ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆ ಕುರಿತು ಸಭೆ ಮಾಡಲಾಯ್ತು.
ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ನಿರ್ಧಾರಗಳು:
1. ರೋಗಿಗಳು ಕಾಯುವ ಪರಿಸ್ಥಿತಿ ಬರಬಾರದು. ಪರೀಕ್ಷಾ ವರದಿ ಬಂದು ಸೋಂಕು ದೃಢಪಟ್ಟ ನಂತರ ತ್ವರಿತವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಕ್ರಮ ವಹಿಸಲು ಸೂಚಿಸಲಾಗಿದೆ. ಇದಕ್ಕಾಗಿ ಈಗ 100 ಅಂಬ್ಯುಲೆನ್ಸ್ ಗಳು ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಅಂಬ್ಯುಲೆನ್ಸ್ ಗಳನ್ನು ಈ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಯಿತು.
2. ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ ಕೋವಿಡ್ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸಚಿವರಿಗೆ ಸೂಚಿಸಲಾಗಿದೆ.
3. ಹೆಚ್ಚುತ್ತಿರುವ ಪ್ರಕರಣಗಳಿಗೆ ತಕ್ಕಂತೆ ಹಾಸಿಗೆಗಳ ಲಭ್ಯತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ, ರೋಗ ಲಕ್ಷಣ ಕಡಿಮೆ ಇರುವವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ರೋಗ ಲಕ್ಷಣ ಇಲ್ಲದವರಿಗೆ ಖಾಸಗಿ ಹೋಟೆಲ್ ಗಳು ಹಾಗೂ ಹಜ್ ಭವನದಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.
4. ಹಾಸಿಗೆಗಳ ಲಭ್ಯತೆ ಕುರಿತು, ಪ್ರತಿ ರೋಗಿಯ ದಾಖಲಿಸುವ ಕುರಿತು ಕ್ಷಣ ಕ್ಷಣದ ಮಾಹಿತಿ ಒದಗಿಸುವ ಕುರಿತು ಡಿಜಿಟಲ್ ಪ್ಲಾಟ್ ಫಾರ್ಮ್ ನಿರ್ಮಿಸಿಲು ನಿರ್ಧರಿಸಲಾಯಿತು.
5 ರಾಜ್ಯದಲ್ಲಿ ಶೇ. 61ರಷ್ಟು ಜನ ಗುಣಮುಖರಾಗಿದ್ದಾರೆ. 3700 ಸಕ್ರಿಯ ಪ್ರಕರಣಗಳು ಇವೆ.
6 ಇಲಾಖೆಗಳು ಈ ನಿಟ್ಟಿನಲ್ಲಿ ಸಮನ್ವಯದಿಂದ ಕ್ರಮ ವಹಿಸುವಂತೆ ಸೂಚಿಸಲಾಯಿತು.
7. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಸಚಿವರು, ಶಾಸಕರ ಸಭೆ ನಡೆಸಲಾಗುವುದು ಎಂದು ತೀರ್ಮಾನ ಮಾಡಲಾಯಿತು.