ಬೆಳಗಾವಿ: ಸಾಧಕರ ಸಾಧನೆ ಹಿಂದೆ ಪರಿಶ್ರಮ ಮತ್ತು ಕಣ್ಣೀರಿನ ಕಥೆ ಇರುತ್ತದೆ. ಎಷ್ಟೋ ರಾತ್ರಿಗಳನ್ನು ಹಗಲುಗಳನ್ನಾಗಿ ಪರಿವರ್ತಿಸಿಕೊಂಡಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಮುರುಗೇಶ ಎಚ್.ಎಂ. ಅಭಿಪ್ರಾಯಪಟ್ಟರು.
ನಗರದ ಭಡಕಲ್ ಗಲ್ಲಿಯ ಬನಶಂಕರಿ ದೇವಸ್ಥಾನದ ಸಭಾಗೃಹದಲ್ಲಿ ರವಿವಾರ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಸಾಧನೆಯ ಮೆಟ್ಟಿಲು ಏರಲು ಅಡ್ಡ ಮಾರ್ಗವನ್ನು ಹಿಡಿಯದೇ ನ್ಯಾಯೋಚಿತ ಮಾರ್ಗವನ್ನು ಅನುಸರಿಸಬೇಕು. ಇದು ಇತರರಿಗೂ ಮಾದರಿ ಆಗುತ್ತದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿ ಅದರಿಂದ ತಮ್ಮ ಗುರಿಯನ್ನು ತಲುಪಬೇಕು. ಬಡತನವನ್ನು ಹಿಮ್ಮೆಟ್ಟಿಸಿ ತಮ್ಮ ತಂದೆ-ತಾಯಿ ಪಟ್ಟ ಶ್ರಮಕ್ಕೆ ನಿಮ್ಮ ಸಾಧನೆ ತೋರಿಸಿಕೊಡಬೇಕು ಎಂದು ಸಲಹೆ ನೀಡಿದರು.
ವಿದ್ಯೆ ಸಾಧಕರ ಸ್ವತ್ತು, ಸೋಮಾರಿಗಳ ಸ್ವತ್ತಲ್ಲ ಎಂಬ ಅರಿವು ಇರಬೇಕು. ಸವಾಲಿಲ್ಲದೇ ಸಾಧನೆ ಮಾಡಿದರೆ ಅದು ಯಶಸ್ಸು. ಸವಾಲುಗಳ ಮಧ್ಯೆ ಸಾಧನೆ ಮಾಡಿದರೆ ಅದು ಇತಿಹಾಸವಾಗುತ್ತದೆ. ವಿದ್ಯಾರ್ಥಿಗಳು ಏನನ್ನಾದರೂ ಕಳೆದುಕೊಳ್ಳಿ, ಆದರೆ ನಿಮ್ಮನ್ನು ನೀವು ಕಳೆದುಕೊಳ್ಳಬೇಡಿ. ಒಂದೊಮ್ಮೆ ನಮ್ಮತನವನ್ನು ಕಳೆದುಕೊಂಡರೆ ಸಾತ್ವಿಕ ಬದುಕು ನಡೆಸುವುದು ಕಷ್ಟವಾದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮುಂದೆ ಮುನ್ನುಗ್ಗಬೇಕು ಎಂದರು.
ಲಾಭಕ್ಕಾಗಿ ಹುಟ್ಟಿಕೊಂಡ ಸಂಸ್ಥೆಗಳು ಅನೇಕ. ಆದರೆ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಂಘ ಲಾಭದ ಜತೆಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳ ಮೂಲಕ ಪಾರದರ್ಶಕವಾಗಿ ಸೇವೆ ನೀಡುತ್ತಿರುವುದು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. 11 ವರ್ಷಗಳಿಂದ ಸಂಘದ ಸದಸ್ಯರ ಮಕ್ಕಳ ಪ್ರತಿಭೆ ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡುವುದರ ಜತೆಗೆ ಅವರ ಉನ್ನತಿಗಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.