ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ಯಾಕಿಷ್ಟು ವಿಳಂಬ?

Spread the love

ಬೆಳಗಾವಿ, ನವೆಂಬರ್ 17: ಬೆಳಗಾವಿ-ಧಾರವಾಡ ವಯಾ ಕಿತ್ತೂರು ನೇರ ರೈಲು ಮಾರ್ಗ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಕನಸಿನ ಯೋಜನೆ ಇದು. ಯೋಜನೆಯ ಕಾಮಗಾರಿಗೆ ಭೂ ಸ್ವಾಧೀನ ಕಾರ್ಯವೇ ಅಡ್ಡಿಯಾಗಿದೆ.

ಈಗಾಗಲೇ ಈ ಯೋಜನೆ ನಕ್ಷೆಯನ್ನು ಯಾವುದೇ ಕಾರಣಕ್ಕೂ ಬದಲಿಸಲಾಗದು. ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಮ್ಮ ಕೆಲಸ ಆರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಬೆಳಗಾವಿ-ಧಾರವಾಡ ವಯಾ ಕಿತ್ತೂರು ರೈಲು ಮಾರ್ಗ ಸುರೇಶ್ ಅಂಗಡಿ ಅವರ ಕನಸಾಗಿತ್ತು. ಈ ಕನಸನ್ನು ಆದಷ್ಟು ಬೇಗ ನನಸಾಗಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದರು.

73 ಕಿ. ಮೀ. ನೇರ ರೈಲು ಮಾರ್ಗದ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಇದರಿಂದಾಗಿ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆಯಾಗಲಿದೆ. ಈ ಯೋಜನೆಗೆ 888 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬೆಳಗಾವಿಯಲ್ಲಿ 600 ಎಕರೆ ಮತ್ತು ಧಾರವಾಡದಲ್ಲಿ 228 ಎಕರೆ ಭೂಮಿ ಬೇಕಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಭೂ ಸ್ವಾಧೀನ ಯಾವ ಹಂತದಲ್ಲಿ?: ಈ ಹಿಂದೆ ಸಭೆ ನಡೆಸಿದ್ದ ಸಚಿವ ವಿ. ಸೋಮಣ್ಣ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಭೂ ಸ್ವಾಧೀನ ಚುರುಕುಗೊಳಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಭೂ ಸ್ವಾಧೀನ ಕಾರ್ಯ ಆರಂಭಿಸಲಾಗಿದೆ. 444 ಎಕರೆ ಸ್ವಾಧೀನ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳು ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜನವರಿ 25, 26ರ ಹೊತ್ತಿಗೆ ರೈಲ್ವೆ ಇಲಾಖೆಗೆ ಭೂಮಿಯನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.

ಧಾರವಾಡದಲ್ಲಿ 42 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಯೋಜನೆ ಕುರಿತು ಆಸಕ್ತಿ ಹೊಂದಿದ್ದು, ವಿಶೇಷ ಭೂ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿದೆ. ರೈಲ್ವೆ ಇಲಾಖೆಗೆ ಆದಷ್ಟು ಶೀಘ್ರವೇ ಭೂಮಿ ಹಸ್ತಾಂತರ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿಯೂ ಈ ರೈಲು ಯೋಜನೆ ಕುರಿತು ಚರ್ಚೆ ನಡೆದಿತ್ತು. ಸಭೆಯಲ್ಲಿ ಮಾತನಾಡಿದ್ದ ಸಚಿವರು ಬೆಳಗಾವಿ-ಧಾರವಾಡ ರೈಲು ಮಾರ್ಗ ಕಾಮಗಾರಿ ಭೂಸ್ವಾಧೀನ ಹಾಗೂ ಹೆಚ್ಚಿನ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆಯಿಂದಾಗಿ ರೈಲುಮಾರ್ಗ ಯೋಜನೆ ವಿಳಂಬಗೊಳ್ಳುತ್ತಿದೆ ಎಂದು ಹೇಳಿದ್ದರು.

ತೇಗೂರದಿಂದ ದೇಸೂರವರೆಗೆ ನೂತನ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ದೇಸೂರ-ಕಣವಿನಕೊಪ್ಪ ನಡುವೆ 150 ಎಕರೆ ನೀರಾವರಿ ಭೂಮಿ ಇರುವುದರಿಂದ ಮಾರ್ಗ ಬದಲಾಯಿಸುವಂತೆ ರೈತರು ಕೋರಿದ್ದರು. ಆದರೆ ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ರೈತರಿಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು ಹಲವಾರು ಬಾರಿ ಸಭೆ ನಿಗದಿಪಡಿಸಲಾಗಿತ್ತು. ಆದರೆ ಇನ್ನೂ ಸಹ ಭೂ ಸ್ವಾಧೀನದ ಕಾರ್ಯ ನಡೆದಿಲ್ಲ.

ಬೆಳಗಾವಿ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್‌ ಅಂಗಡಿ ಅವರು ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗದ ಯೋಜನೆ ರೂಪಿಸಿದ್ದರು. ಬಿ. ಎಸ್. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರವು ಯೋಜನೆಗೆ ಒಪ್ಪಿಗೆಯನ್ನು ಕೊಟ್ಟಿತ್ತು. 73 ಕಿ. ಮೀ. ಉದ್ದದ ಈ ರೈಲು ಮಾರ್ಗವನ್ನು 2020-21ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50:50ರಂತೆ ವೆಚ್ಚವನ್ನು ಹಂಚಿಕೆ ಮಾಡಿಕೊಂಡು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಅಲ್ಲದೇ ಯೋಜನೆಗೆ ರಾಜ್ಯ ಸರ್ಕಾರ ಉಚಿತವಾಗಿ ಭೂಮಿಯನ್ನು ನೀಡುತ್ತಿದೆ. ಈ ನೂತನ ರೈಲು ಮಾರ್ಗಕ್ಕೆ 927.42 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 2023-24ನೇ ಸಾಲಿನಲ್ಲಿ ಯೋಜನೆಗಾಗಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.


Spread the love

About Laxminews 24x7

Check Also

ಬೆಳ್ಳುಳ್ಳಿ ಬೆಲೆ ಕೆ.ಜಿಗೆ ₹400: ಬಹುತೇಕ ತರಕಾರಿ ಬೆಲೆ ಸ್ಥಿರ

Spread the love ರಾಯಚೂರು: ಮಳೆಗಾಲ ಮುಗಿದು ಚಳಿಗಾಲ ಪ್ರವೇಶ ಮಾಡಿದೆ. ಬಿಸಿಲ ಧಗೆ ಮುಂದುವರಿದರೂ ರಾತ್ರಿ ಸ್ವಲ್ಪ ಮಟ್ಟಿಗೆ ಸೆಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ