Home / ಹುಬ್ಬಳ್ಳಿ / ಅಖಿಲ್ ಶವ ಹೊರಕ್ಕೆ; ಬಂಧಿತರ ಸಂಖ್ಯೆ 7ಕ್ಕೆ

ಅಖಿಲ್ ಶವ ಹೊರಕ್ಕೆ; ಬಂಧಿತರ ಸಂಖ್ಯೆ 7ಕ್ಕೆ

Spread the love

ಹುಬ್ಬಳ್ಳಿ: ತಂದೆಯೇ ಸುಪಾರಿ ಕೊಟ್ಟು ಮಗನನ್ನು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಯಾದ ಅಖಿಲ್ ಮಹಾಜನ ಶೇಠ್ (26) ಶವವು ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ಅರಣ್ಯ ಪ್ರದೇಶದ ಪಕ್ಕದ ಜಮೀನಿನಲ್ಲಿ ಬುಧವಾರ ಪತ್ತೆಯಾಗಿದೆ.

ಹಂತಕರು ನೀಡಿದ ಮಾಹಿತಿ ಮೇರೆಗೆ, ಧಾರವಾಡದ ಉಪ ವಿಭಾಗಾಧಿಕಾರಿ ಉಪಸ್ಥಿತಿಯಲ್ಲಿ ಬೆಳಿಗ್ಗೆ ಶವ ಹೊರಕ್ಕೆ ತೆಗೆಯಲಾಗಿದೆ.

ಕಿಮ್ಸ್ ವೈದ್ಯರು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು.

‘ಕೊಲೆಯಲ್ಲಿ ಭಾಗಿಯಾಗಿದ್ದ ಹಳೇ ಹುಬ್ಬಳ್ಳಿಯ ಟೈಗರ್ ರೆಹಮಾನ್, ಮೊಹಮ್ಮದ್ ಹನೀಫ್ ಬೇಪಾರಿ, ರೆಹಮಾನ್ ಹಾಗೂ ಪ್ರಭಯ್ಯ ಹಿರೇಮಠ ಎಂಬುವರನ್ನು ಬುಧವಾರ ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಸುಪಾರಿ ಕೊಟ್ಟ ತಂದೆ ಭರತ ಮಹಾಜನ ಶೇಠ್, ಮಹಾದೇವ ನಾಲವಾಡ, ಸಲೀಂ ಸಲಾವುದ್ದೀನ್ ಮೌಲ್ವಿ ಸೇರಿದಂತೆ ಬಂಧಿತರಾದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಂತಕರ ಪೈಕಿ ಮೂವರನ್ನು ಗಬ್ಬೂರು ಹೊರವಲಯದಲ್ಲಿ ಹಾಗೂ ಮತ್ತೊಬ್ಬನನ್ನು ಹೊಸಪೇಟೆಯಲ್ಲಿ ಬಂಧಿಸಲಾಯಿತು. ನಾಲ್ವರನ್ನು ಕೋರ್ಟ್‌ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ತಂದೆ ಮತ್ತು ಮಗನ ನಡುವಿನ ಭಿನ್ನಾಭಿಪ್ರಾಯಗಳೇ ಕೊಲೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ಮುಂದುವರಿದಿದೆ’ ಎಂದು ಹೇಳಿದರು.

ಪ್ರಕರಣ ಭೇದಿಸಿದ ಎಸಿಪಿ ವಿನೋದ ಮುಕ್ತೇದಾರ, ಇನ್‌ಸ್ಪೆಕ್ಟರ್‌ಗಳಾದ ಉಳಿವೆಪ್ಪ ಸಾತೇನಹಳ್ಳಿ, ಜಗದೀಶ ಹಂಚಿನಾಳ, ಜೆ.ಎಂ. ಕಾಲಿಮಿರ್ಚಿ, ಆನಂದ ಒನಕುದರಿ, ರಮೇಶ ಹೂಗಾರ, ಬಿ.ವಿ. ಮಂಟೂರ, ಜಯಪಾಲ ಪಾಟೀಲ, ಪಿಎಸ್‌ಐಗಳಾದ ಸದಾಶಿವ ಕಾನಟ್ಟಿ, ಶರಣು ದೇಸಾಯಿ, ಸಾತನ್ನವರ ಅವರನ್ನೊಳಗೊಂಡ ತಂಡಕ್ಕೆ ಲಾಭೂರಾಮ್ ಅವರು ₹50 ಸಾವಿರ ನಗದು ಬಹುಮಾನ ನೀಡಿದರು.

ಅರಿಹಂತ ನಗರದ ಚಿನ್ನಾಭರಣ ಅಂಗಡಿ ಮಾಲೀಕ ಹಾಗೂ ಉದ್ಯಮಿ ಭರತ, ತನ್ನ ಮಗನ ಕಿರುಕುಳದಿಂದ ಬೇಸತ್ತು ಕೊಲೆಗೆ ಸುಪಾರಿ ಕೊಟ್ಟಿದ್ದರು. ಡಿ. 1ರಂದು ಸ್ವತಃ ಕಾರಿನಲ್ಲಿ ಕರೆದೊಯ್ದು ಹಂತಕರಿಗೆ ಮಗನನ್ನು ಒಪ್ಪಿಸಿ ವಾಪಸ್ಸಾಗಿದ್ದರು. ನಂತರ, ಮಗ ಕಾಣೆಯಾಗಿದ್ದಾನೆ ಎಂದು ಡಿ. 3ರಂದು ಕೇಶ್ವಾಪುರ ಠಾಣೆಗೆ ಸಹೋದರನಿಂದ ದೂರು ಕೊಡಿಸಿದ್ದರು. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಷಯ ಬಹಿರಂಗಗೊಂಡಿತು.

ಹೂಳುವಾಗ ಉಪ್ಪು, ಕರ್ಪೂರ ಬಳಕೆ!

ಜಮೀನಿನಲ್ಲಿರುವ ಶೆಡ್‌ನಲ್ಲಿದ್ದ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಅಖಿಲ್ ಅವರನ್ನು ಕೊಲೆ ಮಾಡಿದ್ದ ಆರೋಪಿಗಳು, ಶವ ವಾಸನೆ ಬಾರದಿರಲಿ ಎಂದು
ಹೂಳುವಾಗ ಉಪ್ಪು ಹಾಗೂ ಕರ್ಪೂರ ಹಾಕಿದ್ದರು. ಭರತ ನಿರ್ದೇಶಕರಾಗಿರುವ ನಗರದ ಜಿಬಿಎಸ್ ಕಾಲೇಜಿನಲ್ಲಿ ಮಹಾದೇವ ನಾಲವಾಡ ಕೆಲಸ ಮಾಡುತ್ತಿದ್ದರು. ಈತ ತನಗೆ ಪರಿಚಿತನಿದ್ದ ಮೌಲ್ವಿ ಮೂಲಕ ಸುಪಾರಿ ಕೊಡಿಸಿದ್ದರು. ಅದರಂತೆ, ₹10 ಲಕ್ಷಕ್ಕೆ ಒಪ್ಪಂದವಾಗಿತ್ತು. ಅದರಲ್ಲಿ ₹3 ಲಕ್ಷ ಇಟ್ಟುಕೊಂಡಿದ್ದ ಮೌಲ್ವಿ, ಉಳಿದ ₹7 ಲಕ್ಷವನ್ನು ಕೊಲೆ ಮಾಡಿದ ನಾಲ್ವರಿಗೆ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ