Breaking News
Home / ಜಿಲ್ಲೆ / ಬೆಂಗಳೂರು / ಪಂಚಮಸಾಲಿ ಪಟ್ಟು ತಂದ ಇಕ್ಕಟ್ಟು: ಮಾರ್ಚ್ 4ರ ವರೆಗೆ ಗಡುವು

ಪಂಚಮಸಾಲಿ ಪಟ್ಟು ತಂದ ಇಕ್ಕಟ್ಟು: ಮಾರ್ಚ್ 4ರ ವರೆಗೆ ಗಡುವು

Spread the love

ಬೆಂಗಳೂರು: ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಆರಂಭಿಸಿರುವ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಪಂಚಮಸಾಲಿ ಸಮುದಾಯದ ಮಠಾಧೀಶರು ಮತ್ತು ಮುಖಂಡರ ಮನವೊಲಿಸುವ ರಾಜ್ಯ ಸರ್ಕಾರದ ಪ್ರಯತ್ನ ವಿಫಲವಾಗಿದೆ. ಮೀಸಲಾತಿ ಘೋಷಣೆಗೆ ಮಾರ್ಚ್‌ 4 ರ ಗಡುವು ನೀಡಿರುವ ಸಮುದಾಯದ ಜನರು, ನಗರದ ಮೌರ್ಯ ವೃತ್ತದಲ್ಲಿ ಧರಣಿ ಆರಂಭಿಸಿದ್ದಾರೆ.

ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಜನವರಿ 14ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಆರಂಭವಾದ ಪಾದಯಾತ್ರೆಗೆ ಅರಮನೆ ಮೈದಾನದಲ್ಲಿ ಭಾನುವಾರ ತೆರೆಬಿತ್ತು.

ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದ ಸಮುದಾಯದ ಜನರು, ‘2ಎ’ ಪಟ್ಟಿಯಲ್ಲಿ ಮೀಸಲಾತಿ ಘೋಷಿಸಲು ಒಕ್ಕೊರಲಿನ ಧ್ವನಿ ಮೊಳಗಿಸಿದರು.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರಾದ ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಸಂಸದ ಸಂಗಣ್ಣ ಕರಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಹೇಶ್ ಕುಮಠಳ್ಳಿ ಸೇರಿದಂತೆ 12 ಶಾಸಕರು, ಮೇಲ್ಮನೆ ಸದಸ್ಯರು ಪಾಲ್ಗೊಂಡಿದ್ದರು.

ಮನವೊಲಿಕೆಗೆ ಯತ್ನ ವಿಫಲ: ಬೆಳಿಗ್ಗೆ 11ಕ್ಕೆ ಆರಂಭವಾದ ಸಮಾವೇಶ ಮಧ್ಯಾಹ್ನ 2.30ರವರೆಗೂ ನಡೆಯಿತು. ‘ಪಂಚಮಸಾಲಿ ಸಮುದಾಯಕ್ಕೆ ‘2ಎ’ ಮೀಸಲಾತಿ ಪಡೆಯದೇ ಬೆಂಗಳೂರಿನಿಂದ ನಿರ್ಗಮಿಸುವುದಿಲ್ಲ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹೋರಾಟದ ಮುಂಚೂಣಿಯಲ್ಲಿರುವ ನಾಯಕರು ಘೋಷಿಸಿದರು.

ಈ ಮಧ್ಯೆ ಮುಖ್ಯಮಂತ್ರಿಯವರ ಕಾವೇರಿ ನಿವಾಸದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ ಮುಂತಾದವರು ಸಭೆ ನಡೆಸಿ, ಹೋರಾಟ ಕೈಬಿಡುವಂತೆ ಸ್ವಾಮೀಜಿಯವರ ಮನವೊಲಿಸಲು ಚರ್ಚಿಸಿದರು.

ಆ ಬಳಿಕ ಸಚಿವ ಸಿ.ಸಿ.ಪಾಟೀಲ ಮತ್ತು ಮುರುಗೇಶ ನಿರಾಣಿ ಅವರು ವೇದಿಕೆಯಲ್ಲೇ ಸ್ವಾಮೀಜಿ ಅವರ ಮನವೊಲಿಸಲು ಪ್ರಯತ್ನಿಸಿದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ವರದಿ ಬರುವವರೆಗೂ ಕಾಲಾವಕಾಶ ನೀಡಿ, ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು.

ಈ ವಿಷಯವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶದಲ್ಲಿ ಪ್ರಸ್ತಾಪಿಸಿದರು. ಆದರೆ, ಜನರು ಭಾರಿ ವಿರೋಧ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಬಸನಗೌಡ ಪಾಟೀಲ ಯತ್ನಾಳ ಅವರೂ ತೀವ್ರವಾಗಿ ವಿರೋಧಿಸಿದರು. ಹೋರಾಟ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಕೂಡ ದನಿಗೂಡಿಸಿದರು.

ನಂತರ ಮಾತನಾಡಿದ ಸ್ವಾಮೀಜಿ, ‘ವಿಧಾನಸೌಧದವರೆಗೂ ಪಾದಯಾತ್ರೆಯಲ್ಲಿ ತೆರಳೋಣ. ಅಲ್ಲಿಯೇ ಮಾರ್ಚ್ 4ರವರೆಗೂ ಧರಣಿ ನಡೆಸೋಣ. ಅಂದೇ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಮೀಸಲಾತಿ ಘೋಷಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕಾಲಾವಕಾಶ ನೀಡೋಣ. ಆಗಲೂ ಘೋಷಣೆ ಹೊರಬೀಳದಿದ್ದರೆ ಅಂದಿನಿಂದಲೇ ಆಮರಣ ಉಪವಾಸ ಆರಂಭಿಸುತ್ತೇನೆ’ ಎಂದು ಪ್ರಕಟಿಸಿದರು.

ಪಾದಯಾತ್ರೆಗೆ ತಡೆ: ವಿಧಾನಸೌಧದತ್ತ ಪಾದಯಾತ್ರೆ ತೆರಳಲು ಪೊಲೀಸರು ಅನುಮತಿ ನೀಡಲಿಲ್ಲ. ಆದರೂ, ಸ್ವಾಮೀಜಿ, ಹೋರಾಟ ಸಮಿತಿಯ ಮುಖಂಡರು ಮತ್ತು ಕೆಲವು ಶಾಸಕರು ಹೊರಟರು. ಅವರನ್ನು ಹಿಂಬಾಲಿಸಿ ಹತ್ತಾರು ಸಾವಿರ ಮಂದಿ ರಸ್ತೆಗಿಳಿದರು.

ಕಾವೇರಿ ಜಂಕ್ಷನ್ ಮೇಲ್ಸೇತುವೆ ಬಳಿ ಬ್ಯಾರಿಕೇಡ್‌ ಹಾಕಿ ಪಾದಯಾತ್ರೆಗೆ ತಡೆಯೊಡ್ಡಿದ ಪೊಲೀಸರು, ರೈಲ್ವೆ ಪರ್ಯಾಯ ರಸ್ತೆ ಮೂಲಕ ಸ್ವಾತಂತ್ರ್ಯ ಉದ್ಯಾನದತ್ತ ತೆರಳಲು ಅವಕಾಶ ಕಲ್ಪಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟಗಾರರನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಸೋಮವಾರದಿಂದ ಮಾ.4 ರವರೆಗೆ ನಿತ್ಯ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಧರಣಿ ನಡೆಸುವ ನಿರ್ಧಾರ ಪ್ರಕಟಿಸಿದರು.

‘ಪ್ರತಿದಿನ ಒಂದು ಜಿಲ್ಲೆಯ ಜನರು ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಸರ್ಕಾರ ಸ್ಪಂದಿಸದಿದ್ದರೆ ಮಾ.4ರಿಂದ ಆಮರಣಾಂತ ಉಪವಾಸ ಆರಂಭಿಸುತ್ತೇನೆ’ ಎಂದು ಪುನರುಚ್ಛರಿಸಿದರು. ಬಳಿಕ ದಿನದ ಮಟ್ಟಿಗೆ ಹೋರಾಟವನ್ನು ಅಂತ್ಯಗೊಳಿಸಲಾಯಿತು. ಸೋಮವಾರ ಬೆಳಿಗ್ಗೆಯಿಂದ ಧರಣಿ ಆರಂಭಿಸಲು ಸಿದ್ಧತೆಗಳು ನಡೆದಿವೆ.

ಹೋರಾಟದಲ್ಲಿ ಒಡಕು?

ಅರಮನೆ ಮೈದಾನದಿಂದ ವಿಧಾನಸೌಧದತ್ತ ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೋರಾಟದಿಂದ ಹಿಂದೆ ಸರಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಭೆಗೂ ಗೈರಾದರು. ಪಂಚಮಸಾಲಿ ಹೋರಾಟದಲ್ಲಿ ಒಡಕು ಮೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಹೀಗೆಯೇ ಆಗುತ್ತದೆ ಎಂದು ನಮಗೆ ಗೊತ್ತಿತ್ತು. ಅವರಿಂದ ಏನೂ ಆಗದು. ನೀವು (ಬಸವ ಜಯ ಮೃತ್ಯುಂಜಯ ಸ್ವಾಮೀಜಿ) 24 ಕ್ಯಾರಟ್‌ ಚಿನ್ನ. ಅದು (ವಚನಾನಂದ ಸ್ವಾಮೀಜಿ) 12 ಕ್ಯಾರಟ್‌ ಚಿನ್ನ. ಹೋದರೆ ಹೋಗಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಮನೆಯಿಂದಲೇ ನಿಗಾ ಇರಿಸಿದ್ದ ಮುಖ್ಯಮಂತ್ರಿ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾನುವಾರ ಇಡೀ ದಿನ ಮನೆಯಲ್ಲೇ ಕುಳಿತು ಪಂಚಮಸಾಲಿ ಸಮುದಾಯದ ಸಮಾವೇಶ ಮತ್ತು ನಂತರದ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದರು. ಮುಖ್ಯಮಂತ್ರಿಯವರ ಜತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಇದ್ದರು. ಸಮಾವೇಶದ ವೇದಿಕೆಯಲ್ಲಿದ್ದ ಸಚಿವರಾದ ಸಿ.ಸಿ.ಪಾಟೀಲ ಮತ್ತು ಮುರುಗೇಶ ನಿರಾಣಿ ಜತೆ ದೂರವಾಣಿ ಸಂಪರ್ಕದಲ್ಲಿದ್ದ ಗೃಹ ಸಚಿವರು, ವೇದಿಕೆಯಲ್ಲಿನ ಬೆಳವಣಿಗೆಗಳ ಕುರಿತು ಯಡಿಯೂರಪ್ಪ ಅವರಿಗೆ ಮಾಹಿತಿ ನೀಡುತ್ತಿದ್ದರು. ಕೂಡಲ ಸಂಗಮದ ಸ್ವಾಮೀಜಿ ವಿಧಾನಸೌಧಕ್ಕೆ ಪಾದಯಾತ್ರೆ ಹೊರಡುವುದಾಗಿ ಘೋಷಿಸುತ್ತಿದ್ದಂತೆ ಸಿ.ಸಿ. ಪಾಟೀಲ, ನಿರಾಣಿ ಮತ್ತು ವೇದಿಕೆಯಲ್ಲಿದ್ದ ಕೆಲವು ಶಾಸಕರು ಮುಖ್ಯಮಂತ್ರಿ ನಿವಾಸಕ್ಕೆ ದೌಡಾಯಿಸಿದರು. ಅವರೊಂದಿಗೆ ಯಡಿಯೂರಪ್ಪ, ಬಿಕ್ಕಟ್ಟು ಶಮನದ ಕುರಿತು ಚರ್ಚಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್‌ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ

Spread the love ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ