Breaking News
Home / Uncategorized / ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

Spread the love

ಬೆಳಗಾವಿ: ಸತತ ಮಳೆಯಿಂದಾಗಿ ಇಲ್ಲಿನ ಬಳ್ಳಾರಿ ನಾಲಾ (ದೊಡ್ಡ ಚರಂಡಿ) ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಹಲಗಾ ಸಮೀಪದ ಗದ್ದೆಯೊಂದರಲ್ಲಿನ ಶೆಡ್‌ ಜಲಾವೃತವಾಗಿದ್ದು, ಅಲ್ಲಿದ್ದ 45ಕ್ಕೂ ಹೆಚ್ಚಿನ ನಾಯಿಗಳಿಗೆ ಪ್ರಾಣಾಪಾಯ ಎದುರಾಗಿದೆ.

ನಗರದ ಪ್ರಾಣಿ ಪ್ರೇಮಿಗಳಾದ ಶಂಕರ ಹಾಗೂ ಅವರ ಪುತ್ರಿ ಶ್ವೇತಾ ದೊಡ್ಡಮನಿ ಅವರು ಬೀದಿ ನಾಯಿಗಳನ್ನು ಹಿದಿಡು ತಂದು ಅಲ್ಲಿ ಸಾಕುತ್ತಿದ್ದರು. ಈಚೆಗೆ ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅನ್ನ-ಆಹಾರ ಸಿಗದೆ ಕಂಗಾಲಾಗಿದ್ದ ಕೆಲವು ನಾಯಿಗಳನ್ನು ಕೂಡ ಅಲ್ಲಿ ತಂದು ಆಶ್ರಯ ನೀಡಿದ್ದರು. ಅವುಗಳಿಗಾಗಿಯೇ ಟಾರ್ಪಲಿನ್‌ನಲ್ಲಿ ಶೆಡ್‌ ಮಾಡಿದ್ದರು. ಆಹಾರ ನೀಡಿ ಸಲಹುತ್ತಿದ್ದರು. ಶುಕ್ರವಾರ, ಬಳ್ಳಾರಿ ನಾಲೆಯ ನೀರು ನೂರಾರು ಎಕರೆ ಜಮೀನುಗಳಿಗೆ ವ್ಯಾಪಿಸಿದ್ದರಿಂದ ಈ ಶ್ವಾನಗಳಿಗೆ ಕಂಟಕ ಎದುರಾಗಿದೆ.

ನೀರಿನ ಪ್ರಮಾಣ ಜಾಸ್ತಿ ಇರುವುದರಿಂದ ಮಾಲೀಕರು ಅಲ್ಲಿಗೆ ತಲುಪಲು ಆಗುತ್ತಿಲ್ಲ. ಹೀಗಾಗಿ, ಅವರು ಮರುಗುತ್ತಿದ್ದಾರೆ. ನಾಯಿಗಳನ್ನು ರಕ್ಷಿಸುವುದು ಹೇಗೆ ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ.

ಕೆಲವು ನಾಯಿಗಳು ಈಜಿ ದಡ ತಲುಪಿದರೆ, ಉಳಿದವು ಅಲ್ಲೇ ಸಿಲುಕಿ ಮೂಕವೇದನೆ ಅನುಭವಿಸುತ್ತಿವೆ. ಆಹಾರ ಸಿಗದೆ ಪರದಾಡುತ್ತಿವೆ.

ಪ್ರಾಣಾಪಾಯದಿಂದ ಪಾರಾಗಿ ಬಂದ ‘ಜ್ಯೋತಿ’ ನಾಯಿ ಹೆಸರಿನ ನಾಯಿಯನ್ನು ಹಿಡಿದುಕೊಂಡು ಶ್ವೇತಾ ಕಣ್ಣೀರಾದರು. ಸುರಕ್ಷಿತ ಸ್ಥಳಕ್ಕೆ ಬರಲು ಪರದಾಡುತ್ತಿದ್ದ ಇನ್ನೊಂದನ್ನು ಸ್ಥಳೀಯ ಹುಡುಗರು ಹಿಡಿದು ತಂದರು.

‘ಬೀದಿಯಲ್ಲಿ ಓಡಾಡುತ್ತಿದ್ದ ನಾಯಿಗಳನ್ನು ಸಣ್ಣವಿದ್ದಾಗ ಹಿಡಿದು ತಂದು ಸಾಕುತ್ತಿದ್ದೇವೆ. ಶೆಡ್ ಜಲಾವೃತವಾದ್ದರಿಂದ ಅವುಗಳನ್ನು ಅಪಾಯದಿಂದ ರಕ್ಷಿಸಲು ಆಗುತ್ತಿಲ್ಲ. ‘ಕಾಲಿ’, ‘ಗೊಲ್ಯ’, ‘ಡಬ್ಬು’, ‘ರಿಕ್ಷಾ’… ಹೀಗೆ ಹಲವು ಹೆಸರುಗಳನ್ನು ಇಟ್ಟಿದ್ದೇವೆ. ಕೆಲವು ಪಪ್ಪಿಗಳನ್ನು (ಚಿಕ್ಕವನ್ನು) ನೆನ್ನೆ ಹಿಡಿದುಕೊಂಡು ಹೋಗಿದ್ದೆವು. ಅಲ್ಲಿದ್ದವುಗಳಿಗೆ ಆಹಾರ ಕೊಟ್ಟು ಶೆಡ್‌ಗೆ ಬೀಗ ಹಾಕಿ ಬಂದಿದ್ದೆವು. ಶುಕ್ರವಾರ ಬೆಳಿಗ್ಗೆ ನೀರಿನ ಹರಿವು ಜಾಸ್ತಿಯಾಗಿದ್ದು, ದೊಡ್ಡವನ್ನು ಸ್ಥಳಾಂತರಿಸಲು ಆಗುತ್ತಿಲ್ಲ’ ಎಂದು ತಿಳಿಸಿದರು.

‘ನಗರಪಾಲಿಕೆ ಹಾಗೂ ಅಗ್ನಿಶಾಮಕ ದಳದವರು ಇತ್ತ ಗಮನಹರಿಸಬೇಕು. ಈ ಮೂಕ ಪ್ರಾಣಿಗಳನ್ನು ರಕ್ಷಿಸಿ, ಮಾನವೀಯತೆ ಮೆರೆಯಬೇಕು. ನಾಯಿಗಳು ನೀರು ಪಾಲಾಗಲು ಅವಕಾಶ ಕೊಡಬಾರದು’ ಎಂದು ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಶ್ರೀನಿವಾಸ ತಾಳೂಕರ ಕೋರಿದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ