಬೆಳಗಾವಿ: ‘ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಾಗಲಿ ಎಸ್‌ಐಟಿ ವರದಿಯನ್ನಷ್ಟೇ ನೀಡುತ್ತದೆ. ಎಫ್‌ಐಆರ್ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಎಸ್‌ಐಟಿ ರಚನೆ ಬಗ್ಗೆ ಜೆಡಿಎಸ್ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಕೆಲವು ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ ಸರಿ ಇದೆ’ ಎಂದರು.

‘ಸಿ.ಡಿ. ಪ್ರಕರಣದಿಂದ ಜಾರಕಿಹೊಳಿ ಕುಟುಂಬದ ಗೌರವಕ್ಕೆ ಸ್ಪಲ್ಪ ಮಟ್ಟಿಗೆ ಧಕ್ಕೆ ಆಗಿರಬಹುದು. ಆದರೆ, ನಮ್ಮೊಡನೆ ಅಪಾರ ಬೆಂಬಲಿಗರು ಇದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಲಿ. ಸತ್ಯಾಸತ್ಯತೆ ಹೊರಬರಲಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ಹೇಳಿದರು.

‘ನಾನು ನಿಡಗುಂದಿಗೆ ಸಂತ್ರಸ್ತ ಯುವತಿ ಹುಡುಕಿಕೊಂಡು ಹೆಲಿಕಾಪ್ಟರ್‌ನಲ್ಲಿ ಹೋಗಿದ್ದೆ ಎನ್ನುವುದು ಕೇವಲ ಊಹಾಪೋಹ’ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ವಿಳಂಬಕ್ಕೆ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿ ಇದೆ. ಆದರೆ, ಚುನಾವಣೆ ನಡೆಸಲು ಏಪ್ರಿಲ್ ಕೊನೆ ವಾರದವರೆಗೆ ಅವಕಾಶವಿದೆ. ಹೀಗಾಗಿ, ಕಾದು ನೋಡೋಣ. ದಿನಾಂಕ ಪ್ರಕಟ ನಂತರವೇ ಪಕ್ಷದ ಅಭ್ಯರ್ಥಿ ಘೋಷಿಸಲಾಗುವುದು’ ಎಂದು ತಿಳಿಸಿದರು.

‘ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿ ಅನೇಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಅನೇಕ ಮುಖಂಡರು ಪಕ್ಷ ಸೇರಲಿದ್ದಾರೆ. ಪಕ್ಷಕ್ಕೆ ಬರುವವರನ್ನು ಸೇರಿಸಿಕೊಳ್ಳಲು ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ’ ಎಂದರು.ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇದ್ದರು.

 


Spread the love

About Laxminews 24x7

Check Also

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

Spread the loveಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ