ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರೇಡ್ ವೇಳೆ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಸಿಬಿ ರೇಡ್ ಮಾಡಿಸಿದ್ದು ನಾನೇ. ರೇಡ್ ಆಗಬೇಕಾದರೂ ಗೃಹ ಇಲಾಖೆಯ ಅನುಮತಿ ಬೇಕು. ಎರಡು ವಾರದ ಹಿಂದೆ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿದ್ದೆ. ಅಲ್ಲಿ ಕೆಲವು ಲೋಪಗಳಾಗಿದ್ದವು. ಹೀಗಾಗಿ ಮುಖ್ಯಮಂತ್ರಿಗಳ ಅನುಮತಿ ಪಡೆದು ರೇಡ್ ಮಾಡಿಸಿದೆ ಎಂದು ತಿಳಿಸಿದರು.
ಅಧಿಕಾರಿಗಳ ಮಾಹಿತಿ ಮೇರೆಗೆ ರೇಡ್ ಮಾಡಿಸಿದ್ದೇನೆ. ಈ ಅಕ್ರಮಕ್ಕೆ ಸಹಕಾರ ಕೊಟ್ಟ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಿದ್ದೇನೆ ಎಂದರು.
ಪರಪ್ಪನ ಅಗ್ರಹಾರ ಮಾತ್ರವಲ್ಲ, ರಾಜ್ಯದ ಎಲ್ಲಾ ಕಾರಾಗೃಹಗಳ ಮೇಲೆಯೂ ಇಂತಹ ಕಾರ್ಯಾಚರಣೆ ನಡೆಯುತ್ತದೆ. ಇದನ್ನು ನಿರಂತರವಾಗಿ ಮಾಡಬೇಕು. ಕೆಲವು ಅಧಿಕಾರಿಗಳು ಇದ್ದಾರೆ, ಅವರು ತಮ್ಮ ಹಳೆ ಚಾಳಿಯನ್ನು ಬಿಟ್ಟಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.
ಇಂತಹ ಕೆಲಸಗಳು ಯಾವಾಗಲೂ ಆಗುತ್ತಿರುತ್ತವೆ, ಹಾಗಂತ ತಕ್ಷಣ ನೇಣಿಗೆ ಹಾಕಲು ಆಗುವುದಿಲ್ಲ. ನಾನು ಖಾತೆ ತೆಗೆದುಕೊಂಡು 2 ತಿಂಗಳಲ್ಲಿ ಇಷ್ಟು ಬೇಗ ರೇಡ್ ಮಾಡಿಸಿ ಕ್ರಮ ಕೈಗೊಂಡಿದ್ದೇನೆ. ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಹಾಗೂ ಸರ್ವೀಸ್ ಡಿಸ್ಮಿಸ್ ಮಾಡಲು ಕೆಲವು ಮಾನದಂಡಗಳಿವೆ, ಅದರ ಪ್ರಕಾರವೇ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು.
Laxmi News 24×7