ಬೆಂಗಳೂರು, ಜುಲೈ 1: ‘ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ’ ಎಂದು ಅಳಂದ ಶಾಸಕ ಬಿಆರ್ ಪಾಟೀಲ್ (BR Patil) ಆಡಿದ್ದ ಅಬ್ಬರದ ಮಾತು ಕಾಂಗ್ರೆಸ್ (Congress) ಮನೆಯನ್ನನ್ನು ನಡುಗಿಸಿತ್ತು. ಸರ್ಕಾರವನ್ನು ಅಲುಗಾಡಿಸಿತ್ತು. ವಸತಿ ಯೋಜನೆಯಲ್ಲಿ ಮನೆ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಬಿಆರ್ ಪಾಟೀಲ್ ಆರೋಪದಿಂದ ಶುರುವಾದ ಅಸಮಾಧಾನದ ಜ್ವಾಲೆ ಕೈಪಡೆಯನ್ನು ಬಡಿದೆಬ್ಬಿಸಿತ್ತು. ಬಿಆರ್ ಪಾಟೀಲ್ ಬೆನ್ನಲ್ಲೇ ಶಾಸಕರಾದ ರಾಜುಕಾಗೆ, ಬೇಳೂರು ಗೋಪಾಲಕೃಷ್ಣ, ವೈ.ಎನ್ ಗೋಪಾಲಕೃಷ್ಣ ಅಸಮಾಧಾನ ಹೊರಹಾಕಿದ್ದರು. ಶಾಸಕರ ಈ ಸಿಟ್ಟು ಯಾರನ್ನು ಎಚ್ಚರಿಸಿದೆಯೋ ಬಿಟ್ಟಿದೆಯೋ, ಆದರೆ, ಕಾಂಗ್ರೆಸ್ ಹೈಕಮಾಂಡನ್ನು ಅಲರ್ಟ್ ಮಾಡಿದೆ. ಶಾಸಕರ ಅಸಮಾಧಾನದ ಬೆನ್ನಲ್ಲೇ ಸಿಡಿದ ಕ್ರಾಂತಿ ಮಾತು, ಬದಲಾವಣೆ ಕಿಚ್ಚು ರಾಜ್ಯ ಉಸ್ತುವಾರಿ ಸುರ್ಜೇವಾಲ ಬೆಂಗಳೂರಿಗೆ ಬರುವಂತೆ ಮಾಡಿತ್ತು.
ಕಾಂಗ್ರೆಸ್ ಶಾಸಕರ ದೂರು ಆಲಿಸಲು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ, ಮೊದಲು ಬಿಆರ್ ಪಾಟೀಲ್ರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ಬಿಆರ್ ಪಾಟೀಲ್ ವಸತಿ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹಣ ಕೊಟ್ಟವರಿಗಷ್ಟೇ ಮನೆ ಹಂಚ್ತಾರೆ ಎಂದು ಬಹಿರಂಗವಾಗಿ ದೂರಿದ್ದರು. ಸುರ್ಜೇವಾಲ ಭೇಟಿ ವೇಳೆಯೂ ಇದೇ ವಿಚಾರದ ಬಗ್ಗೆ ಚರ್ಚಿಸಿದ್ದಾರೆ. 35 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ, ತಮ್ಮ ಆರೋಪಕ್ಕೆ ದಾಖಲೆ ಕೂಡ ನೀಡಿದ್ದಾರೆ ಪಾಟೀಲ್.
ನಿಗದಿಯಂತೆ ಸೋಮವಾರ ರಾಜುಕಾಗೆ ಜೊತೆ ಚರ್ಚೆ ನಡೆಯಬೇಕಿತ್ತು. ಆದರೆ ಹಿರಿಯ ನಾಯಕ ರಾಜುಕಾಗೆ ಬೆಳಗಾವಿ ಬಿಟ್ಟು ಬಂದಿಲ್ಲ. ಈ ಬಗ್ಗೆ ‘ ಸ್ಪಷ್ಟನೆ ಕೊಟ್ಟಿರುವ ಶಾಸಕ, ಇಂದು ಬೆಳಗ್ಗೆ 11 ಗಂಟೆಗೆ ಭೇಟಿ ಆಗುತ್ತೇನೆ ಎಂದಿದ್ದಾರೆ
Laxmi News 24×7