ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡಲು ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಗೆ ಅವಕಾಶ ಕೊಟ್ಟವರು ಯಾರು? ಸಚಿವರು ಮಾಡಬೇಕಾದ ಕಾರ್ಯವನ್ನು ಅವರ ಪುತ್ರ ಮಾಡಿದ್ಯಾಕೆ ಅನ್ನೋ ಅನುಮಾನ ಹುಟ್ಟುಹಾಕಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ತಂದೆಯ ಬದಲಾಗಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಸ್ಪರ್ಧೆ ಮಾಡುವ ಉದ್ದೇಶದಿಂದ ಈಗಿನಿಂದಲೇ ಚುನಾವಣಾ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಒಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ತಂದೆಯ ಹೆಸರಿನಲ್ಲಿ ಮಗ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಜರುಗಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.