Breaking News
Home / Uncategorized / ಕೊನೆಗೂ ಮಹಾರಾಷ್ಟ್ರದ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ! ನಮ್ಮ 28 ಸದಸ್ಯರು ಬಾಯಲ್ಲಿ ಬಡೆದುಕೊಂಡ ಗೂಟ ಕಿತ್ತುಕೊಂಡು ಕರ್ನಾಟಕದ ಪರವಾಗಿ ಘರ್ಜಿಸುವದು ಯಾವಾಗ?

ಕೊನೆಗೂ ಮಹಾರಾಷ್ಟ್ರದ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ! ನಮ್ಮ 28 ಸದಸ್ಯರು ಬಾಯಲ್ಲಿ ಬಡೆದುಕೊಂಡ ಗೂಟ ಕಿತ್ತುಕೊಂಡು ಕರ್ನಾಟಕದ ಪರವಾಗಿ ಘರ್ಜಿಸುವದು ಯಾವಾಗ?

Spread the love

ಮುಖ್ಯಮಂತ್ರಿಗಳು ರಾಜ್ಯದ
ಸಂಸದರಿಗೆ ಸೂಕ್ತ ಮಾರ್ಗದರ್ಶನ
ಮಾಡಿ ಲೋಕಸಭೆಯಲ್ಲಿ ಬಾಯ್ಬಿಡಲು
ಹೇಳಬೇಕು.ಕಳೆದ ಕೆಲವು ತಿಂಗಳುಗಳಿಂದ
ನೆರೆಯ ಮಹಾರಾಷ್ಟ್ರದ ಶಿವಸೇನೆ
ಸರಕಾರ ಗಡಿವಿವಾದವನ್ನು ಕೆದಕುತ್ತಲೇ
ಇದ್ದು ಈಗ ಮತ್ತೊಂದು ಹೆಜ್ಜೆಯನ್ನು
ಮುಂದಿರಿಸಿದೆ.ತನ್ನ ಆಟಕ್ಕೆ ಈಗ
ಲೋಕಸಭೆಯನ್ನು ಆಯ್ಕೆ ಮಾಡಿಕೊಂಡಿದೆ!
ಮಹಾರಾಷ್ಟ್ರದ ಮುಖ್ಯಮಂತ್ರಿ
ಉದ್ಧವ ಠಾಕ್ರೆ ಮೊದಲು ಕರ್ನಾಟಕದ ವಿರುದ್ಧ ಟ್ವೀಟ್ ಮಾಡಿದರು.ಬೆಳಗಾವಿ ಹಾಗೂ ಇತರ ಗಡಿ ಪ್ರದೇಶಗಳನ್ನು ಕರ್ನಾಟಕದ ಆಕ್ರಮಿತ ಪ್ರದೇಶಗಳೆಂದು
ಕರೆದದ್ದಲ್ಲದೇ ಅವುಗಳನ್ನು ಮಹಾರಾಷ್ಟ್ರಕ್ಕೆ
ಸೇರಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದು ಘೋಷಿಸಿದರು.ನಂತರ ಗಡಿವಿವಾದ ಕುರಿತ ಪುಸ್ತಕ ಬಿಡುಗಡೆ ಮಾಡಿದರು.ಆಮೇಲೆ ಶಿವಸೇನಾ ತಂಡವೊಂದನ್ನು ಬೆಳಗಾವಿ ಗಡಿಗೆ ಕಳಿಸಿದರು.
ಈಗ ನಿನ್ನೆ ಶನಿವಾರ ಲೋಕಸಭೆಯಲ್ಲಿ ಮುಂಬಯಿಯ
ಶಿವಸೇನಾ ಸಂಸದ ರಾಹುಲ್ ಶೆವಾಳೆ
ಗಡಿವಿವಾದವನ್ನು ಪ್ರಸ್ತಾಪಿಸುತ್ತ
ಸರ್ವೋನ್ನತ ನ್ಯಾಯಾಲಯದಲ್ಲಿರುವ ಗಡಿವಿವಾದ ಪ್ರಕರಣವು ಇತ್ಯರ್ಥವಾಗುವವರೆಗೆ ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಕೇಂದ್ರ ಶಾಸಿತ
ಪ್ರದೇಶವನ್ನಾಗಿ ಕೇಂದ್ರ ಸರಕಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯು
1948 ರಲ್ಲಿ ನಿರ್ಣಯವೊಂದನ್ನು ಪಾಸು
ಮಾಡಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಪಡಿಸಿದೆ ಎಂದು
ಶೆವಾಳೆ ನೆನಪಿಸಿದರು.

ಸದ್ಯ ಈ ಗಡಿವಿವಾದವು
ಸರ್ವೋನ್ನತ ನ್ಯಾಯಾಲಯದ ಮುಂದಿದೆ.
ಬೆಳಗಾವಿ ಖಾನಾಪುರ ನಿಪ್ಪಾಣಿ ಬೀದರ ಭಾಲ್ಕಿ ಕಾರವಾರ ಪ್ರದೇಶಗಳಲ್ಲಿ ಮರಾಠಿ ಭಾಷಿಕರ ಸಂಖ್ಯೆ ಅಧಿಕವಾಗಿದೆ.ಆದ್ದರಿಂದ ಈ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬುದು ಮಹಾರಾಷ್ಟ್ರದ
ಒತ್ತಾಯವಾಗಿದೆ.2018 ರ ಮಾರ್ಚ 23 ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು.ಆದರೆ ವಿಚಾರಣೆ ನಡೆಯಲಿಲ್ಲ.ಕಳೆದ 2020 ರ ಮಾರ್ಚ
17 ರಂದು ನಡೆಯಬೇಕಾಗಿದ್ದ ವಿಚಾರಣೆಯು ಕೋವಿಡ್ ಕಾರಣದಿಂದಾಗಿ
ಮುಂದೂಡಲ್ಪಟ್ಟಿತು ಎಂದೂ ಶೆವಾಳೆ
ಹೇಳಿದ್ದಾರೆ.
ಈ ಸಂಸದರು ಮಾತನಾಡುವಾಗ ಕರ್ನಾಟಕದ ಒಬ್ಬ ಸಂಸದರೂ ಸಹ
ಬಾಯಿ ಬಿಟ್ಟ ಬಗ್ಗೆ ವರದಿಯಾಗಿಲ್ಲ! 1948 ರಲ್ಲಿ ಬೆಳಗಾವಿ ಪಾಲಿಕೆಯು ನಿರ್ಣಯ ಪಾಸು ಮಾಡಿದ್ದನ್ನಷ್ಟೇ ಪ್ರಸ್ತಾಪಿಸಿದ ಈ ಸಂಸದನ ವಾದವನ್ನು ರಾಜ್ಯ ಪುನರ್ರಚನೆ ಆಯೋಗ, ಮಹಾಜನ ಆಯೋಗದ ವರದಿಗಳೊಂದಿಗೆ ಯಾರೂ ಏಕೆ
ವಿರೋಧಿಸಲಿಲ್ಲ? ಮರಾಠಿ ಭಾಷಿಕರೇ
ಅಧಿಕ ಸಂಖ್ಯೆಯಲ್ಲಿದ್ದಾರೆಂಬ ಶೆವಾಳೆ ಅವರಿಗೆ ಬೆಳಗಾವಿಯಲ್ಲಿ 1999 ರಲ್ಲಿಯೇ
ಎಮ್.ಇ.ಎಸ್.ಸೋತು ಸುಣ್ಣವಾಗಿದ್ದನ್ನು ನಮ್ಮ ಒಬ್ಬ ಸಂಸದರೂ ಏಕೆ ನೆನಪಿಸಿ
ಕೊಡಲಿಲ್ಲ?ಸರ್ವೋನ್ನತ ನ್ಯಾಯಾಲಯದಲ್ಲಿ ಗಡಿವಿವಾದ ಬಾಕಿ ಇರುವಾಗ ಆ ಪ್ರಕರಣದ ಬಗ್ಗೆ ಮಾತನಾಡುವದು, ಚರ್ಚಿಸುವದು
ನ್ಯಾಯಾಂಗ ನಿಂದನೆಯಾಗುವದು
ಎಂದು ಯಾವ ಸಂಸದರೂ ಎದಿರೇಟು
ಕೊಡಲಿಲ್ಲವೇಕೆ ?
ವಾಜಪೇಯಿ ಸರಕಾರದ ಅವಧಿಯಲ್ಲಿ ಲೋಕಸಭೆಯಲ್ಲಿ ಮಹಾರಾಷ್ಟ್ರದ ಸಂಸದರು ಗಡಿವಿವಾದ ಪ್ರಸ್ತಾಪಿಸಿದಾಗ ದಿ.ಅನಂತಕುಮಾರ ಸಹಿತ ಅನೇಕ ಸಂಸದರು ಮಹಾರಾಷ್ಟ್ರದ ಸಂಸದರಿಗೆ ಎದಿರೇಟು ನೀಡಿದ ಪ್ರಸಂಗಗಳು
ದಾಖಲೆಯಲ್ಲಿವೆ.ಹಾಗಾದರೆ ಈಗ
ಬಿಜೆಪಿ ಯ 25 ಸಂಸದರು ಸಹಿತ ಎಲ್ಲ 28 ಸಂಸದರು ಶಿವಸೇನಾ ಸಂಸದನಿಗೆ
ಎದಿರೇಟು ಕೊಡದಿರಲು ಕಾರಣವೇನು!?
ಮಹಾರಾಷ್ಟ್ರದ ಸಿಎಮ್ ಠಾಕ್ರೆ ಅವರು ಪದೇ ಪದೇ ಗಡಿವಿವಾದವನ್ನು ಕೆಣಕುತ್ತಲೇ ನಡೆದಿದ್ದಾರೆ.ನ್ಯಾಯಾಲಯದಲ್ಲಿರುವ ಪ್ರಕರಣದ ಮೇಲೆ ತೀವ್ರ ನಿಗಾ ಇರಿಸಲು ಇಬ್ಬರು ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸಿದ್ದಾರೆ.ಇದನ್ನು ಕರ್ನಾಟಕ ಸರಕಾರ ಗಂಭೀರವಾಗಿ ಪರಿಗಣಿಸದಂತಿಲ್ಲ.
ಮಹಾಜನ ವರದಿಯೇ ಅಂತಿಮ”,ಒಂದು ಇಂಚೂ ಬೆಳಗಾವಿಯನ್ನು ಬಿಟ್ಟು
ಕೊಡುವದಿಲ್ಲ ಎಂಬ ಸವಕಲು ಹೇಳಿಕೆಗಳನ್ನು ಕರ್ನಾಟಕದ ಮಂತ್ರಿಗಳು ಕೊಡುತ್ತಲೇ ಇದ್ದಾರೆ!
ಸರ್ವೋನ್ನತ ನ್ಯಾಯಾಲಯದಲ್ಲಿರುವ ಪ್ರಕರ್ಣವನ್ನು ನೋಡಿಕೊಳ್ಳುವ ನಮ್ಮ ಕಾನೂನು ಪರಿಣಿತರ ತಂಡದ ಜೊತೆಗೆ ಕುಳಿತು ಚರ್ಚೆ ಮಾಡಬೇಕಾದ ಗಡಿ ಉಸ್ತುವಾರಿ ಸಚಿವರಿಗೂ ನಮ್ಮಲ್ಲಿ
ಬರವಿದೆ!
ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು.ರಾಜ್ಯದ ಸಂಸದರಿಗೆ ಸೂಕ್ತ ನಿರ್ದೇಶನ ನೀಡಬೇಕು.ಆದಷ್ಟು ಬೇಗ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ ಮೊ:9620114466


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ