ಹಾಸನ, ಜೂನ್ 30: ಹಾಸನ (Hassan) ಜಿಲ್ಲೆಯಲ್ಲಿ ಹೃದಯಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 40 ದಿನಗಳ ಅಂತರದಲ್ಲಿ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತದಿಂದ ಸಾವಿಗೀಡಾಗುವರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರು ತಜ್ಞರ ಸಮಿತಿ ರಚಿಸಿದ್ದು, ಸರಣಿ ಸಾವುಗಳ ಬಗ್ಗೆ ಅಧ್ಯಯನ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಡಿಸಿ ಲತಾ ಕುಮಾರಿ ಮಾತನಾಡಿ, ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಹಿಮ್ಸ್ ನಿರ್ದೇಶಕರ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ, ಡಿಎಚ್‌ಓ, ಹಾಸನ ಜಿಲ್ಲಾಸ್ಪತ್ರೆ ನಿರ್ದೇಶಕರು, ವೈದ್ಯಕೀಯ ವಿಭಾಗದ ವೈದ್ಯಾಧಿಕಾರಿಗಳು ಒಳಗೊಂಡಂತೆ ಐದು ಜನರ ಸಮಿತಿ ರಚಿಸಲಾಗಿದೆ. ಈ ಸಂಬಂಧ ವಿಸ್ತೃತ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ಚಿಕ್ಕ ವಯಸ್ಸಿನವರ ಸಾವಿಗೆ ಕಾರಣವೇನು, ಎಲ್ಲಿ ಸಾವಾಗಿದೆ, ಹೇಗೆ ಸಾವಾಗಿದೆ, ಮರಣೋತ್ತರ ಪರೀಕ್ಷೆ ವರದಿ, ಮರಣ ಪ್ರಮಾಣ ಪತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸೂಚನೆ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ಮೊದಲು ಸಮಾಲೋಚನೆ ನಡೆಸಿ ಮಾಹಿತಿ ಕೊಡಬೇಕು. ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದಾರಾ ಎಂಬ ಮಾಹಿತಿ ಕಲೆ ಹಾಕಬೇಕು. ನಿಖರವಾಗಿ ಎಷ್ಟು ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುವುದು ಗೊತ್ತಾಗಿಲ್ಲ ಎಂದು ಹೇಳಿದರು.