Breaking News
Home / new delhi / ಸರ್ಕಾರದ ವಿವಾದಿತ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧಾರ

ಸರ್ಕಾರದ ವಿವಾದಿತ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಧಾರ

Spread the love

ಬೆಂಗಳೂರು,  ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಭೂಸುಧಾರಣ, ಎಪಿಎಂಸಿ, ಕೈಗಾರಿಕೆ ಸುಧಾರಣಾ ಕಾಯ್ದೆಗಳನ್ನು ಹಿಂಪಡೆಯುವಂತೆ ಪಟ್ಟುಹಿಡಿಯಲು ಕಾಂಗ್ರೆಸ್ ಶಾಸಕಾಂಗ ಸಭೆ ನಿರ್ಧರಿಸಿದೆ.

ಕೊರೊನಾ, ಡ್ರಗ್ಸ್ ಹಾವಳಿ ಮತ್ತು ಡಿಜೆಹಳ್ಳಿ ಪ್ರಕರಣಗಳನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ಪ್ರಸ್ತಾವನೆ ಮಂಡಿಸಲು ನಿರ್ಧರಿಸಲಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಸಿದ್ದರಾಮಯ್ಯನವರು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ, ವಿದ್ಯುತ್ , ಪಂಚಾಯತ್ ಕಾಯ್ದೆ ತಿದ್ದುಪಡಿಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟರು.

ಸರ್ಕಾರ ತಿದ್ದುಪಡಿಗಳ ಮೂಲಕ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ರೈತರ,ಬಡವರ, ಕಾರ್ಮಿಕರನ್ನು ಅತಂತ್ರ ಸ್ಥಿತಿಗೆ ತಳ್ಳುತ್ತಿದೆ. ಕೊರೊನಾ ಸಂಕಷ್ಟದಿಂದ ಜರ್ಝರಿತವಾಗಿರುವ ಜನರಿಗೆ ಕಾಯ್ದೆಗಳ ಮೂಲಕ ಮತ್ತಷ್ಟು ತೊಂದರೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಚರ್ಚಿಸದೆ ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೊಳಿಸುವ ರಾಜ್ಯಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮುಂದುವರೆಸಿದೆ.ವಿಧಾನಸಭೆಯಲ್ಲಿ ಸಂಖ್ಯಾಬಲ ಇದೆ ಎಂಬ ಕಾರಣಕ್ಕಾಗಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡುವಳಿಕೆ.

ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಹಾನಿ ಮಾಡುವ ಕಾಯ್ದೆಗಳು ಜಾರಿಯಾಗಲು ಬಿಡಬಾರದು ಎಂದು ಸಿದ್ದರಾಮಯ್ಯ ಕರೆ ನೀಡಿದರು. ಕೊರೊನಾದಿಂದ ಜನಜೀವನ ತತ್ತರಿಸಿಹೋಗಿದೆ. ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ನಷ್ಟವಾಗಿದೆ.

ಅವುಗಳ ಬಗ್ಗೆ ಗಮನಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಡ್ರಗ್ಸ್ ಹಾವಳಿಯಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ರಾಜ್ಯ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಳ್ಳುವ ಬದಲು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಾ ಜನರ ದಾರಿತಪ್ಪಿಸುತ್ತಿದೆ.

ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣದಲ್ಲೂ ಇದೇ ರೀತಿ ದಾರಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಸರ್ಕಾರದ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡಬೇಕೆಂದು ನಾಯಕರು ಸಲಹೆ ನೀಡಿದರು. ಪ್ರತಿಯೊಂದು ವಿಷಯದ ಮೇಲೂ ಆಯ್ದ ವ್ಯಕ್ತಿಗಳು ಚರ್ಚೆ ಮಾಡಬೇಕು.

ಎಲ್ಲರೂ ಎಲ್ಲ ವಿಷಯಗಳ ಮೇಲೆ ಚರ್ಚೆ ಮಾಡಲು ಹೋಗಿ ಗೊಂದಲ ಉಂಟಾಗಬಾರದು. ವಿಷಯ ಚರ್ಚೆ ಮಾಡುವ ಮೊದಲು ಸಾಕಷ್ಟು ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಸಮಗ್ರ ಮಾಹಿತಿಯೊಂದಿಗೆ ಸರ್ಕಾರದ ಲೋಪದೋಷಗಳನ್ನು ಬಿಚ್ಚಿಡಬೇಕು ಎಂದರು.

ಬಿಜೆಪಿ ಕಡೆಯಿಂದ ಪ್ರಚೋದನಾಕಾರಿ ಮಾತುಗಳು ಕೇಳಿಬರುತ್ತವೆ. ವಿಷಯದ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಾರೆ. ಹೇಗಾದರೂ ಮಾಡಿ ಗಲಾಟೆ ಎಬ್ಬಿಸಿ ಅಧಿವೇಶನವನ್ನು ಮುಂದೂಡಿ ಪರಾರಿಯಾಗಲು ಪ್ರಯತ್ನಿಸುತ್ತಾರೆ. ಅದಕ್ಕೆ ಅವಕಾಶ ನೀಡಬಾರದು. ಗದ್ದಲ, ಗಲಭೆಗೆ ಅವಕಾಶ ನೀಡದೆ ವ್ಯವಸ್ಥಿತವಾಗಿ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.

ಶಾಸಕಾಂಗ ಸಭೆಯಲ್ಲಿ ಶಾಸಕರ ಹಾಜರಾತಿ ಕಡಿಮೆಯಿದೆ. ಅಧಿವೇಶನದಲ್ಲಿ ಎಲ್ಲ ಶಾಸಕರು ಚರ್ಚೆಯಲ್ಲಿ ಭಾಗವಹಿಸಬೇಕು. ಯಾವ ವಿಷಯದಲ್ಲಿ ಮಾತನಾಡುತ್ತೇನೆ ಎಂಬ ಬಗ್ಗೆ ಲಿಖಿತವಾಗಿ ಮುಖ್ಯ ಸಚೇತಕ ಅಜಯ್ ಸಿಂಗ್ ಅವರಿಗೆ ಮೊದಲೇ ಮಾಹಿತಿ ನೀಡಬೇಕು ಎಂದು ಹೇಳಿದರು.

ಕೊರೊನಾ ನಿಯಂತ್ರಣದ ಸಾಮಾಗ್ರಿಗಳ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಈ ಹಗರಣವನ್ನು ತನಿಖೆಗೆ ವಹಿಸುವವರೆಗೂ ಪಟ್ಟು ಬಿಡಬಾರದು. ಹಗಲುರಾತ್ರಿ ಧರಣಿ ಸೇರಿದಂತೆ ಗಂಭೀರ ಸ್ವರೂಪದ ಹೋರಾಟಗಳನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಜರಿದ್ದರು.


Spread the love

About Laxminews 24x7

Check Also

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

Spread the love ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ