ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ಸಚಿವ ಸತೀಶ್ ಜಾರಕಿಹೊಳಿ 36 ಗಂಟೆಗಳ ವಿಚಾರಣೆ ಎದುರಿಸಿದ್ದು, ಇ.ಡಿ ದಾಳಿ ಅಂತ್ಯಗೊಂಡಿದೆ.
ಬುಧವಾರ ತಡರಾತ್ರಿ 2 ಗಂಟೆವರೆಗೆ ವಿಚಾರಣೆ ನಡೆಸಿದ್ದ ಇಡಿ, ಇಂದು ಬೆಳಗ್ಗೆ 6 ಗಂಟೆಯಿಂದಲೂ ಮತ್ತೆ ಇ.ಡಿ ದಾಳಿ ಆರಂಭಿಸಿತ್ತು. ವಿಚಾರಣೆ ವೇಳೆ ವಿದೇಶ ವ್ಯವಹಾರಗಳ ಬಗ್ಗೆ ಜಾರಕಿಹೊಳಿ ಮಾಹಿತಿ ನೀಡದಿರುವುದರಿಂದ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಇನ್ನು, ಬೆಂಗಳೂರು, ಬೆಳಗಾವಿ, ಗೋಕಾಕ್ನಲ್ಲಿ 18 ಕಡೆ ರೇಡ್ ಮಾಡಿರುವ ಇ.ಡಿ, ಸಂಸದೆ ಪ್ರಿಯಾಂಕಾ ಮನೆಯಲ್ಲಿ 1.20 ಕೋಟಿ ಸೇರಿದಂತೆ ಸತೀಶ್ ಜಾರಕಿಹೊಳಿ ಮನೆಯಲ್ಲಿ 3 ಕೋಟಿಗೂ ಅಧಿಕ ಹಣವನ್ನು ಜಪ್ತಿ ಮಾಡಿದೆ. ಗೋಕಾಕ್ ಸತೀಶ್ ನಿವಾಸದಲ್ಲಿ ಸಿಕ್ಕ ಹಣ ವಶಕ್ಕೆ ಪಡೆಯಲು ಅಧಿಕಾರಿಗಳು ಬೊಲೇರೋ ವಾಹನದಲ್ಲಿ 2 ಟ್ರಂಕ್ ಕೂಡ ತಂದಿದ್ದಾರೆ. ಸಚಿವರ ಸಿಎ ಪ್ರದೀಪ್ ಕುಮಾರ್ ಇಂಡಿ, ಸೈದಪ್ಪ ಗದಾಡಿ ಅವರನ್ನು ಕರೆಸಿಕೊಂಡು ಮಾಹಿತಿಯನ್ನೂ ಪಡೆದಿದ್ದಾರೆ.
ಆಫ್ರಿಕಾದ ರುವಾಂಡಾ ಗಣಿಗಾರಿಕೆಯಲ್ಲಿ ಹೂಡಿಕೆಯ ದಾಖಲೆ ಬಗ್ಗೆ ಮಾಹಿತಿ ಕಲೆ ಹಾಕಿದೆ. ಇನ್ನು, ಜಾರಕಿಹೊಳಿ ನಿವಾಸ, ಬಾಮೈದಾನ ಮನೆಯಲ್ಲಿ ಇಡಿ ಶೋಧ ಅಂತ್ಯವಾಗಿದ್ದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸಚಿವ ಜಾರಕಿಹೊಳಿ ಬೆಂಗಳೂರು ನಿವಾಸಕ್ಕೆ ವಾಲ್ಮೀಕಿ ಪ್ರಸನ್ನನಾಂದ ಸ್ವಾಮೀಜಿ ಭೇಟಿ ನೀಡಿದ್ದರು. ಆದರೆ, ಇ.ಡಿ ಅವಕಾಶ ಕೊಡ್ಲಿಲ್ಲ. ಈ ಮಧ್ಯೆ, ಸತೀಶ್ ಜಾರಕಿಹೊಳಿ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಅತ್ತ ಧಾರವಾಡ ನಗರ, ಚಾಮರಾಜನಗರ, ಗದಗ, ಹಾವೇರಿ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸತೀಶ್ ಬೆಂಬಲಿಗರು, ದಲಿತ ಸಮುದಾಯದವರು ಪ್ರತಿಭಟನೆ ಮಾಡಿದ್ದಾರೆ.
Laxmi News 24×7