ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಜೆಪಿ ಸಭೆ ನಡೆಸುತ್ತಿದ್ದು, ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ನಡುವೆಯೇ ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ಸವದಿ ಟಿಕೇಟ್ ವಿಷಯದಲ್ಲಿ ಮುನಿಸಿಕೊಂಡಿದ್ದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ಆರಂಭವಾಗಿದ್ದು, ಟಿಕೆಟ್ ಗಾಗಿ ಬಿಜೆಪಿ ಹಿರಿಯ ಮುಖಂಡ ಲಕ್ಷ್ಮಣ ಸವದಿ ಹಾಗೂ ಮಹೇಶ ಕುಮಟಳ್ಳಿ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಮಹೇಶ್ ಕುಮಟಳ್ಳಿ ಪರ ರಮೇಶ್ ಜಾರಕಿಹೊಳಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಟಿಕೆಟ್ ಕೈ ತಪ್ಪಿದರೆ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಗೆ ಸೆಳೆಯುವ ಯತ್ನ ನಡೆದಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮುಸುಕಿನ ಗುದ್ದಾಟದಂತಿದ್ದ ಈ ಫೈಟ್ ಪ್ರಸ್ತುತ ಮಾತು ಪ್ರತಿ ಮಾತಿಗೆ ಕಾರಣವಾಗಿದೆ. ಅಲ್ಲದೇ ಮಾಜಿ ಸಚಿವ ರಮೇಶ ಜಾರಕಿಹೊಳಿ ಕೈ ಮೇಲಾಗುವ ಸಾಧ್ಯತೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ತಮಗೆ ಟಿಕೇಟ್ ಸಿಗುವುದಿಲ್ಲ ಎಂದು ಖಾತ್ರಿಯಾದ ಬಳಿಕ ಸವದಿ ಕಾಂಗ್ರೆಸ್ ಕದತಟ್ಟುವ ಯತ್ನದಲ್ಲಿದ್ದಾರೆ.
ಮಾತುಕತೆ: ಕಾಂಗ್ರೆಸ್ ನ ಹಿರಿಯ ನಾಯಕರು ಲಕ್ಷ್ಮಣ ಸವದಿ ಅವರ ಸಂಪರ್ಕದಲ್ಲಿದ್ದು, ಕೊಪ್ಪಳ ಮೂಲದ ಶಾಸಕರ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಾಯುತ್ತಿರುವ ಲಕ್ಷ್ಮಣ ಸವದಿ ಟಿಕೆಟ್ ಸಿಕ್ಕದಿದ್ದಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.