ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಸಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಸೋಮವಾರ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಷ್ಣುವರ್ಧನ ಸಿನಿಮಾದ ನಟ ಸೋನು ಸೂದ್, “ಪ್ರತಿಯೊಬ್ಬರು ತಮ್ಮ ಕುಟುಂಬ, ಆತ್ಮೀಯರೊಂದಿಗೆ ಇರಲು ಇಷ್ಟಪಡುತ್ತಾರೆ. ಆದ್ದರಿಂದ ವಲಸಿಗರು ಮನೆಗೆ ತಲುಪಲು ಸಹಾಯ ಮಾಡಲು ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಸರ್ಕಾರಗಳಿಂದ ಅನುಮತಿ ಕೋರಿದ್ದೆ. ಅದರಂತೆ ವಲಸೆ ಕಾರ್ಮಿಕರನ್ನು ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
“ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ಅಗತ್ಯ ದಾಖಲೆಗಳನ್ನು ಒದಗಿಸಿದರು. ವಲಸೆ ಕಾರ್ಮಿಕರು ಪುಟ್ಟ ಮಕ್ಕಳು, ವೃದ್ಧ ಪೋಷಕರನ್ನು ಕರೆದುಕೊಂಡು ರಸ್ತೆ ಮಾರ್ಗವಾಗಿ ಹೋಗುವುದನ್ನು ಕಂಡು ನನಗೆ ನೋವಾಗಿತ್ತು. ಹೀಗಾಗಿ ಅವರ ಸಹಾಯಕ್ಕೆ ನಿಂತೆ. ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಮುಟ್ಟಿಸುವ ನನ್ನ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಸೋನು ಸೂದ್ ಹೇಳಿದ್ದಾರೆ.
46 ವರ್ಷದ ನಟ ಪಂಜಾಬ್‍ನಾದ್ಯಂತ 1,500ಕ್ಕೂ ಹೆಚ್ಚು ಪಿಪಿಇ ಕಿಟ್‍ಗಳನ್ನು ವೈದ್ಯರಿಗೆ ನೀಡಿದ್ದರು. ಅಷ್ಟೇ ಅಲ್ಲದೆ ವೈದ್ಯಕೀಯ ಸಿಬ್ಬಂದಿಯ ವಸತಿಗಾಗಿ ಅವರ ಮುಂಬೈ ಹೋಟೆಲ್ ಅನ್ನು ನೀಡಿದ್ದಾರೆ.