ರಾಮನಗರ: ಕೊರೊನಾ ತಡೆಗೆ ರಾಮನಗರ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಪರಿಣಾಮವಾಗಿ ಜಿಲ್ಲೆಯಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 26 ಮಂದಿ ವೈದ್ಯಾಧಿಕಾರಿಗಳು ಇದ್ದು, 4 ಜನ ವೈದ್ಯರ ಕೊರತೆ ಇದೆ. ವೈದ್ಯರ ಮೂರು ಬ್ಯಾಚ್‍ಗಳನ್ನು ಮಾಡಿ ಕೆಲಸ ಮಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೋವಿಡ್- 19 ವಿರುದ್ಧ ಹೋರಾಟಕ್ಕೆ ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗಂಭೀರವಾದ ಪ್ರಕರಣವಾಗಲಿ, ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಹೀಗಾಗಿ ಸಾರ್ವಜನಿಕರು ಭಯಭೀತರಾಗುವಂತಹ ಅವಶ್ಯಕತೆಯಿಲ್ಲ ಎಂದಿದ್ದಾರೆ. ದೇಶವೇ ಲಾಕ್‍ಡೌನ್ ಆಗಿರುವುದರಿಂದ ರಾಮನಗರ ಜಿಲ್ಲೆಯಲ್ಲಿ ಅನೇಕ ಕಾರ್ಮಿಕರು, ನಿರ್ಗತಿಕರಿಗೆ ಸಂಕಷ್ಟ ಎದುರಾಗಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿನ ನಿರ್ಗತಿಕರಿಗೆ ಎನ್‍ಜಿಓ ಮೂಲಕ ಸಹಾಯವಾಗುತ್ತಿದೆ. ಈ ಕುರಿತು ನಮ್ಮಿಂದ ಹೇಗೆ ಸಹಾಯ ಮಾಡಬಹುದು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಎಪಿಎಂಸಿಯಲ್ಲಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಈಗಾಗಲೇ ಬೆಳಗಾವಿ ಚಿಂಚೊಳ್ಳಿಯಲ್ಲಿ ಕಲ್ಲಂಗಡಿ ಬೆಳೆದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಸಹ ನಾನು ಮಾಹಿತಿ ಕಲೆ ಹಾಕಿದ್ದೇನೆ. ರೇಷ್ಮೆ ಗೂಡು ಬೆಳೆಗಾರರ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ರಾಮನಗರ ಮಾತ್ರವಲ್ಲದೆ ರಾಜ್ಯದಲ್ಲಿ ಬೆಳೆಗಾರರ ಅನುಕೂಲಕ್ಕಾಗಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಳೆದ ಮೂರು ದಿನಗಳಿಂದ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕ್ರಮಕ್ಕೆ ಅನುವು ಮಾಡಿಕೊಳ್ಳಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.