ನಗರದ ಟಿ.ದಾಸರಹಳ್ಳಿಯ ಪೀಣ್ಯ ಕೈಗಾರಿಕಾ ಪ್ರದೇಶದ ಎಸ್.ಎ.ಪಿ.ಎಲ್ ಇಂಡಸ್ಟ್ರೀಸ್ ಪ್ರೈ.ಲಿ.ನ 1ನೇ ಯೂನಿಟ್‍ನಿಂದ ಸುಮಾರು 500ರಿಂದ 600 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿರುವ ಆರೋಪ ಕೇಳಿಬಂದಿದೆ. ಎರಡು ತಿಂಗಳು ಸಂಬಳವನ್ನೂ ನೀಡದೆ ಕೆಲಸದಿಂದ ತೆಗೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಸಂಬಳ ನೀಡಬೇಕು ಹಾಗೂ ಮರಳಿ ಕೆಲಸ ನೀಡುವಂತೆ ನೂರಾರು ಕಾರ್ಮಿಕರು ಕಣ್ಣೀರು ಹಾಕುತ್ತಿದ್ದಾರೆ.
ಮನೆಯಲ್ಲಿ ದಿನಸಿ ಇಲ್ಲ, ಜೀವನ ನಡೆಸಲು ಆಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸಂಬಳ ನೀಡುವಂತೆ ಮಹಿಳಾ ಕಾರ್ಮಿಕರು ಆಗ್ರಹಿಸಿದ್ದಾರೆ. ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳ ಕಂಪನಿಗಳಿಗೆ ತೊಂದರೆ ಉಂಟಾಗಿದೆ. ಆದರೆ ಕಾರ್ಮಿಕರಿಗೆ ತೊಂದರೆ ನೀಡಬಾರದು, ಕೆಲಸದಿಂದ ವಜಾ ಮಾಡಬಾರದು ಎಂದು ಸರ್ಕಾರ ಹೇಳಿದೆ. ಆದರೂ ಕೆಲ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ.