ಬೆಳಗಾವಿ:ವಾಲ್ಮೀಕಿ ನಿಗಮ ಅನುದಾನ ದುರ್ಬಳಕೆ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಕೈಗೊಂಡಿರುವ ಅಹೋರಾತ್ರಿ ಧರಣಿ ಶುಕ್ರವಾರ ಐದನೇ ದಿನವು ಮುಂದುವರಿಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಐದು ದಿನಗಳಿಂದ ನಡೆಯುತ್ತಿರುವ ಬಿಜೆಪಿ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ನಿಪ್ಪಾಣಿ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ನೂರಾರು ಕಾರ್ಯಕರ್ತರು ಭಾಗವಹಿಸಿ ಜನಸಾಮಾನ್ಯ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ, ಸಚಿವ ಬಿ. ನಾಗೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಮೂರೂವರೆ ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಭ್ರಷ್ಟಾಚಾರ, ಅನುದಾನ ದುರ್ಬಳಕೆ,ಆಡಳಿತ ವೈಫಲ್ಯ ವಿಷಯಗಳಿಂದ ಹೆಚ್ಚು ಚರ್ಚೆಯಾಗುತ್ತಿದೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರಾಜ್ಯವನ್ನು ಆರ್ಥಿಕ ದಿವಾಳಿಯನ್ನಾಗಿ ಮಾಡಿದ್ದು, ಜನಸಾಮಾನ್ಯರು, ಬಡವರು, ಎಸ್ಸಿ, ಎಸ್ಟಿ ಸಮುದಾಯದ ಜನರು ಸರ್ಕಾರಿ ಸೌಲಭ್ಯಗಳು ಸಿಗದೆ ಪರದಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ವಸತಿ ಸೇರಿ ಪ್ರತಿಯೊಂದು ಯೋಜನೆಗಳಿಗೆ ಕಮಿಷನ್ ವಸೂಲಿ ಮಾಡುತ್ತಿದ್ದು,ಬಡವರು ಯೋಜನೆಗಳಿಂದ ವಂಚಿತರಾಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ, ದರ ಇಳಿಕೆ ಹೀಗೆ ವಿವಿಧ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ರಸ್ತೆಗಿಳಿದು ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಆಡಳಿತದಿಂದ ಪ್ರತಿಯೊಂದು ಸಮುದಾಯ ಸಮಸ್ಯೆ ಎದುರಿಸುತ್ತಿದೆ. ಕೂಡಲೇ ಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧಕ್ಷ ಸುಭಾಷ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಎಂ.ಬಿ.ಝಿರಲಿ, ಪವನಕುಮಾರ ಮಹಾಜನ್, ರಾಜೇಂದ್ರ ಗುಂಡೇಶಾ, ಪ್ರಮೋದ ಕೋಚೇರಿ, ಬಸವರಾಜ ಸಾಣಿಕೊಪ್ಪ ಇತರರಿದ್ದರು.
Laxmi News 24×7