Breaking News
Home / Uncategorized / ರೈತರ ಅಳಲು ಆಲಿಸಿದ ಜಿಲ್ಲಾಧಿಕಾರಿ

ರೈತರ ಅಳಲು ಆಲಿಸಿದ ಜಿಲ್ಲಾಧಿಕಾರಿ

Spread the love

ಬೆಳಗಾವಿ: ಹೊರವಲಯದ ಹಲಗಾ-ಮಚ್ಚೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜಮೀನು ಕೊಡುವುದಕ್ಕೆ ವಿರೋಧ ವ್ಯಕ್ತ‍ಪಡಿಸಿ ರೈತರು ಪ್ರತಿಭಟನೆ ನಡೆಸೊದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅಹವಾಲು ಆಲಿಸಿದರು.

‘ಯಾವುದೇ ಕಾರಣಕ್ಕೂ ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ. ಕಬಳಿಸಿಕೊಳ್ಳುತ್ತಿರುವುದನ್ನು ತಡೆಯಬೇಕು. ಇದು ಫಲವತ್ತಾದ ಕೃಷಿ ಭೂಮಿ. ಈ ತುಂಡು ಜಮೀನು ಬಿಟ್ಟರೆ ನಮಗೆ ಪರ್ಯಾಯವಿಲ್ಲ. ಪರಿಹಾರದ ವಿಷಯದಲ್ಲಿಯೂ ಕೆಲವರು ಮಧ್ಯವರ್ತಿಗಳಾಗಿ ಬಂದು ಸತಾಯಿಸುತ್ತಿದ್ದಾರೆ. ಪರಿಹಾರ ನೀಡಲು ಕಮಿಷನ್ ಕೇಳುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ರೈತರು ಒತ್ತಾಯಿಸಿದರು.

ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯಬೇಕು’ ಎಂದು ಆಗ್ರಹಿಸಿದರು.

ರೈತ ಮಹಿಳೆಯೊಬ್ಬರು ಅಳಲು ಹೇಳಿಕೊಳ್ಳುವ ಭರದಲ್ಲಿ ಕೈಯಲ್ಲಿದ್ದ ಕುಡುಗೋಲನ್ನು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳತ್ತ ತೋರಿದರು.

‘ಅಧಿಕಾರಿಗಳು ನಮ್ಮ ಅಳಲು ಕೇಳುತ್ತಿಲ್ಲ. ನಮಗೆ ಪರಿಹಾರ ಬೇಡ. ಜಮೀನು ಉಳಿಸಿಕೊಡಿ. ಪರ್ಯಾಯ ಮಾರ್ಗದಲ್ಲಿ ರಸ್ತೆ ನಿರ್ಮಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯಿಂದ ಕುಡುಗೋಲು ಕಸಿದುಕೊಂಡರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಯೋಜನೆಯ ವಾಸ್ತವ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿದ್ದೆ. ರೈತರ ಅಳಲನ್ನು ಆಲಿಸಿದ್ದೇನೆ. ಶೇ 60ರಷ್ಟು ಮಂದಿ ಪರಿಹಾರ ಪಡೆದಿದ್ದಾರೆ. ಶೇ 40ರಷ್ಟು ಮಂದಿ ವಿರೋಧಿಸಿ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾಗಿದೆ. ಈಗ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪರಿಹಾರ ಕೊಡಿಸುವುದಕ್ಕೆ ಅವಕಾಶವಿದೆ ಎಂದು ತಿಳಿಸಿದ್ದೇನೆ. ರೈತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಲಾಗುವುದು. ಮತ್ತೊಂದು ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು’ ಎಂದು ಮಾಹಿತಿ ನೀಡಿದರು.


Spread the love

About Laxminews 24x7

Check Also

ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗಿತ್ತು:ಮೋದಿ

Spread the love ಜೈಪುರ(ಮಾ.23): ಲೋಕಸಭೆ ಚುನಾವಣೆಗೂ ಮುನ್ನ ನಾಯಕರು ದೇಶಾದ್ಯಂತ ನಿರಂತರವಾಗಿ ಪ್ರವಾಸ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ