Breaking News
Home / Uncategorized / ಗೀತಾ ಶಿವರಾಜ್‌ಕುಮಾರ್ ಸಾಧಾರಣ ಮಹಿಳೆಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು: DK ಶಿವಕುಮಾರ್

ಗೀತಾ ಶಿವರಾಜ್‌ಕುಮಾರ್ ಸಾಧಾರಣ ಮಹಿಳೆಯಲ್ಲ, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು: DK ಶಿವಕುಮಾರ್

Spread the love

ಅಧಿಕೃತವಾಗಿ ಕಾಂಗ್ರೆಸ್‌ ಸೇರಲಿರುವ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಡಿಕೆ ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಕಾಂಗ್ರೆಸ್‌ ಸೇರುವುದನ್ನು ಸ್ಪಷ್ಟಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್‌ ಗೀತಾ ಅವರು ಸಾಧಾರಣ ಮಹಿಳೆ ಅಲ್ಲ, ಅವರಿಗೆ ಸೂಕ್ತ ಗೌರವ ನೀಡಬೇಕು ಎಂದು ಹೇಳಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಂಬಿ ಬರುವವರಿಗೆ ಸ್ವಾಗತ ಎಂದು ಕರೆ ಕೊಟ್ಟಿದ್ದೆವು. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬದಲಾವಣೆ ಆಗಬೇಕು ಎಂದು ಜನ ಬಯಸುತ್ತಿದ್ದಾರೆ. ಹೀಗಾಗಿ ನಾಯಕರಿಂದ ಹಿಡಿದು ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಕರ್ತರವರೆಗೂ ಯಾರಿಗೆ ಬದಲಾವಣೆ ತರಬೇಕು ಎಂಬ ಇಚ್ಛೆ ಇದೆಯೋ ಅವರಿಗೆ ಆಹ್ವಾನ ನೀಡಿದ್ದೆವು. ಸಾಮಾನ್ಯ ಜನ ಜೀವನ ನಡೆಸುವುದೇ ಕಷ್ಟವಾಗಿದೆ. ಸಣ್ಣ ಕಾರ್ಮಿಕನಿಂದ ಹಿಡಿದು, ರೈತರು, ಚಾಲಕರು, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಬದಲಾವಣೆ ಬಯಸುತ್ತಿದ್ದಾರೆ.

‘ರಾಜಕಾರಣದ ಆರಂಭದ ದಿನಗಳಲ್ಲಿ ನನ್ನನ್ನು ಗುರುತಿಸಿ, ಬೆಳೆಸಿದ ಧಿಮಂತ ನಾಯಕ ಬಂಗಾರಪ್ಪನವರನ್ನು ನಾನಿವತ್ತು ಸ್ಮರಿಸುತ್ತೇನೆ. ಬಹಳ ಚಿಕ್ಕ ವಯಸ್ಸಿನಲ್ಲೇ, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ನಾನು ಸೇರಿದಂತೆ ಬಹಳ ಯುವಕರನ್ನು ಅವರು ಆಕರ್ಷಿಸಿದ್ದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಇಲ್ಲಿವರೆಗೂ ಬಂದಿದ್ದೇನೆ. ಇವತ್ತು ಅವರ ಸುಪುತ್ರ ಮಧುಬಂಗಾರಪ್ಪ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಬಹಳ ದಿನಗಳಿಂದ ನಾನು ಅವರಿಗೆ ಗಾಳ ಹಾಕಿಕೊಂಡೇ ಬಂದಿದ್ದೆ. ಅವರ ತಂದೆ ನಮ್ಮ ಪಕ್ಷದ ಸಂಘಟನೆಗೆ ದೊಡ್ಡ ಶಕ್ತಿ ಕೊಟ್ಟಿದ್ದರು ರಾಜ್ಯದಲ್ಲಿ ಅನೇಕ ನಾಯಕರನ್ನು ಬೆಳೆಸಿ, ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವೆಲ್ಲವೂ ಶಾಶ್ವತವಾಗಿ ಉಳಿದಿವೆ ಎಂದು ಅವರು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಆಕಾಶದಿಂದ ಹನಿಯಾಗಿ ಬಿದ್ದ ಮಳೆ ನೀರು, ಹೊಳೆ, ನದಿಯಾಗಿ ಸಾಗರ ಸೇರಬೇಕು. ಅದೇ ರೀತಿ ಹುಟ್ಟಿನಿಂದಲೇ ರಕ್ತಗತ ಕಾಂಗ್ರೆಸ್ಸಿಗರಾಗಿರುವ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಗೆ ಮರಳಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಲವು ಭಿನ್ನಾಭಿಪ್ರಾಯಗಳಿಂದ ಬಂಗಾರಪ್ಪ ಅವರು ನಮ್ಮ ಪಕ್ಷ ತೊರೆದಿದ್ದರು. ಅದರ ಬಗ್ಗೆ ಈಗ ಚರ್ಚೆ ಬೇಡ. ಆಕಾಶದಿಂದ ಹನಿಯಾಗಿ ಬಿದ್ದ ನೀರು ನದಿ ಮೂಲಕ ಸಮುದ್ರ ಸೇರಲೇಬೇಕು. ಕಾಂಗ್ರೆಸ್ ಪಕ್ಷ ಕೂಡ ಸಾಗರ ಇದ್ದಂತೆ. ನಮ್ಮ ವರಿಷ್ಠರು ನಮಗೆ ಕರೆ ಮಾಡಿ, ಮಧು ಬಂಗಾರಪ್ಪ ನಿಮ್ಮನ್ನು ಬಂದು ಭೇಟಿ ಮಾಡಲಿದ್ದಾರೆ ಎಂದು ಸೂಚಿಸಿದ್ದರು. ವರಿಷ್ಠರು ಮಧುಬಂಗಾರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಅವರೂ ಕೂಡ ಘಳಿಗೆ, ಮುಹೂರ್ತದ ಬಗ್ಗೆ ಯೋಚಿಸುತ್ತಿದ್ದರು.

ಇವರ ಜತೆ ರಾಜ್ಯದ ಉದ್ದಗಲಕ್ಕೂ ಅನೇಕ ಬೆಂಬಲಿಗರು, ಜೊತೆಯಲ್ಲಿ ಕೆಲಸ ಮಾಡಿದವರು ಇದ್ದಾರೆ. 10 ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಅವರ ಎಲ್ಲ ಆಚಾರ-ವಿಚಾರಗಳು ಕಾಂಗ್ರೆಸ್ ತತ್ವ-ಸಿದ್ದಾಂತ ಆಧಾರದ ಮೇಲೆ ನಿಂತಿವೆ. ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ. ಯಾವಾಗ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಮಾತನಾಡಬೇಕಿದೆ. ಇವರು ನಮ್ಮ ವಿರೋಧ ಪಕ್ಷದ ನಾಯಕರನ್ನೂ ನಿನ್ನೆ ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಜಾರ್ಜ್ ಅವರು ಸೇರಿದಂತೆ ಅನೇಕ ಹಿರಿಯ ನಾಯಕರು ಬಂಗಾರಪ್ಪ ಅವರ ಜತೆ ಕೆಲಸ ಮಾಡಿದ್ದರು. ಅವರ ಆಶೀರ್ವಾದವೂ ಇವರಿಗೆ ಇದೆ. ಇವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಸೇರ್ಪಡೆ ದಿನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತಿಳಿಸುತ್ತೇವೆ.


Spread the love

About Laxminews 24x7

Check Also

ನೇಹಾ ಹಿರೇಮಠ ಹತ್ಯೆ ಪ್ರಕರಣ; ಎಬಿವಿಪಿ, ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಭುಗಿಲೆದ್ದ ಪ್ರತಿಭಟನೆ; ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

Spread the love ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಎಬಿವಿಪಿ ಕಾರ್ಯಕರ್ತರು, ವಿವಿಧ ಕಾಲೇಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ