Breaking News

‘ಬಿ’ ಖಾತಾ ನಿವೇಶನ, ಕಟ್ಟಡಗಳಿಗೆ ‘ಎ’ ಖಾತಾ ಭಾಗ್ಯ: ಯಾರಿಗೆಲ್ಲ ಪ್ರಯೋಜನ, ಷರತ್ತುಗಳೇನು?

Spread the love

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ನಿವಾಸಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.‌ ‘ಬಿ’ ಖಾತಾ ನಿವೇಶನ, ಕಟ್ಟಡ, ಫ್ಲಾಟ್​​ಗಳಿಗೆ ‘ಎ-ಖಾತಾ’ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಮೂಲಕ ಅಕ್ರಮ ಸಕ್ರಮಕ್ಕೆ ಮುಂದಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ರಚಿಸಿರುವ ಬಡಾವಣೆಗಳಲ್ಲಿನ ‘ಬಿ-ಖಾತಾ’ ನಿವೇಶನ/ಕಟ್ಟಡ/ ಅಪಾರ್ಟ್‌ಮೆಂಟ್/ಫ್ಲಾಟ್‌ಗಳಿಗೆ ಜಿಬಿಎ ಮಾದರಿಯಲ್ಲೇ ಎ ಖಾತಾ ನೀಡಲು ತೀರ್ಮಾನಿಸಲಾಗಿದೆ.

ಯಾರಿಗೆ ಪ್ರಯೋಜನ?: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಾಯ್ದೆ ಉಲ್ಲಂಘಿಸಿ, ಅನಧಿಕೃತವಾಗಿ ಬಡಾವಣೆಗಳನ್ನು ರಚಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಅನಧಿಕೃತ ಬಡಾವಣೆಗಳ ರಚನೆಯಿಂದ ನಗರ ಪ್ರದೇಶಗಳಲ್ಲಿ ಭೂ ಪರಿವರ್ತಿಸಿದ/ಭೂ ಪರಿವರ್ತಿಸದ ಜಮೀನುಗಳಿಗೆ ವಿನ್ಯಾಸ ಅನುಮೋದನೆ ಪಡೆಯದೇ ಅನಧಿಕೃತ ಬಡಾವಣೆ/ರೆವೆನ್ಯೂ ಬಡಾವಣೆಗಳನ್ನು ನಿರ್ಮಾಣ ಮಾಡಿ, ನಿವೇಶನಗಳನ್ನು ನೋಂದಣಿ ಮಾಡಿಕೊಂಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿರುವುದಕ್ಕೆ ಸಕ್ರಮ ಭಾಗ್ಯ ಸಿಗಲಿದೆ.

10 ಲಕ್ಷ ಆಸ್ತಿಗಳಿಗೆ ಎ ಖಾತಾ ಭಾಗ್ಯ: ಈ ರೀತಿ ನಿಯಮ ಉಲ್ಲಂಘಿಸಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದಾಜು 10 ಲಕ್ಷ ಆಸ್ತಿಗಳಿವೆ. ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳಲ್ಲಿರುವ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10 – 09 – 2024ರ ಪೂರ್ವದಲ್ಲಿ ರಚಿಸಲಾಗಿರುವ ಬಡಾವಣೆಗಳಲ್ಲಿನ ಸ್ವತ್ತುಗಳಿಗೆ ಬಿ-ಖಾತಾ (ಅನಧಿಕೃತ) ನೀಡಲು ಅವಕಾಶ ಕಲ್ಪಿಸಲಾಗಿದೆ. ಇಂಥ ಅನಧಿಕೃತ ಸದರಿ ಕಾಯ್ದೆ ತಿದ್ದುಪಡಿಯಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಕ್ಷಮ ಪ್ರಾಧಿಕಾರದ ಅನುಮೋದನೆ ಇರದ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಅಂತಹ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನಿರ್ವಹಿಸಲಾಗುತ್ತಿದೆ.

ಬಿ ಖಾತಾದ ಖಾಲಿ ನಿವೇಶನಗಳಿಗೆ ಎ ಖಾತಾ ಷರತ್ತುಗಳು: ಬಿ ಖಾತಾ ಹೊಂದಿರುವ ನಿವೇಶನಗಳಲ್ಲಿನ ನಿರ್ಮಾಣಗಳಿಗೆ ಯಾವುದೇ ಕಟ್ಟಡ ಯೋಜನೆ ಅನುಮೋದನೆಯನ್ನು ನೀಡಲಾಗುವುದಿಲ್ಲ. ಇದು ಅನಿಯಂತ್ರಿತ ನಿರ್ಮಾಣಗಳಿಗೆ ಕಾರಣವಾಗಿದೆ. ಈ ಸಂಬಂಧ ಅನುಸರಿಸಬಹುದಾದ ಕ್ರಮಗಳು ಹೀಗಿವೆ.

  • ಬಿ ಖಾತಾ ನಿವೇಶನಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಖಾಲಿ ನಿವೇಶನ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸಬೇಕಾಗುತ್ತದೆ.
  • ಪ್ರಸ್ತುತ ನಿವೇಶನ ಭೂ ಪರಿವರ್ತನೆಯಾಗದ ಜಮೀನು ಇದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು ಅಥವಾ ಕಲಂ 95ರ ತಿದ್ದುಪಡಿಯಂತೆ ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಭೂಮಿ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್​ನಲ್ಲಿ ಸೂಚಿಸಲಾದ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕಲಂ 95(7) ಕರ್ನಾಟಕ ಭೂಕಂದಾಯ ಕಾಯ್ದೆ ಅಡಿಯಲ್ಲಿ ನಿಗದಿಪಡಿಸಿದ ಶುಲ್ಕವನ್ನು ಕೆಟಿಸಿಪಿ ಕಾಯ್ದೆ 1961 ರ ಕಲಂ 17 ಅಡಿಯಲ್ಲಿ ಅನುಮೋದನೆಯ ಪ್ರಕಾರ ಪ್ರಾಧಿಕಾರಕ್ಕೆ ಪಾವತಿಸಬೇಕಾಗುತ್ತದೆ.
  • ಭೂಪರಿವರ್ತನೆ ನಂತರದಲ್ಲಿ ಅಂತಹ ಖಾಲಿ ನಿವೇಶನಕ್ಕೆ ಕೆಟಿಸಿಪಿ ಕಾಯ್ದೆ 1961ರ ಕಲಂ 17 ರ ಅಡಿಯಲ್ಲಿ “ಏಕನಿವೇಶನ ಅಥವಾ ಬಹುವಿನ್ಯಾಸ” ಆಗಿ ಸಂಬಂಧಿತ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ವಿನ್ಯಾಸ ಅನುಮೋದನೆ ಪಡೆದ ನಂತರ ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 106 ಮತ್ತು ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976ರ ಕಲಂ 112 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕೃತ (ಎ-ಖಾತಾ) ಖಾತಾ ನೀಡಬಹುದು.Minister H. K. Patil

ಪರವಾನಗಿ ಇಲ್ಲದೇ ನಿರ್ಮಿಸಿದ ಕಟ್ಟಡಗಳಿಗೆ ಎ ಖಾತಾ ಷರತ್ತುಗಳು:

  • ನಗರ ಸ್ಥಳಿಯ ಸಂಸ್ಥೆಗಳಿಂದ ಈಗಾಗಲೇ ಬಿ – ಖಾತಾ ಪಡೆದು ಅಥವಾ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವ ನಿವೇಶನಕ್ಕೆ ಸಂಪರ್ಕಿಸಲು ಸಾರ್ವಜನಿಕ ರಸ್ತೆ ಇರುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ, ಅಂತಹ ಆಸ್ತಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ ” ಎಂದು ಘೋಷಿಸಬೇಕಾಗುತ್ತದೆ.
  • ಪ್ರಸ್ತುತ ಆಸ್ತಿ ಭೂಪರಿವರ್ತನೆ ಆಗದ ಜಮೀನಿನ ವ್ಯಾಪ್ತಿಯಲ್ಲಿ ಇದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದು. ಕಾಯ್ದೆಯ ಕಲಂ 95 ರ ತಿದ್ದುಪಡಿಯಂತೆ ಭೂಮಿ ನಗರ ಸ್ಥಳಿಯ ಸಂಸ್ಥೆಗಳ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್​ನಲ್ಲಿ ಸೂಚಿಸಿದಂತೆ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕರ್ನಾಟಕ ಭೂಕಂದಾಯ ಕಾಯ್ದೆ 95(7) ಅಡಿಯಲ್ಲಿ ನಿಗದಿಪಡಿಸಿದ ಶುಲ್ಕವನ್ನು ಕೆಟಿಸಿಪಿ ಕಾಯ್ದೆ 1961 ಕಲಂ 17 ರಡಿಯಲ್ಲಿ ಅನುಮೋದನೆಯ ಪ್ರಕಾರ ಪ್ರಾಧಿಕಾರಕ್ಕೆ ಪಾವತಿಸಬೇಕು.
  • ಭೂ ಪರಿವರ್ತನೆ ಆದ ನಂತರದಲ್ಲಿ ಕಟ್ಟಡವಿರುವ ನಿವೇಶನಕ್ಕೆ KTCP ಕಾಯ್ದೆ 1961 ರಕಲಂ 17ರ ಅಡಿ ಸಿಂಗಲ್ ಪ್ಲಾಟ್ ಅಥವಾ ಲೇಔಟ್ ಆಗಿ ಸಂಬಂಧಿತ ಅನುಮೋದನೆಯನ್ನು ಪಡೆಯುವುದು. KTCP ಕಾಯ್ದೆ 1961 ರ ಕಲಂ 17ರ ಅಡಿಯಲ್ಲಿ ಸಂಬಂಧಿತ ಅನುಮೋದನೆಯನ್ನು ಪಡೆದ ನಂತರ ಕಾಯ್ದೆ ಪ್ರಕಾರ ಎ – ಖಾತಾ ನೀಡಬಹುದಾಗಿದೆ.
  • ಅಸ್ತಿತ್ವದಲ್ಲಿರುವ ಕಟ್ಟಡವು ವಲಯ ನಿಯಮಗಳನ್ವಯ ಕಟ್ಟಡ ಪರವಾನಗಿ ನೀಡಲು ಅರ್ಹವಾಗಿದ್ದಲ್ಲಿ ಕಟ್ಟಡ ಪರವಾನಗಿ ನೀಡುವುದು ಮತ್ತು ವಾಸಯೋಗ್ಯ ಪ್ರಮಾಣ ಪತ್ರ ನೀಡಬೇಕು. ಒಂದು ವೇಳೆ ಅಂತಹ ಕಟ್ಟಡವು ವಲಯ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಸದರಿ ಕಟ್ಟಡಕ್ಕೆ “ವಲಯ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡ” ಎಂದು ಷರಾ ದಾಖಲಿಸಿ ಬಿ – ಖಾತಾ ನೀಡುವುದು. ಕಟ್ಟಡಗಳನ್ನು ವಲಯ ನಿಯಮಾವಳಿಗಳಿಗೆ ಹಾಗೂ ಮಹಾಯೋಜನೆಗೆ ಅನುಗುಣವಾಗಿಸಲಾದಲ್ಲಿ ಅಂಥಹ ಪ್ರಕರಣಗಳಲ್ಲಿ ಎ – ಖಾತಾ ನೀಡಬಹುದು.

ಅಪಾರ್ಟ್‌ಮೆಂಟ್‌/ಘಟಕಗಳಿಗೆ ಎ ಖಾತಾ ಷರತ್ತುಗಳು:

  • ಒಂದು ವೇಳೆ ಪ್ರಸ್ತುತ ಕಟ್ಟಡ/ಫ್ಲಾಟ್​ಗಳು ಇನ್ನೂ ಸಹ ಅಭಿವೃದ್ಧಿದಾರರು ಅಥವಾ ಮಾಲೀಕರ ಹೆಸರಿನಲ್ಲಿ ಇದ್ದಲ್ಲಿ ಆಸ್ತಿ ಭೂಪರಿವರ್ತನೆ ಆಗದ ಜಮೀನಿನ ವ್ಯಾಪ್ತಿಯಲ್ಲಿ ಇದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆಯಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು. ಭೂಮಿಯು ನಗರ ಸ್ಥಳಿಯ ಸಂಸ್ಥೆಗಳ ಅನುಮೋದಿತ ಪರಿಷ್ಕೃತ ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಬಂದರೆ ಅನುಮೋದಿತ ಮಾಸ್ಟರ್ ಪ್ಲಾನ್​ನಲ್ಲಿ ಸೂಚಿಸಿದಂತೆ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕರ್ನಾಟಕ ಭೂಕಂದಾಯ ಕಾಯ್ದೆಯಡಿಯಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಕೆಟಿಸಿಪಿ ಕಾಯ್ದೆಯಡಿಯಲ್ಲಿ ಅನುಮೋದನೆಯ ಪ್ರಕಾರ ಪ್ರಾಧಿಕಾರಕ್ಕೆ ಪಾವತಿಸಬೇಕು.
  • ಅಸ್ತಿತ್ವದಲ್ಲಿರುವ ಕಟ್ಟಡವು ಕರ್ನಾಟಕ ಪೌರಸಭೆಗಳ ಕಾಯ್ದೆ ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ ಅಥವಾ KTCP ಕಾಯ್ದೆ 1961 ರಡಿಯಲ್ಲಿ ಮಾಡಲಾದ ನಿಯಮಗಳನ್ವಯ ಕಟ್ಟಡ ಪರವಾನಗಿ ನೀಡಲು ಅರ್ಹವಾಗಿದ್ದಲ್ಲಿ ಕಟ್ಟಡ ಪರವಾನಗಿ ನೀಡುವುದು. ನಂತರದಲ್ಲಿ ಸದರಿ ಫ್ಲಾಟ್ ಗಳಿಗೆ ಎ-ಖಾತಾ ನೀಡುವುದು. ಒಂದು ವೇಳೆ ಅಂತಹ ಕಟ್ಟಡವು ವಲಯ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಸದರಿ ಫ್ಲಾಟ್​ಗಳಿಗೆ ಬಿ-ಖಾತಾ ನೀಡುವುದು. ಒಂದು ವೇಳೆ ಬಹುಮಹಡಿ ಕಟ್ಟಡ / ಫ್ಲಾಟ್​ಗಳ ಮಾರಾಟ 10-09-2024ರ ಪೂರ್ವದಲ್ಲಿ ಆಗಿದ್ದು, ಸದರಿ ಫ್ಲಾಟ್​​ಗಳಿಗೆ ಪ್ರಸ್ತುತ ಮಾಲೀಕರುಗಳು ಅರ್ಜಿ ಸಲ್ಲಿಸಿ ಬಿ-ಖಾತಾ ಪಡೆಯುವುದು. ಒಂದು ವೇಳೆ ಈಗಾಗಲೇ ಭೂಪರಿವರ್ತನೆಯಾಗಿದ್ದು, ನಿಯಮಗಳನ್ನು ಪೂರೈಸಿದಲ್ಲಿ ಎ-ಖಾತಾ ನೀಡಲಾಗುವುದು.
  • ಭೂಪರಿವರ್ತನೆಯಾದ ನಂತರದಲ್ಲಿ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಖಾಲಿ ಭೂಮಿಯನ್ನು ಉಪ-ವಿಭಾಗ ಮಾಡಿ, ನೋಂದಾಯಿತ ಪತ್ರಗಳ ಮೂಲಕ 10-09-2024ರ ಪೂರ್ವದಲ್ಲಿ ಮಾರಾಟ ಮಾಡಿದ ಉಪವಿಭಜಿತ ಖಾಲಿ ನಿವೇಶನಗಳಿಗೆ ಎ ಖಾತಾ ನೀಡಬೇಕಾಗುವುದು.
  • ಭೂಪರಿವರ್ತನೆಯಾಗದೇ ಕಂದಾಯ ಭೂಮಿಯನ್ನು ಅನಧಿಕೃತ ಉಪ-ವಿಭಾಗ ಮಾಡಿ 10-09-2024ರ ಪೂರ್ವದಲ್ಲಿ ನೋಂದಾಯಿತ ಪತ್ರದ ಮೂಲಕ ವಹಿವಾಟು ನಡೆಸಿ, ನಗರ ಸ್ಥಳೀಯ ಸಂಸ್ಥೆಗಳಿಂದ ಖಾತಾ ನೀಡಲಾಗಿರುವ ಕಂದಾಯ ಖಾಲಿ ನಿವೇಶನಗಳಿಗೆ ಎ ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ