Breaking News

ಸಿದ್ಧಾರ್ಥ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಸೈಟ್‌ ವಿಚಾರ – ಖರ್ಗೆ ಕುಟುಂಬ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಿರುವು!

Spread the love

ಬೆಂಗಳೂರು: ಖಾಸಗಿ ದೂರು ಸಲ್ಲಿಕೆಯಲ್ಲಿನ ಪ್ರಮಾಣ ಪತ್ರದ ತಾಂತ್ರಿಕ ದೋಷ ಮುಂದಿಟ್ಟುಕೊಂಡು ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಬದಲಿಗೆ ವಿಚಾರಣಾ ನ್ಯಾಯಾಲಯ ಸ್ವತಃ ವಿಚಾರಣೆಗೆ ಮುಂದಾಗುವುದು ತರವಲ್ಲ ಎಂದು ಹೈಕೋರ್ಟ್  ಅಭಿಪ್ರಾಯಪಟ್ಟಿದೆ.

ಈ ಮೂಲಕ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ( ನಿಯಮಬಾಹಿರವಾಗಿ ನಿವೇಶನ ಮಂಜೂರು ಮಾಡಲಾಗಿದೆ’ ಎಂಬ ದೂರಿನ ಪ್ರಕರಣವನ್ನ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.

‘ನಾನು ಸಲ್ಲಿಸಿರುವ ಖಾಸಗಿ ದೂರಿನ ಪ್ರಮಾಣಪತ್ರ ಸಮರ್ಪಕವಾಗಿಲ್ಲ. ಅದು ಸುಪ್ರೀಂ ಕೋರ್ಟ್ ರೂಪಿಸಿರುವ ಅಂಶಗಳಿಗೆ ಅನುಗುಣವಾಗಿಲ್ಲ, ದೋಷಗಳಿವೆ ಎಂದು ಉಲ್ಲೇಖಿಸುವ ಮೂಲಕ ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗಿರುವುದು ಕಾನೂನಾತ್ಮಕವಾಗಿ ತಪ್ಪು’ ಎಂದು ಆಕ್ಷೇಪಿಸಿ ದೂರುದಾರ ವಿಜಯರಾಘವ ಮರಾಠ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ್ದ ಪದಾಂಕಿತ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಸೆಷನ್ಸ್ ನ್ಯಾಯಾಲಯ ಈ ಕೇಸಿನಲ್ಲಿ ಹುರುಳಿಲ್ಲ ಎಂದು ಎಲ್ಲೂ ಹೇಳಿಲ್ಲ. ದೂರು ತನಿಖೆಗೆ ಯೋಗ್ಯವಾಗಿದೆ ಎಂದು ಮೇಲ್ನೋಟಕ್ಕೆ ಒಪ್ಪಿಕೊಂಡಿರುವುದು ದೃಢಪಟ್ಟಿದೆ. ಆದರೆ, ಸುಪ್ರೀಂ ಕೋರ್ಟ್ 2026ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ದೂರುದಾರರ ಪ್ರಮಾಣಪತ್ರ ಸಲ್ಲಿಕೆಯಾಗಿಲ್ಲ ಎಂಬ ಅಂಶವನ್ನ ಮುಂದಿಟ್ಟುಕೊಂಡಿದೆ ಅಷ್ಟೇ’ ಎಂಬ ವಾದ ಮಂಡಿಸಿದ್ದರು.

‘ಪ್ರಸಕ್ತ ದೂರನ್ನು 2025ರಲ್ಲೇ ಸಲ್ಲಿಸಲಾಗಿರುವ ಕಾರಣ ಸುಪ್ರೀಂ ಕೋರ್ಟ್ ತೀರ್ಪನ್ನು ಪೂರ್ವಾನ್ವಯ ನಿಲುವಿನಲ್ಲಿ ಪರಿಗಣಿಸಬೇಕಾಗಿಲ್ಲ. ಆದ್ದರಿಂದ, ಸಕ್ಷಮ ಪ್ರಾಧಿಕಾರದ ತನಿಖೆಗೆ ವಹಿಸಲು ದಾರಿ ಸುಗುಮಗೊಳಿಸಲು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಬೇಕು’ ಎಂದು ಕೋರಿದ್ದರು.

ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ‘ದೂರಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ದೋಷಗಳಿವೆ ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗುವ ಬದಲಿಗೆ ದೋಷವನ್ನು ಪರಿಹರಿಸಿಕೊಳ್ಳಲು ದೂರುದಾರರಿಗೆ ಅವಕಾಶ ನೀಡಬೇಕಿತ್ತು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಪ್ರಮಾಣಪತ್ರದಲ್ಲಿನ ದೋಷವು ದೂರುದಾರರಿಗೆ ನ್ಯಾಯಾಲಯದ ಮುಂದೆ ಕಾನೂನಿನ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಮಾಣಪತ್ರವನ್ನು ದಾಖಲಿಸಲು ನಿರ್ದೇಶಿಸುವ ಮೂಲಕ ಅದನ್ನು ಸುಲಭವಾಗಿ ಸರಿಪಡಿಸಬಹುದಾಗಿದ್ದ ಹಂತದಲ್ಲಿತ್ತು. ಆದರೆ, ಸೆಷನ್ಸ್ ನ್ಯಾಯಾಲಯ ಅತಿಯಾದ ತಾಂತ್ರಿಕ ನಿಲುವನ್ನು ಪ್ರದರ್ಶಿಸಿದೆ’ ಎಂಬ ಹೇಳಿದೆ.

‘ಸೂಕ್ತ ಮತ್ತು ಕಾನೂನಾತ್ಮಕ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಪ್ರಕರಣದ ನ್ಯಾಯಿಕ ಪ್ರಕ್ರಿಯೆ ಮುಂದುವರಿಸಿ’ ಎಂದು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಏನಿದು ಕೇಸ್‌?
‘ಪರಿಶಿಷ್ಠ ಜಾತಿಗೆ ಸೇರಿದ ಟ್ರಸ್ಟ್ ಎಂದು ಉಲ್ಲೇಖಿಸಿ ಖರ್ಗೆ ಮತ್ತು ಅವರ ಕುಟುಂಬಸ್ಥರ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿಯಮಬಾಹಿರವಾಗಿ ಬಿಟಿಎಂ ಲೇಔಟ್‌ನಲ್ಲಿ ಎರಡು ಎಕರೆ ನಿವೇಶನ ಮಂಜೂರು ಮಾಡಲಾಗಿದೆ’ ಎಂಬುದು ಫಿರ್ಯಾದುದಾರರ ಆರೋಪ. ದೂರಿನಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ ಎಂ. ಖರ್ಗೆ, ಸಂಸದ ರಾಧಾಕೃಷ್ಣ, ರಾಹುಲ್ ಎಂ.ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ ಎಂ.ಖರ್ಗೆ ಅವರನ್ನು ಆರೋಪಿಗಳನ್ನಾಗಿ ಕಾಣಿಸಲಾಗಿದೆ.


Spread the love

About Laxminews 24x7

Check Also

ಅಂಗನವಾಡಿ ಕಾರ್ಯಕರ್ತೆಯರ ವೇತನ 4,000 ರೂ. ಹೆಚ್ಚಳ – 5 ಲಕ್ಷದವರೆಗೆ ಆರೋಗ್ಯ ಸೇವೆ; ಸಿಎಂ ಯೋಗಿ ಬಂಪರ್‌ ಗಿಫ್ಟ್‌!

Spread the loveಅಯೋಧ್ಯೆ: ಉತ್ತರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಬಂಪರ್‌ ಗಿಫ್ಟ್‌ ಕೊಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ