Breaking News
Home / ಜಿಲ್ಲೆ / ಹಾವೇರಿ :ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್…….

ಹಾವೇರಿ :ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್…….

Spread the love

ಹಾವೇರಿ(ಏ. 28): ಒಣ ಮೆಣಸಿನಕಾಯಿ ಕಣಜ ಎಂದೇ ವಿಶ್ವಪ್ರಸಿದ್ಧಿ ಪಡೆದಿರುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಆಗಿದೆ. ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ತನ್ನದೇ ಆದ ಇತಿಹಾಸ ಹೊಂದಿದ್ದು ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948ರಲ್ಲಿ ಈ ಮಾರುಕಟ್ಟೆ ಸ್ಥಾಪನೆಯಾಗಿದೆ. ಅಂದಿನಿಂದ ಇಂದಿನವರೆಗೂ ಇಷ್ಟು ದಿನಗಳ ಕಾಲ ಈ ಮಾರುಕಟ್ಟೆ ಬಂದ್ ಆಗಿರುವ ದಾಖಲೆ ಇರಲಿಲ್ಲ. ಆದರೆ ಕೊರೋನಾದಿಂದಾಗಿ ಮಾರ್ಚ್19 ರಿಂದ ಸಂಪೂರ್ಣ ಲಾಕ್ ಮಾಡಲಾಗಿದೆ.

70 ಎಕರೆ ವಿಸ್ತೀರ್ಣ ಹೊಂದಿರುವ ಈ ಮಾರುಕಟ್ಟೆ ಸಂಪೂರ್ಣ ಕಾಂಕ್ರೀಟ್ ನಿಂದ ಕೂಡಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ವಹಿವಾಟು ನಡೆಯುವ ಉತ್ಪನ್ನ ಒಣಮೆಣಸಿನಕಾಯಿ. ದಕ್ಷಿಣ ಭಾರತದಲ್ಲಿ ಒಣಮೆಣಸಿಕಾಯಿ ಆವಕವಾಗುವ ಮಾರುಕಟ್ಟೆಗಳ ಪೈಕಿ ಕರ್ನಾಟಕದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

6 ದಶಕಕ್ಕೂ ಹೆಚ್ಚು ಅವಧಿಯಿಂದ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಮಾರುಕಟ್ಟೆಗೆ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರದ ರೈತರು ಭಾಗೀದಾರರಾಗಿದ್ದಾರೆ. ಬ್ಯಾಡಗಿ ಎಪಿಎಂಸಿಯನ್ನು ಒಣಮೆಣಸಿನಕಾಯಿ ಕಣಜ ಎಂದು ಕರೆಯುವುದು ವಾಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಆವಕವಾಗುವ ಮೆಣಸಿನಕಾಯಿ ಉತ್ಪನ್ನಕ್ಕೆ ದೇಶ ವಿದೇಶಗಳಿಂದ ಅತೀ ಹೆಚ್ಚಿನ ಬೇಡಿಕೆ ಇದೆ, ಇಲ್ಲಿಂದಲೇ ಈ ಉತ್ಪನ್ನವನ್ನು ರಪ್ತು ಮಾಡಲಾಗುತ್ತಿದೆ.

ಇಂತಹ ಪ್ರಖ್ಯಾತಿ ಹೊಂದಿದ ಮಾರುಕಟ್ಟೆಯಲ್ಲಿ ಒಣಮೆಣಸಿನಕಾಯಿ ವ್ಯಾಪಾರ ವಹಿವಾಟು ಈಗ ಸ್ತಬ್ದಗೊಂಡಿದೆ.

ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ, ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಲಾಕ್ ಡೌನ್ ಆದಾಗಿನಿಂದಲೂ ಮಾರುಕಟ್ಟೆಯ ವ್ಯಾಪಾರ, ವಹಿವಾಟು ಸ್ಥಗಿತಗೊಳುವ ನಿರ್ಧಾರವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತೆಗೆದುಕೊಂಡಿದೆ. ಕೊರೊನಾ ವೈರಸ್ ಯಾರಿಗೂ ಹರಡಬಾರದು ಎಂಬ ಉದ್ದೇಶ ಹಾಗೂ ವರ್ತಕರ ಸಂಘದ ಮನವಿಯಂತೆ ಟೆಂಡರ್ ಸ್ಥಗಿತಗೊಳಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಇನ್ನು, ಕೊರೋನಾ ಲಾಕ್ ಡೌನ್ ಮುಂಚಿತವಾಗಿ ಮಾರುಕಟ್ಟೆ ಬಂದ್ ಮಾಡಲಾಗಿತ್ತು. ಇದು ಸಹಾ ಹಾವೇರಿ ಜಿಲ್ಲೆ ಕೊರೋನಾದಿಂದ ಮುಕ್ತವಾಗಿರಲು ಪ್ರಮುಖ ಕಾರಣ. ಬ್ಯಾಡಗಿ ಜನರ ಆರಾಧ್ಯದೈವ ಮರಿಯಮ್ಮ ಜಾತ್ರೆ ನಿಗದಿಯಾಗಿದ್ದರಿಂದ ಲಾಕ್ ಡೌನ್ ಘೋಷಣೆ ಮಾಡುವದಕ್ಕಿಂತ ಒಂದು ವಾರ ಮುಂಚಿತವಾಗಿಯೇ ಈ ಮಾರುಕಟ್ಟೆಯನ್ನ ಬಂದ್ ಮಾಡಲಾಗಿತ್ತು. ಹೀಗಾಗಿ ಆಂಧ್ರ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ರೈತರು ಹಾಗೂ ವ್ಯಾಪಾರಸ್ಥರು ಬ್ಯಾಡಗಿ ನಗರದ ಮಾರುಕಟ್ಟೆಗೆ ಆಗಮಿಸದೆ ಇದ್ದುದ್ದರಿಂದ ಹಾವೇರಿ ಜಿಲ್ಲೆಯ ಗ್ರೀನ್ ಝೋನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಮುಖ ಕಾರಣವಾಗಿದೆ.

ಇಲ್ಲಿ ಸುಮಾರು 420 ಕ್ಕೂ ಹೆಚ್ಚು ಅಧಿಕೃತ ಪರವಾನಿಗೆ ಹೊಂದಿರುವ ವ್ಯಾಪಾರಸ್ಥರು ಇದ್ದು ಪ್ರತಿ ದಿನ 4000 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಕೊರೋನಾದಿಂದ ಲಾಕ್ ಡೌನ್ ಆದ ಹಿನ್ನೆಲೆ ಕೆಲಸವಿಲ್ಲದೆ ಈ ಎಲ್ಲಾ ಕಾರ್ಮಿಕರು ಪರದಾಡುವಂತಾಗಿದೆ. ಬ್ಯಾಡಗಿ ಮೆಣಸಿಗೆ ಈಗ ಚಿನ್ನದ ಬೆಲೆ ಇದ್ದರು ಸಹಾ ರೈತರು ಮೆಣಸಿನಕಾಯಿ ಮಾರಾಟ ಮಾಡಲು ಆಗದೆ ಕೋಲ್ಡ್ ಸ್ಟೋರೇಜ್ ನಲ್ಲಿ ಇಡುವಂತಾಗಿದೆ. ಬ್ಯಾಡಗಿ ತಾಲ್ಲೂಕಿನ ವಿವಿಧ ಕೋಲ್ಡ್ ಸ್ಟೋರೇಜ್ ನಲ್ಲಿ 2.5 ಲಕ್ಷ ಮೂಟೆ ಮೆಣಸಿನಕಾಯಿ ಸ್ಟಾಕ್ ಮಾಡಲಾಗಿದೆ. ರೈತರು ಒಳ್ಳೆಯ ಬೆಲೆ ಇದ್ದರೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಮೆಣಸಿನಕಾಯಿ ಬೆಳೆದ ರೈತರು ಲಾಕ್ ಡೌನ್ ಯಾವಾಗ ಮುಗಿಯುತ್ತದೆ ಅಂತಾ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಖಾರದಪುಡಿ ಅವಶ್ಯಕ ವಸ್ತುಗಳಲ್ಲಿ ಒಂದಾಗಿರುವದರಿಂದ ಬೆರೆ ಬೆರೆ ರಾಜ್ಯಗಳಿಗೆ ರಪ್ತು ಮಾಡಲು ವಿಶೇಷ ಅವಕಾಶ ಕಲ್ಪಿಸಿದೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಬ್ಯಾಡಗಿ ಮೆಣಸಿನಕಾಯಿ ಖಾರದಪುಡಿ ರಪ್ತು ಮಾಡಲಾಗುತ್ತಿದೆ. ಆದರೆ ಬೆರೆ ಬೆರೆ ದೇಶಗಳಿಗೆ ರಫ್ತು ಮಾಡುವುದನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಖಾರದ ಪುಡಿ ಉತ್ಪಾದನೆ ಮಾಡಲಾಗುತ್ತಿಲ್ಲ.


Spread the love

About Laxminews 24x7

Check Also

ಅರಣ್ಯ ಇಲಾಖೆ ಕಾರ್ಯಾಚರಣೆ: ಸೆರೆಸಿಕ್ಕ ಕತ್ತೆ ಕಿರುಬ

Spread the loveಚಿಕ್ಕೋಡಿ: ಇಂದು ಬೆಳಿಗ್ಗೆ 07 ಗಂಟೆಗೆ ಬೆಳಗಾವಿ ಜಿಲ್ಲೆಯ ಅಥಣಿ‌ ಪಟ್ಟಣದ ಹೊರವಲಯದಲ್ಲಿ ಇರುವ ಶಿವಯೋಗಿ‌ ನಗರದ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ