Breaking News

ಸಿ.ಟಿ. ರವಿ ವಿರುದ್ಧ ದ್ವೇಷ ಭಾಷಣ ಆರೋಪ; ಬಂಧನಕ್ಕೆ ಮುಸ್ಲಿಮ್ ಒಕ್ಕೂಟ ಆಗ್ರಹ

Spread the love

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ  ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಹೇಳಿಕೆ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ, ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದೆ.

“ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ” ಎಂದು ಸಿ.ಟಿ. ರವಿ ದ್ವೇಷದ ಹೇಳಿಕೆ ನೀಡಿದ್ದಾರೆ. ಎಲ್ಲ ವಿಷಯದಲ್ಲೂ ಮುಸ್ಲಿಮರನ್ನು ಎಳೆದು ತಂದು ವಿಷಯಾಂತರ ಮಾಡುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.

ಒಂದು ಧರ್ಮದ ಗೌರವಾನ್ವಿತ ಧರ್ಮಗುರುಗಳನ್ನು ಅವಮಾನಿಸುವ ಮೂಲಕ ಜನರನ್ನು ಧರ್ಮದ ಆಧಾರದಲ್ಲಿ ಪ್ರಚೋದಿಸಿ, ವಿಭಜಿಸಿ, ದ್ವೇಷ ಹರಡುವ ದುಷ್ಟ ಸಂಚು ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಸಂಬಂಧ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರು ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು ಈಗಾಗಲೇ ದೂರು ದಾಖಲಿಸಿದ್ದಾರೆ.

ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಕೂಡಲೇ ಕಾನೂನು ಕ್ರಮ ಕೈಗೊಂಡು ಸಿ.ಟಿ. ರವಿಯನ್ನು ಬಂಧಿಸಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.

ನೀಟ್ ಪರೀಕ್ಷೆಯಲ್ಲಿ ನಡೆದಿರುವ ಹಗರಣದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಯುವಜನರ ಪ್ರತಿಭಟನೆ ಇಡೀ ದೇಶಾದ್ಯಂತ ಹಬ್ಬಿದೆ. ಎಲ್ಲೆಡೆ ಜನರು ಬೀದಿಗಿಳಿದು ಮೋದಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಲವು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಮೋದಿ ಸರ್ಕಾರ ಹಾಗೂ ಬಿಜೆಪಿ ಕಂಗಾಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

ದೇಶದಾದ್ಯಂತ ವೇಗವಾಗಿ ಹರಡುತ್ತಿರುವ ಯುವಜನರ ಹೋರಾಟವನ್ನು ಹೇಗೆ ಹತ್ತಿಕ್ಕಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಇದೆ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಮತ್ತೊಮ್ಮೆ ಮುಸ್ಲಿಮ್ ದ್ವೇಷ ಹಾಗೂ ಹಿಂದೂ-ಮುಸ್ಲಿಂ ವಿಭಜನೆಯ ರಾಜಕೀಯವನ್ನೇ ಸಿ.ಟಿ. ರವಿ ಅನುಸರಿಸಿದ್ದಾರೆ ಎಂದು ಹೇಳಿದೆ.

ಇದೇ ವೇಳೆ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸುತ್ತಿದ್ದಾರೆ ಎಂದು ಹೇಳಿರುವುದನ್ನೂ ಒಕ್ಕೂಟ ಉಲ್ಲೇಖಿಸಿದೆ.

ನೀಟ್ ಹಗರಣದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ವಿದ್ಯಾರ್ಥಿಗಳ ಜೊತೆ ನಿಂತು ನ್ಯಾಯಕ್ಕಾಗಿ ಆಗ್ರಹಿಸಬೇಕಿದ್ದ ಬಿಜೆಪಿ, ಅವರ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದೆ.

ಅಂತಹ ಪ್ರತಿಭಟನೆಯಲ್ಲಿ ವಿಷಯಕ್ಕೆ ಯಾವುದೇ ಸಂಬಂಧವಿಲ್ಲದ, ಪ್ರಚೋದನಕಾರಿ ಹಾಗೂ ಕೀಳು ಅಭಿರುಚಿಯ ಹೇಳಿಕೆಯನ್ನು ಸಿ.ಟಿ. ರವಿ ನೀಡಿದ್ದಾರೆ. ಹಿಂದೂ-ಮುಸ್ಲಿಂ ಎಂದು ಜನರನ್ನು ವಿಭಜಿಸುವ ಬಿಜೆಪಿಯ ಈ ನೀತಿಯಿಂದ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ಬೇಸತ್ತಿದ್ದಾರೆ ಎಂಬುದು ಸಿ.ಟಿ. ರವಿಗೆ ಇನ್ನೂ ಅರ್ಥವಾಗಿಲ್ಲ ಎಂದು ಒಕ್ಕೂಟ ಹೇಳಿದೆ.

ಬಿಜೆಪಿ ನಾಯಕರ ಹೇಳಿಕೆಗಳು ಹಾಗೂ ಅವರ ದ್ವಂದ್ವ ನೀತಿಗಳ ನಡುವೆ ಸ್ಪಷ್ಟ ವಿರೋಧಾಭಾಸ ಇದೆ. ಒಂದು ಕಡೆ ಮುಸ್ಲಿಮ್ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಶಾಲೆ-ಕಾಲೇಜಿಗೆ ಹೋಗುವುದನ್ನು ವಿರೋಧಿಸುತ್ತಾರೆ.

ಮತ್ತೊಂದು ಕಡೆ, ಮುಸ್ಲಿಮ್ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡುವುದಿಲ್ಲ ಎಂದು ಆರೋಪಿಸುತ್ತಾರೆ. ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಶಿಕ್ಷಣದಲ್ಲಿ ಸಿಗುತ್ತಿದ್ದ ಸಂವಿಧಾನಬದ್ಧ ಮೀಸಲಾತಿಯನ್ನೂ ತೆಗೆದುಹಾಕಿದೆ.

ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ನಾಯಕರು ಸ್ಥಾಪಿಸಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ ಕಟ್ಟಡಗಳನ್ನು ಧ್ವಂಸ ಮಾಡಲು ಮುಂದಾಗಿದೆ. ಇದೇ ವೇಳೆ ಕರ್ನಾಟಕದಲ್ಲಿ ನಿಂತು ‘ಮುಸ್ಲಿಮರ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ’ ಎಂದು ಹೇಳಿಕೆ ನೀಡಿರುವುದು ಬಿಜೆಪಿಯ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಒಕ್ಕೂಟ ಆರೋಪಿಸಿದೆ.

ಬಿಜೆಪಿಗೆ ಮುಸ್ಲಿಮ್ ಸಮುದಾಯದ ಶಿಕ್ಷಣದ ಬಗ್ಗೆ ನಿಜವಾದ ಕಾಳಜಿ ಇಲ್ಲ. ರಾಜಕೀಯಕ್ಕಾಗಿ ಮಾತ್ರ ಅವರನ್ನು ಬಳಸಿಕೊಳ್ಳುವ ಉದ್ದೇಶವಿದೆ ಎಂದು ಒಕ್ಕೂಟ ಹೇಳಿದೆ.

ಸಿ.ಟಿ. ರವಿ ಅವರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆ ಇದೆ. ಜನರ ನಡುವೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹಾಗೂ ಅನುಮಾನ ಹುಟ್ಟುಹಾಕುವ ಉದ್ದೇಶ ಅವರ ಮಾತುಗಳಲ್ಲಿ ಕಾಣುತ್ತದೆ.

ಆದ್ದರಿಂದ ಸಿ.ಟಿ. ರವಿ ವಿರುದ್ಧ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಸ್ಲಿಮ್ ಒಕ್ಕೂಟದ ಮಾಧ್ಯಮ ವಕ್ತಾರ ಹಾಗೂ ಸಂಚಾಲಕರಲ್ಲೊಬ್ಬರಾದ ಸುಹೇಲ್ ಮರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ʻನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ?ʼ ಎಂದಿದ್ದ ಸಿ.ಟಿ.ರವಿ ವಿರುದ್ಧ FIR

Spread the loveಚಿಕ್ಕಮಗಳೂರು: ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನ್ ಸಂಬಂಧ? ಎಂಬ ಹೇಳಿಕೆ ನೀಡಿದ್ದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ