Breaking News

ಬೆಳಗಾವಿಯ ಕನ್ನಡ ರಾಜ್ಯೋತ್ಸವಕ್ಕೆ ಲಕ್ಷಾಂತರ ಜನ ಸಾಕ್ಷಿ: ಕುಣಿದು ಕುಪ್ಪಳಿಸಿದ ಯುವ ಸಮೂಹ

Spread the love

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕನ್ನಡಾಭಿಮಾನಿಗಳ ಅಭೂತಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಯಿತು.

ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ಸಾರಲು ಲಕ್ಷಾಂತರ ಕನ್ನಡಾಭಿಮಾನಿಗಳು ನಗರದ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿ ಒಂದಾಗಿ ರಾಜ್ಯೋತ್ಸವದ ವೈಭವವನ್ನು ಮತ್ತಷ್ಟು ಹೆಚ್ಚಿಸಿದರು.

ಶನಿವಾರ ಸಂಜೆಯಿಂದಲೇ ಆರಂಭಗೊಂಡಿದ್ದ ರಾಜ್ಯೋತ್ಸವದ ಸಂಭ್ರಮ ಭಾನುವಾರ ಇಡೀ ದಿನ ನಗರಾದ್ಯಂತ ಮನೆಮಾಡಿತ್ತು. ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಹಾಗೂ ಕನ್ನಡಾಭಿಮಾನಿಗಳು ಬೆಳಗಾವಿಗೆ ಆಗಮಿಸಿದ್ದರು. ಚನ್ನಮ್ಮ ವೃತ್ತದ ಸುತ್ತಮುತ್ತ ಜನಸಾಗರವೇ ಹರಿದುಬಂದಿದ್ದು, ಎತ್ತ ನೋಡಿದರೂ ಕನ್ನಡದ ಹಳದಿ-ಕೆಂಪು ಬಾವುಟಗಳು ರಾರಾಜಿಸುತ್ತಿದ್ದವು

ಕೈಯಲ್ಲಿ ಕನ್ನಡ ಧ್ವಜಗಳನ್ನು ಹಿಡಿದು, ಕನ್ನಡಪರ ಘೋಷಣೆಗಳನ್ನು ಮೊಳಗಿಸುತ್ತ ಸಾಗಿದ ಯುವ ಸಮೂಹ ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿತು. ಡೊಳ್ಳು, ಹಲಗೆ ಹಾಗೂ ವಿವಿಧ ಸಂಗೀತದ ಅಬ್ಬರದ ನಡುವೆ ಯುವಕರ ಉತ್ಸಾಹ ಮುಗಿಲು ಮುಟ್ಟಿತ್ತು. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಬಡಾವಣೆಗಳು ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೆದ್ದವು.

ನಗರದ ವಿವಿಧ ಬಡಾವಣೆಗಳು ಹಾಗೂ ಗಲ್ಲಿಗಳಿಂದ ಆಗಮಿಸಿದ ಆಕರ್ಷಕ ರೂಪಕ ವಾಹನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಮಹನೀಯರ ಸಾಧನೆಗಳನ್ನು ಬಿಂಬಿಸುವ ರೂಪಕ ವಾಹನಗಳು ಜನರ ಗಮನ ಸೆಳೆದವು. ರೂಪಕ ವಾಹನಗಳ ಮುಂದೆ ಕನ್ನಡದ ನಾಮಫಲಕಗಳನ್ನು ಹಿಡಿದ ಯುವಕರು ಹಾಡುಗಳ ತಾಳಕ್ಕೆ ಹೆಜ್ಜೆ ಹಾಕುತ್ತ ಸಾಗಿದರು.

ಇನ್ನು, ಲಕ್ಷಾಂತರ ಜನರ ಸೇರ್ಪಡೆಯಿಂದ ಚನ್ನಮ್ಮ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಚನ್ನಮ್ಮ ವೃತ್ತದ ಸುತ್ತಮುತ್ತ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಿದರು. ಜನಸಂದಣಿ ನಿಯಂತ್ರಣ, ವಾಹನ ಸಂಚಾರ ವ್ಯವಸ್ಥೆ ಹಾಗೂ ಭದ್ರತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸಂಜೆ ಕಳೆದು ರಾತ್ರಿ ಆದರೂ ಕನ್ನಡಾಭಿಮಾನಿಗಳ ಉತ್ಸಾಹ ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಕನ್ನಡದ ಹಾಡುಗಳು, ಘೋಷಣೆಗಳು ಹಾಗೂ ನೃತ್ಯಗಳೊಂದಿಗೆ ರಾಜ್ಯೋತ್ಸವದ ಸಂಭ್ರಮ ಹಲವು ಗಂಟೆಗಳ ಕಾಲ ಮುಂದುವರಿಯಿತು. ರಾತ್ರಿ 11 ಗಂಟೆಯಾದರೂ ಚನ್ನಮ್ಮ ವೃತ್ತದ ಸುತ್ತಮುತ್ತ ಜನರ ಉತ್ಸಾಹ ಮುಂದುವರಿದಿತ್ತು.

ಕೊನೆಗೆ ರಾತ್ರಿ 11 ಗಂಟೆಯ ವೇಳೆಗೆ ಪೊಲೀಸರು ಮೈಕ್ ಮೂಲಕ ಜನರಿಗೆ ಮನವಿ ಮಾಡಿ, ರಾಜ್ಯೋತ್ಸವದ ಸಂಭ್ರಮವನ್ನು ಮುಕ್ತಾಯಗೊಳಿಸಿ ಸುರಕ್ಷಿತವಾಗಿ ತಮ್ಮ ಮನೆಗಳತ್ತ ತೆರಳುವಂತೆ ಸೂಚಿಸಿದರು.

ಹೀಗೆ ಗಡಿನಾಡು ಬೆಳಗಾವಿಯಲ್ಲಿ ಕನ್ನಡಾಭಿಮಾನದ ಶಕ್ತಿ, ಒಗ್ಗಟ್ಟು ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ 71ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿ ಸಂಭ್ರಮದೊಂದಿಗೆ ಗಮನ ಸೆಳೆಯಿತು.


Spread the love

About Laxminews 24x7

Check Also

ದೀಪಾವಳಿಗೆ ಬರ್ತೀನಿ ಅಂದಿದ್ದ ಮಗ ಬಾರದ ಲೋಕಕ್ಕೆ ಹೋದ: ಕಣ್ಣೀರಿಟ್ಟ ಅರುಣ ಸಾಳುಂಕೆ ತಂದೆ

Spread the loveಬೆಳಗಾವಿ: ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಪತನದಲ್ಲಿ ಬೆಳಗಾವಿ ಜಿಲ್ಲೆಯ ಹೆಮ್ಮೆಯ ಪೊಲೀಸ್ ಅಧಿಕಾರಿ, ಬೆಂಗಳೂರು ಸಿಸಿಬಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ