Breaking News
Home / Uncategorized / ಸಂಪುಟ ಸೇರುತ್ತಿರುವ ಸಪ್ತ ಸಚಿವರು

ಸಂಪುಟ ಸೇರುತ್ತಿರುವ ಸಪ್ತ ಸಚಿವರು

Spread the love

ಬೆಂಗಳೂರು,ಜ.13- ಇಂದು ಸಂಪುಟಕ್ಕೆ 7 ಮಂದಿ ಸಚಿವರು ಸೇರ್ಪಡೆಯಾಗಲಿದ್ದು, ಈಗಾಗಲೇ ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಿ ಕೊಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿ ಘೋಷಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್ ನಿರಾಣಿ, ಅಂಗಾರ, ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಸಿ.ಪಿ.ಯೋಗೀಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಿಸಿದರು.ಈಗಾಗಲೇ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದು, ಸಂಜೆ 3.50ಕ್ಕೆ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು. ಸದ್ಯಕ್ಕೆ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಉಳಿಯಲಿದ್ದು, ಅದನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ಮುಂದೆ ಯಾರಿಗೆ ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು

#ಸಂಪುಟ ವಿಸ್ತರಣೆ  ಬಳಿಕ ಸಚಿವರ ಖಾತೆ ಬದಲಾವಣೆ 

ಬೆಂಗಳೂರು,ಜ.13- ಸಂಪುಟ ವಿಸ್ತರಣೆ ಮಾತ್ರವೆಂದು ನಿಟ್ಟುಸಿರು ಬಿಟ್ಟಿದ್ದ ರಾಜ್ಯ ಸಚಿವ ಸಂಪುಟದ ಸದಸ್ಯರಿಗೆ ಬಿಜೆಪಿ ಹೈಕಮಾಂಡ್ ಅಘಾತ ನೀಡಿದೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಳಿಕ ಸಚಿವರ ಖಾತೆ ಬದಲಾವಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ.  ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಬಳಿಕ ತಮ್ಮ ಬಳಿ ಇರುವ ಖಾತೆಗಳನ್ನು ಹಂಚುವುದರೊಂದಿಗೆ ಹಲವು ಸಚಿವರ ಖಾತೆ ಬದಲಾವಣೆಗೂ ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದು, ಪ್ರಮುಖವಾಗಿ ಹಿರಿಯ ಸಚಿವರ ಖಾತೆಗಳನ್ನು ಬದಲಾಯಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ರಚನೆಯಲ್ಲಿ ಕೈ ಜೋಡಿಸಿದವರಿಗೆ ಬಯಸಿದ ಖಾತೆಗಳನ್ನು ನೀಡುವುದು ಹಾಗೂ ಹಾಲಿ ಸಚಿವರಲ್ಲಿ ಕೆಲವರಿಗೆ ಹಂಚಿಕೆ ಮಾಡಲಾಗಿರುವ ಖಾತೆಗಳನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.  ಹಲವು ಸಚಿವರು ತಮ್ಮ ಖಾತೆಗಳ ಬದಲಾವಣೆಗೆ ಬೇಡಿಕೆ ಇಟ್ಟಿರುವುದು ಕೂಡ ಯಡಿಯೂರಪ್ಪನವರು ಈ ನಿರ್ಧಾರಕ್ಕೆ ಬರಲು ಕಾರಣ ಎನ್ನಲಾಗಿದೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಗೃಹ ಇಲಾಖೆ ಬದಲು ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟಿದ್ದಾರೆ. ಹಿಂದೆ ಜಲಸಂಪನ್ಮೂಲ ಸಚಿವರಾಗಿ ಅವರು ಖಾತೆ ನಿರ್ವಹಿಸಿದ್ದರು. ಆದರೆ, ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷ ಸೇರ್ಪಡೆ ಸಂದರ್ಭದಲ್ಲಿಯೇ ಜಲಸಂಪನ್ಮೂಲ ಇಲಾಖೆ ನೀಡುವುದಾಗಿ ಭರವಸೆ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.

ಹೀಗಾಗಿ ಜಲಸಂಪನ್ಮೂಲ ಖಾತೆ ಬಸವರಾಜ್ ಬೊಮ್ಮಾಯಿ ಅವರ ಕೈ ತಪ್ಪಿದೆ. ಈಗ ಯಡಿಯೂರಪ್ಪ, ಬೊಮ್ಮಾಯಿ ಅವರ ಗೃಹ ಖಾತೆ ಬದಲಿಸಿ, ಕಂದಾಯ ಇಲಾಖೆ ನೀಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕಂದಾಯ ಸಚಿವ ಅಶೋಕ್ ಅವರಿಗೆ ಮತ್ತೆ ಗೃಹ ಇಲಾಖೆ ಕೊಡುವ ಆಲೋಚನೆ ಹೊಂದಿದ್ದಾರೆ. ಆದರೆ ಮೊದಲಿನಿಂದಲೂ ಆರ್. ಅಶೋಕ್ ಬೆಂಗಳೂರು ಅಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದಾರೆ.

ಬೆಂಗಳೂರು ಶಾಸಕರಲ್ಲಿ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇಂಧನ ಖಾತೆ ನೀಡುವ ಬಗ್ಗೆ ಸಿಎಂ ಒಲವು ಹೊಂದಿದ್ದಾರೆ. ಈಶ್ವರಪ್ಪ ಅವರ ಬಳಿ ಇರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ನೀಡುವ ಆಲೋಚನೆಯನ್ನು ಸಿಎಂ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಕೈಗಾರಿಕಾ ಖಾತೆಯನ್ನು ಹೊಸದಾಗಿ ಸಂಪುಟ ಸೇರುವವರಲ್ಲಿ ಯಾರಿಗಾದರೂ ಕೊಡಬೇಕು ಎನ್ನುವ ಲೆಕ್ಕಾಚಾರ ಮುಖ್ಯಮಂತ್ರಿಯವರದ್ದು ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆಯ ನಂತರ ಸಚಿವ ಸುಧಾಕರ್ ಬಳಿ ಇರುವ ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಶಿವರಾಮ್ ಹೆಬ್ಬಾರ್ ಬಳಿ ಇರುವ ಸಕ್ಕರೆ ಖಾತೆಯನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲು ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದಾರೆ.


Spread the love

About Laxminews 24x7

Check Also

ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

Spread the love ವಿಜಯಪುರ: ಯಾವುದೇ ಕಾರಣಕ್ಕೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಸಾರಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ