ವಿಜಯಪುರ ಜಿಲ್ಲೆಯ ಅಭಿವೃದ್ಧಿಯ ಕನಸು ನನಸು ಮಾಡಲು ಬದ್ಧ ಎಂದ ಸಿಎಂ; ಯುಕೆಪಿ, ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ
ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಜಿಲ್ಲಾ ಪ್ರವಾಸ ಕೈಗೊಂಡರು.
ಈ ವೇಳೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಜೊತೆಗೆ ವೀರರಾಣಿ ಕಿತ್ತೂರ ಚೆನ್ನಮ್ಮರ ಅತಿ ಎತ್ತರದ ಮೂರ್ತಿ ಯನ್ನು ಉದ್ಘಾಟನೆ ನೇರವೇರಿಸಿದರು. ಬೃಹತ್ ವೇದಿಕೆಯಲ್ಲಿ ಸಿಎಂ ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಿ ಭರವಸೆ ನೀಡಿದರು. ಈ ಕುರಿತು ಇಲ್ಲಿದೆ ಒಂದು ಕಂಪ್ಲೀಟ್ ವರದಿ…
ಐತಿಹಾಸಿಕ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಲಾಗಿರುವ ಅಶ್ವಾರೂಢ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಭವ್ಯ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಿದರು. ಮೂರ್ತಿಯನ್ನು ಅನಾವರಣಗೊಳಿಸಿದ ಬಳಿಕ ನೆರೆದಿದ್ದ ಸಾವಿರಾರು ಜನರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಆತ್ಮೀಯವಾಗಿ ಕೈ ಮುಗಿದು ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ‘ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ’ ಎಂದು ನಾಮಕರಣ ಮಾಡಿದ ನಾಮಫಲಕವನ್ನು ಸಹ ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಬಳಿಕ ಭೂತನಾಳ ಗ್ರಾಮದಲ್ಲಿ ಬಹುದಿನಗಳ ಕನಸಾಗಿದ್ದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ, ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಪಾಲ್ಗೊಂಡರು.
ಬಳಿಕ ದರಬಾರ ಹೈಸ್ಕೂಲ್ ಆವರಣದಲ್ಲಿ ಜಿಲ್ಲೆಯ ನಾನಾ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಿಮೋಟ್ ಮೂಲಕ ಚಾಲನೆ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನವರಿಗೆ ಕಿತ್ತೂರ ರಾಣಿ ಚೆನ್ನಮ್ಮ ರ ಬೆಳ್ಳಿ ಮೂರ್ತಿಯನ್ನು ಕಾಣಿಕೆಯಾಗಿ ನೀಡಲಾಯಿತು. ಇದೇ ವೇಳೆ ಅತಿ ಹೆಚ್ಚು ಅವಧಿಯ ಸಿಎಂ ಎಂದು ದಾಖಲೆ ಬರೆದಿದ್ದಕ್ಕಾಗಿ ಜಿಲ್ಲೆಯ ಜನತೆಯ ಪರವಾಗಿ ಸನ್ಮಾನಿಸಲಾಯಿತು. ಪಂಚಮಸಾಲಿ ಸಮಾಜದ ವತಿಯಿಂದಲೂ ಸನ್ಮಾನಿಸಲಾಯಿತು. ಈ ವೇಳೆ ಸಚಿವ ಶಿವಾನಂದ ಪಾಟೀಲ ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿರುವ ಮುಖ್ಯಮಂತ್ರಿ ಸಿದ್ಧರಾಮ್ಯ ಅವರು ಬರುವ ಬಜೆಟ್‌ನಲ್ಲಿ ಕಾಲೇಜು ಆರಂಭಕ್ಕೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮ ದಲ್ಲಿ ಸಚಿವರಾದ ಎಂ.ಬಿ.ಪಾಟೀಲ ಮಾತನಾಡಿ ವಿಜಯಪುರ ಜಿಲ್ಲೆಯು ಕಿತ್ತೂರ ರಾಣಿ ಚೆನ್ನಮ್ಮಳ ತವರೂರು ಎಂದು ಹೇಳಿದರು. ಇದೇ ವೇಳೆ ಜಿಲ್ಲೆಯ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಸಿಎಂ ಗಮನಕ್ಕೆ ತಂದರು. ಇನ್ನೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ 160 ಕೋಟಿ ವೆಚ್ಚದ ಪ್ಲೈಓವರ್ ನಿರ್ಮಿಸಿಕೊಡಲು ಅನುದಾನ ನೀಡಲು ಮನವಿ ಮಾಡಿದರು. ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ ಮಾತನಾಡಿ ವಿಜಯಪುರ ಜಿಲ್ಲೆಯ ಲಿಂಬೆ ಹಣ್ಣು, ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಮಾತನಾಡುತ್ತಾ ಕೃಷ್ಣಾ ೩ ನೇ ಹಂತದ ಯೋಜನೆಗೆ ವಿವಿಧ ರಾಜ್ಯಗಳು ಅಡ್ಡಿಯಾಗಿವೆ, ಯಾವದೇ ಅಡ್ಡಿ ಬರಲಿ ಯೋಜನೆ ಪೂರ್ಣಗೊಳಿಸಲು ಬದ್ಧ ಎಂದು ಭರವಸೆ ನೀಡಿದರು..
ವಿಜಯಪುರ ನಗರದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಡಾ. ಎಚ್.ಸಿ. ಮಹದೇವಪ್ಪ ಲಕ್ಷ್ಮಿ ಹೆಬ್ಬಾಳ್ಳರ್, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಡಿ.ಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ, ಶಾಸಕರಾದ ಯಶವಂತರಾಯಗೌಡ ಪಾಟೀಲ್, ವಿಠಲ ಕಟಕದೊಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ್, ಪಂಚಮಸಾಲಿ ಸಮಾಜದ ಮುಖಂಡರಾದ ಉಮೇಶ ಕೋಳಕೂರ, ರಾಜು ತೊರವಿ, ವಿದ್ಯಾರಾಣಿ ತುಂಗಳ, ಡಾ. ಸುರೇಶ ಬಿರಾದಾರ, ಮಲ್ಲಿಕಾರ್ಜುನ ಲೋಣಿ ಸೇರಿದಂತೆ ಹಲವು ಗಣ್ಯರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
Laxmi News 24×7