ರಾಯಚೂರು: ದೇಶದ ವಿರುದ್ಧ ಘೋಷಣೆಗಳನ್ನ ಕೂಗುವವರಿಗಾಗಿ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಾಯಕರು ಸದನವನ್ನ ಬಹಿಷ್ಕಾರ ಮಾಡಿದ್ದಾರೆ ಇದು ಸರಿಯಲ್ಲ ಅಂತ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಶ್ರೀರಾಮುಲು, ಹುಬ್ಬಳ್ಳಿ-ಬೀದರ್ ನಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಜಯಘೋಷ ಕೂಗುತ್ತಿದ್ದಾರೆ. ಇಂತಹದ್ದನ್ನ ನೋಡಿಕೊಂಡು ನಾವು, ಸರ್ಕಾರ ಕೈ ಕಟ್ಟಿಕೊಂಡು ಕೂಡಲು ಸಿದ್ಧರಿಲ್ಲ. ಸದನ ಬಹಿಷ್ಕಾರ ಮಾಡುವ ಮೂಲಕ ಅವರನ್ನ ರಕ್ಷಣೆ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಭಯೋತ್ಪಾದನೆಗೆ ಪ್ರಚೋದನೆ ಮಾಡುತ್ತಿದೆ ಎಂದರು.
ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ ಸದನ ಬಹಿಷ್ಕಾರ ಮಾಡುತ್ತಿದ್ದಾರೆ. ಕಸಬ್ ಕೂಡ ಹಿಂದೂ ತೀವ್ರವಾದಿ ಅಂತ ಕಾಂಗ್ರೆಸ್ಸಿನವರು ಹೇಳುತ್ತಿದ್ದಾರೆ. ಭಾರತವನ್ನ ಪಾಕಿಸ್ತಾನಕ್ಕೆ ಒತ್ತೆಯಿಡುವ ಮನಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ನೋಡಿದ್ರೆ ಶೋಚನೀಯ ಪರಸ್ಥಿತಿಯಿದೆ ಎಂದರು.
ಆನಂದ್ ಸಿಂಗ್ ಪ್ರಮಾಣಿಕ ಮಂತ್ರಿಯಾಗಿ ಮುಂದುವರಿಯುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಪ್ರಾಮಾಣಿಕರು, ಬಿಜೆಪಿಗೆ ಬಂದ ಮೇಲೆ ಭ್ರಷ್ಟರು ಅನ್ನೋ ತರ ಕಾಂಗ್ರೆಸ್ಸಿನವರು ಮಾತನಾಡುತ್ತಿದ್ದಾರೆ. ಅವರಿಗೆ ಬೇರೆ ಪದಗಳು ಬಳಕೆ ಮಾಡಲು ಸಿಗುತ್ತಿಲ್ಲ. ಜನಾರ್ದನ ರೆಡ್ಡಿ, ಆನಂದ್ ಸಿಂಗ್, ನಾಗೇಂದ್ರ ಪ್ರಕರಣಗಳಲ್ಲಿ ರಾಜಕೀಯ ಮಾಡಲಾಗುತ್ತಿದೆ. ರಾಜಕೀಯ ವಿಚಾರಕ್ಕೆ ಬಳ್ಳಾರಿಯ ಮರ್ಯಾದೆಯನ್ನ ತೆಗೆಯುವ ಕೆಲಸ ಮಾಡುತ್ತಿದ್ದಾರೆ ಅಂತ ಶ್ರೀರಾಮುಲು ಕಿಡಿಕಾರಿದರು.
ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ. ಅವರ ವಿರುದ್ಧ ಯಾರೂ ಧ್ವನಿಎತ್ತುವ ಪ್ರಶ್ನೆಯೇ ಇಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡುವ ಕುರಿತು ಕೆಲ ಮುಖಂಡರು ಚರ್ಚೆ ಮಾಡಿದ್ದಾರೆ. ಬಜೆಟ್ ನಲ್ಲಿ ಏನೆಲ್ಲಾ ಸೇರಿಸಬೇಕು ಅಂತ ಸಭೆ ಮಾಡಿದ್ದಾರೆ. ಅದಕ್ಕೆ ಬೇರೆ ಅರ್ಥಗಳನ್ನ ಕಲ್ಪಿಸುವ ಅಗತ್ಯವಿಲ್ಲ ಅಂತ ಅವರು ಹೇಳಿದ್ದಾರೆ