ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಗಣ್ಯರು ಹಾಗೂ ಅತಿಥಿಗಳು ನಗಾರಿ, ಕಂಸಾಳೆ, ಡೊಳ್ಳು ಬಾರಿಸುವ ಮೂಲಕ ‘ಯುವ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು.
ಸಮಾರಂಭದ ಮೆರುಗು ಹೆಚ್ಚಿಸಿದ ನೃತ್ಯ ಪ್ರದರ್ಶನಎಂಟು ದಿನಗಳ ಕಾರ್ಯಕ್ರಮ: ಈ ವೇಳೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ಎಂಟು ದಿನಗಳ ಕಾಲ ವಿವಿಧ ಜಿಲ್ಲೆಗಳ 400 ಕಾಲೇಜಿನ ಸುಮಾರು 12 ಸಾವಿರ ವಿದ್ಯಾರ್ಥಿಗಳಿಂದ ನಡೆಯಲಿದೆ. ಅನೇಕ ಉತ್ತಮ ವಸ್ತುವಿಷಯ ಕುರಿತು ನೃತ್ಯ ರೂಪಕಗಳು ಪ್ರದರ್ಶನಗೊಳ್ಳುವ ಮೂಲಕ ದೇಶಕ್ಕೆ ಉತ್ತಮವಾದ ಸಂದೇಶ ಸಿಗಲಿದೆ ಎಂದು ತಿಳಿಸಿದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಯುವ ಸಮೂಹ ಶೇ.42 ರಷ್ಟಿದೆ. ದೇಶದ ಭವಿಷ್ಯ ನಿಂತಿರುವುದು ಯುವಕರ ಬದುಕಿನ ಮೇಲೆ. ಅವರ ಬದುಕಿಗೆ ಭದ್ರ ಬುನಾದಿಯನ್ನು ಉತ್ತಮ ಸಿದ್ಧಾಂತದ ಮೇಲೆ ನಿರ್ಮಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕಂಡು ಬಂದ ಜನಸಮೂಹಯುವಕರಿಗೆ ಕಿವಿಮಾತು: ನಮ್ಮ ದೇಶದ ಚಾರಿತ್ರಿಕ ಹಿನ್ನೆಲೆ, ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕ ಬದುಕು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆಶಯದ ಸೈದ್ಧಾಂತಿಕ ಅಡಿಪಾಯದಲ್ಲಿ ಯುವ ಜನರು ಬದುಕನ್ನು ರೂಪಿಸಿಕೊಳ್ಳುವ ಜೊತೆಗೆ ಬುದ್ಧ, ಬಸವ, ಡಾ.ಬಿ.ಆರ್ ಅಂಬೇಡ್ಕರ್‌ರ ಆಶಯದಂತೆ ದೇಶವನ್ನು ಬಲಿಷ್ಠವಾಗಿ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಕರೆ ನೀಡಿದರು.