Breaking News

ಎರಡು ಮೇಕೆಗಳು 5.10 ಲಕ್ಷ ರೂಪಾಯಿಗೆ ಮಾರಾಟ

Spread the love

ಎರಡು ಮೇಕೆಗಳು 5.10 ಲಕ್ಷ ರೂಪಾಯಿಗೆ ಮಾರಾಟ
ಚಿಕ್ಕೋಡಿ-ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ಶಿವಪ್ಪ ಶೆಂಡೂರೆ ಹಾಗೂ ಶಾಂತಾ ಶೆಂಡೂರೆ ದಂಪತಿ ಸಾಕಿದ ಪಂಜಾಬ್ ಮೂಲದ ಬೀಟಲ್ ತಳಿಯ ಎರಡು ಮೇಕೆ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 5.10 ಲಕ್ಷಕ್ಕೆ ಮಾರಾಟವಾಗಿವೆ. ಒಂದು ಮೇಕೆ ₹ 3 ಲಕ್ಷಕ್ಕೆ ಹಾಗೂ ಇನ್ನೊಂದು ಮೇಕೆ ₹ 2.10 ಲಕ್ಷಕ್ಕೆ ಮಾರಾಟವಾಗಿವೆ.
ಎರಡೂ ಮೇಕೆಗಳನ್ನು ವಿಜಯಪುರ ಮೂಲದ ಮೋಜಿಮ್ ಮತ್ತು ಆಸೀಫ್ ವ್ಯಾಪಾರಿಗಳು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಮುಂಗಡ ಹಣ ನೀಡಿ ಕಾಯ್ದಿರಿಸಿದ್ದರು. ಗುರುವಾರದಂದು ಪೂರ್ಣ ಪ್ರಮಾಣದ ಹಣ ನೀಡಿ ಮೇಕೆಗಳನ್ನು ಖರೀದಿಸಿ ತೆಗೆದುಕೊಂಡು ಹೋದರು. ಮೇಕೆಗಳಿಗೆ ಗುಲಾಲು ಎರಚಿ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ, ಆರತಿಯನ್ನು ಬೆಳಗಿ ಬೀಳ್ಕೊಡಲಾಯಿತು. ಕೇಕ್ ಕಟ್ ಮಾಡಿ ಸಂಭ್ರಮಿಸಲಾಯಿತು.
ಕಳೆದ ವರ್ಷ ಶೆಂಡೂರೆ ದಂಪತಿ ಇದೇ ತಳಿಯ ಮೇಕೆ ಮರಿಯನ್ನು 11 ತಿಂಗಳುಗಳ ಕಾಲ ಸಾಕಿ ₹ 1.80 ಲಕ್ಷಕ್ಕೆ ಮಾರಾಟ ಮಾಡಿದ್ದರು, ಹೀಗಾಗಿ ಪ್ರಸಕ್ತ ವರ್ಷ ಬೀಟಲ್ ತಳಿಯ ನಾಲ್ಕು ಮೇಕೆ ಮರಿಗಳನ್ನು ₹ 1.60 ಲಕ್ಷಕ್ಕೆ ಖರೀದಿಸಿ ತಂದಿದ್ದರು. ಎರಡು ಮೇಕೆಗಳು ಸಾವನ್ನಪ್ಪಿದ್ದರೆ, ಇನ್ನೆರಡು ಮೇಕೆ ಮರಿಗಳನ್ನು 11 ತಿಂಗಳ ಕಾಲ ಸಾಕಿ ಇದೀಗ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ₹ 5.10 ಲಕ್ಷಕ್ಕೆ ಮಾರಾಟ ಮಾಡಿದ್ದು ವಿಶೇಷವಾಗಿದೆ.
ಬೀಟಲ್ ತಳಿಯ ಮೇಕೆ ದೊಡ್ಡದಾದ ದೇಹ, ಉದ್ದನೆಯ ಕಿವಿ, ಸಣ್ಣದಾದ ಮುಖ ಹೊಂದಿದ್ದು, ಮಾಂಸಕ್ಕಾಗಿಯೇ ಈ ತಳಿಯ ಮೇಕೆಗಳನ್ನು ಸಾಖಲಾಗುತ್ತದೆ. ಜಮ್ನಾಪುರಿ, ಮಲಬಾರಿ ತಳಿಯನ್ನು ಹೋಲುವ ಇದನ್ನು ಲಾಹೋರಿ ಮೇಕೆ ಎಂದೂ ಕರೆಯಲಾಗುತ್ತದೆ. ಎರಡೂವರೆ ವರ್ಷ ವಯಸ್ಸಿನ ಎರಡೂ ಮೇಕೆಗಳು ತಲಾ ಎರಡು ಕ್ವಿಂಟಲ್ ತೂಕ ಹೊಂದಿದ್ದು, 4 ಅಡಿಯಷ್ಟು ಎತ್ತರ ಇವೆ.
ಪ್ರತಿ ದಿನ ಮೇಕೆಗಳಿಗೆ ಮೆಕ್ಕೆಜೋಳದ ನುಚ್ಚು, ಶೇಂಗಾದ ಹಿಂಡಿ, ಸದಕ, ಕಾಳುಕಡಿ ಮುಂತಾದ ಆಹಾರಗಳನ್ನು ನೀಡಿ ಕುಸ್ತಿ ಪೈಲವಾನನಂತೆ ಬೆಳೆಸಲಾಗುತ್ತದೆ. ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯೇ ಈ ಮೇಕೆಗಳು ದಾಖಲೆ ಮಾರಾಟದ ಹೆಗ್ಗಳಿಕೆಯನ್ನು ಹೊಂದಿವೆ.
ಕಡಿಮೆ ಜಮೀನ ಹೊಂದಿರುವ ಶೆಂಡೂರೆ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ಹೀಗೆ ಪಂಜಾಬ್ ಮೂಲದ ಬೀಟಲ್ ತಳಿಯ ಮೇಕೆಗಳನ್ನು ಸಾಕಿ, ಮಾರಾಟ ಮಾಡುವ ಮೂಲಕ ಒಂದಿಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಜಮೀನು ನಂಬಿಕೊಂಡು ಕೃಷಿ ಮಾಡಿ ಜೀವನ ಮಾಡುವುದು ಇವರಿಗೆ ಕಷ್ಟಸಾಧ್ಯವಾಗಿತ್ತು

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ