ರಾಮನಗರ: ಬಿಡದಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಟೌನ್ ಶಿಪ್ ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಅದನ್ನೇ ಬಂಡವಾಳ ಮಾಡಿಕೊಂಡು ವಂಚಿಸಲು ಯತ್ನಿಸಿದ ದೊಡ್ಡ ಜಾಲವೊಂದು ಬೆಳಕಿಗೆ ಬಂದಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 5 ಕೋಟಿ ರೂ ಪರಿಹಾರ ಹಣವನ್ನು ದೋಚಲು ಯತ್ನಿಸಿದ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಆರೋಪಿಗಳಾದ ವೆಂಕಟೇಶ್, ರಾಜಶೇಖರ್, ಶಂಕರ್ ರೆಡ್ಡಿ ಹಾಗೂ ಕೃಷ್ಣ ರೆಡ್ಡಿ ಎಂಬವರು ನಕಲಿ ವಂಶವೃಕ್ಷ, ನಕಲಿ ಒಪ್ಪಿಗೆ ಪತ್ರ ಹಾಗೂ ದೃಢೀಕರಣ ಪತ್ರಗಳನ್ನು ಸೃಷ್ಟಿಸಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಜಿಬಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾದ ಕಿಶನ್ ಅವರು ಬಂದಿದ್ದ ಅರ್ಜಿಗಳನ್ನು ವಿಲೇವಾರಿ ಮಾಡುವ ಸಮಯದಲ್ಲಿ ಸೂಕ್ತ ದಾಖಲೆಗಳ ಪರಿಶೀಲನೆ ನಡೆಸಿದಾಗ ಈ ವಂಚನೆ ಬಯಲಾಗಿದೆ.
ಅರ್ಜಿಯೊಂದಿಗೆ ಸಲ್ಲಿಸಲಾಗಿದ್ದ ದಾಖಲೆಗಳು ಸಂಪೂರ್ಣವಾಗಿ ನಕಲಿ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಕಿಶನ್ ಅವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಠಾಣೆ ಪೊಲೀಸರು, ವಂಚನೆ ಎಸಗಲು ಯತ್ನಿಸಿ ತಲೆಮರೆಸಿಕೊಂಡಿರುವ ನಾಲ್ವರ ಬಂಧನಕ್ಕಾಗಿ ಬಲೆ ಬೀಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
Laxmi News 24×7