ಬೆಂಗಳೂರು: ರಾಜ್ಯ ಸಹಕಾರ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ನ ಅಧ್ಯಕ್ಷ ಗಾದಿ ಕೊನೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ಆಪ್ತರಾಗಿರುವ ವಿಧಾನ ಪರಿಷತ್ ಸದಸ್ಯ ರವಿ ಅವರ ಪಾಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಶರಣಗೌಡ ಬಯ್ಯಾಪುರ ಆಯ್ಕೆಯಾಗಿದ್ದಾರೆ.
ಅಪೆಕ್ಸ್ ಬ್ಯಾಂಕ್ಗ 4 ತಿಂಗಳ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಆಕಾಂಕ್ಷಿಗಳ ಮಧ್ಯೆ ಪ್ರಭಲ ಸ್ಪರ್ಧೆ ಇದ್ದ ಕಾರಣ ಚುನಾವಣೆ ಮುಂದೂಡಿಕೆಯಾಗಿತ್ತು. ಅಂತಿಮವಾಗಿ ರವಿ ಮತ್ತು ರಾಜಣ್ಣ ಮಧ್ಯೆ ಪೈಪೋಟಿ ತೀವ್ರವಾಗಿತ್ತು. ಆದರೆ ಇಂದು ಕಾಂಗ್ರೆಸ್ ಹೈಕಮಾಂಡ್ ರವಿ ಅವರಿಗೆ ಅಧ್ಯಕ್ಷ ಸ್ಥಾನ, ಶರಣಗೌಡ ಬಯ್ಯಾಪುರ ಅವರಿಗೆ ಉಪಾಧ್ಯಕ್ಷ ಸ್ಥಾನವನ್ನು ಕಲ್ಪಿಸಿ ಕುತೂಹಲಕ್ಕೆ ತೆರೆ ಎಳೆದಿದೆ.
ಬುಧವಾರ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರ ಉಪಸ್ಥಿತಿಯಲ್ಲಿ ಶಿವಕುಮಾರ್ ಅವರು ಅಪೆಕ್ಸ್ ಬ್ಯಾಂಕ್ನ 19 ನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ನಂತರ ಸಂಜೆ, ನಿರ್ದೇಶಕರು, ಸವದಿ ಮತ್ತು ರಾಜಣ್ಣ ಖಾಸಗಿ ಹೋಟೆಲ್ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದರು. ಈ ಸಭೆಯ ವೇಳಗೆ ಬಹುತೇಕ ನಿರ್ದೇಶಕರು ರವಿ ಅವರ ಪರವಿದ್ದ ಕಾರಣ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಪೆಕ್ಸ್ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಕುರಿತು ಬೆಂಗಳೂರಿನಲ್ಲಿ ಸಹಕಾರ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದ್ದು, “ಮೊದಲ ಎರಡೂವರೆ ವರ್ಷಗಳ ಅವಧಿಗೆ ಎಂಎಲ್ಸಿ ರವಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶರಣಗೌಡ ಬಯ್ಯಾಪುರ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಇಬ್ಬರ ಆಯ್ಕೆ ಅಂತಿಮಗೊಂಡಿದ್ದು, ಮುಂದಿನ ಎರಡೂವರೆ ವರ್ಷಗಳ ಅಧಿಕಾರಾವಧಿ ಕುರಿತು ಆ ನಂತರವೇ ತೀರ್ಮಾನಿಸಲಾಗುವುದು” ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಧ್ವನಿ ಎತ್ತುತ್ತಿದ್ದ ನಾಯಕರನ್ನು ಆಯಕಟ್ಟಿನ ಹುದ್ದೆಗಳಿಂದ ದೂರವಿಡಲಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಡಿಕೆಶಿ ಕಾರ್ಯವೈಖರಿಯನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದ್ದ ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕೆ.ಎನ್. ರಾಜಣ್ಣ ಇಬ್ಬರೂ ಅಧಿಕಾರದಿಂದ ದೂರ ಉಳಿಯುವಂತಾಗಿದೆ. ಮತ್ತೊಂದೆಡೆ, ಸನ್ನಿವೇಶಕ್ಕೆ ತಕ್ಕಂತೆ ರಾಜಕೀಯ ಹೆಜ್ಜೆ ಇಟ್ಟ ಜಮೀರ್ ಅಹ್ಮದ್ ಮಾತ್ರ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Laxmi News 24×7