ಹಾಸನ: ಮುಂಬೈನಿಂದ ಬಂದವರನ್ನು ಜಿಲ್ಲೆಯ ಹೊಳೆನರಸೀಪುರದಲ್ಲಿ ಕ್ವಾರಂಟೈನ್ ಮಾಡುತ್ತಿರುವುದಕ್ಕೆ ವಿರೋಧಿಸಿ ಅಂಬ್ಯುಲೆನ್ಸ್ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ದೇವರ ಮುದ್ದನಹಳ್ಳಿ ಬಳಿ ಘಟನೆ ನಡೆದಿದ್ದು, ಮುಂಬೈನಿಂದ ಬಂದವರನ್ನು ಇಲ್ಲಿ ಕ್ವಾರಂಟೈನ್ ಮಾಡಿದರೆ ಹಳ್ಳಿಯ ಜನರಿಗೂ ಕೊರೊನಾ ಬರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಆಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮೇ.15ರಂದು ಮುಂಬೈನಿಂದ ಬಂದಿದ್ದ ಒಂದೇ ಕುಟುಂಬದ ನಾಲ್ವರನ್ನು ತಟ್ಟೆಕೆರೆ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಸ್ಥಳಾವಕಾಶ ಸಮಸ್ಯೆ ಹಿನ್ನೆಲೆ ಶನಿವಾರ ದೇವರಮುದ್ದನಹಳ್ಳಿಗೆ ಸ್ಥಳಾಂತರ ಮಾಡಲು ತಾಲೂಕು ಆಡಳಿತ ಮುಂದಾಗಿತ್ತು. ತಾಲೂಕು ಆಡಳಿತದ ಕ್ರಮ ಖಂಡಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬುಲೆನ್ಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಕ್ವಾರಂಟೈನ್ ಮಾಡಲು ಕರೆದೊಯ್ದಿದ್ದ ಜನರನ್ನು ಅಂಬುಲೆನ್ಸ್ ಚಾಲಕ ಕೂಡಲೇ ವಾಪಸ್ ಕರೆ ತಂದಿದ್ದಾನೆ.