Breaking News
Home / new delhi / ಕನ್ನಡ ಭಾಷೆಯ ಮೇಲಿನ ಉದ್ಧಟತನ ಸರಿಯಲ್ಲ – ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷಕ ಟಿ.ಎಸ್.ನಾಗಾಭರಣ ಎಚ್ಚರಿಕೆ

ಕನ್ನಡ ಭಾಷೆಯ ಮೇಲಿನ ಉದ್ಧಟತನ ಸರಿಯಲ್ಲ – ಕನ್ನಡ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷಕ ಟಿ.ಎಸ್.ನಾಗಾಭರಣ ಎಚ್ಚರಿಕೆ

Spread the love

ಬೆಂಗಳೂರು : ಹೊರನಾಡು/ಗಡಿನಾಡು ಕನ್ನಡಗರಿಗೆ ರಾಜ್ಯ ಸರ್ಕಾರದ ಆದೇಶದನ್ವಯ ಶೇ.5ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕೆಂಬ ಆದೇಶವಿದ್ದರೂ ಸಹ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಉಲ್ಲಂಘಿಸಿರುವುದು ರಾಜ್ಯಭಾಷಾನೀತಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಕನ್ನಡದ ನೆಲದಲ್ಲಿ ಹೀಗೆ ಉದ್ಧಟತನ ತೋರಿದ ಅಧಿಕಾರಿ/ನೌಕರರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಹೇಳಿದರು.

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆಯನ್ನು ಇಂದು ಜಾಲಸಂಪರ್ಕ ಸಭೆ ನಡೆಸಿದ ಅಧ್ಯಕ್ಷರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಮೊದಲ 2 ಸೆಮಿಸ್ಟರ್ನಲ್ಲಿ ಕನ್ನಡವನ್ನು ಬೋಧಿಸಲಾಗುತ್ತಿದೆ.

ಆದರೆ ಬೀದರ್ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮಾತ್ರ ಕನ್ನಡವನ್ನು ಬೋಧಿಸದೆ ಮೊಂಡುತನ ಪ್ರದರ್ಶಿಸುತ್ತಿದೆ. ಅಲ್ಲದೆ ಈ ಸಂಬಂಧ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಸಹ ಬಂದಿವೆ. ಈ ಬಗ್ಗೆ ಮಾಹಿತಿ ಪಡೆಯಲು ಹಲವು ಬಾರಿ ಪತ್ರ ಬರೆದರೂ ಸಹ ಯಾವುದೇ ಉತ್ತರವನ್ನೂ ನೀಡದೆ ಇರುವುದು ಉದ್ಧಟತನದ ಪರಮಾವಧಿಯಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಪರಿಷತ್ತು 2016ರಿಂದಲೂ ಹಲವು ಸುತ್ತೋಲೆಗಳನ್ನು ಹೊರಡಿಸಿದೆ. ಕನ್ನಡ ಬೋಧನೆಯು ಅಂಕಗಣನೆಗೆ ಒಳಪಟ್ಟು ಮೌಲ್ಯಮಾಪನ ಮಾಡಿ ಕಲಿಸಬೇಕು. ವಿಶ್ವವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ಕೆಳಸಂಸ್ಕೃತಿ ಮತ್ತು ಶ್ರಮಜೀವಿಗಳೊಂದಿಗೆ ಸಂವಹನ ನಡೆಸಬೇಕಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸದಿದ್ದರೆ ನಾಳೆ ಅವರುಗಳು ಈ ನೆಲದಲ್ಲಿ ಹೇಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ? ನೀವು ಕನ್ನಡಿಗರಲ್ಲವೇ ನೀವು ಕನ್ನಡ ನೆಲದಲ್ಲಿಲ್ಲವೇ ಎಂದು ವಿವಿ ಕುಲಪತಿಗಳು ಮತ್ತು ಕುಲಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಸರೋಜಿನಿ ಮಹಿಷಿ ವರದಿಯನ್ವಯ ಗುತ್ತಿಗೆ, ಹೊರಗುತ್ತಿಗೆಯವರನ್ನು ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ.100 ರಷ್ಟು ಕನ್ನಡಿರಿಗೆ ಅವಕಾಶ ನೀಡಬೇಕು ಎಂಬ ನಿಯಮವಿದೆ. ಅಷ್ಟಾದರೂ ಸಹ ಖಾಯಂ ನೇಮಕಾತಿಯಲ್ಲಿ ತಮಿಳುನಾಡಿನವರಿಗೆ ಅವಕಾಶ ನೀಡಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದರು. 2004ರಲ್ಲಿ 2 ಸದನಗಳಲ್ಲಿ ಚರ್ಚೆಯಾಗಿ ಅಂಗೀಕೃತಗೊಂಡಿರುವ ಆದೇಶವನ್ನು ಉಲ್ಲಂಘಿಸುವುದಾದರೆ ನೀವು ಅಂತಹ ಉನ್ನತ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಾಗಿರುವುದಿಲ್ಲ ಎಂದು ಗುಡುಗಿದರು.

ವೃತ್ತಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಕನ್ನಡ ಬೋಧನೆ ಕಡ್ಡಾಯಮಾಡಿ ಉನ್ನತ ಶಿಕ್ಷಣ ಪರಿಷತ್ತು ಈ ಬಗ್ಗೆ ಆದೇಶ, ಸುತ್ತೋಲೆಗಳನ್ನು ಹೊರಡಿಸಿದೆ. ಅಷ್ಟಾದರೂ ತಮ್ಮ ವಿವಿಯಲ್ಲಿ ಕನ್ನಡ ಪಠ್ಯ ಬೋಧನೆ ಮಾಡದಿರುವುದು ಎಷ್ಟು ಸರಿ ಎಂಬುದನ್ನು ನೀವು ಕನ್ನಡಿಗರೇ ಆಗಿದ್ದರೆ ಆತ್ಮಶೋಧನೆ ಮಾಡಿಕೊಳ್ಳಿ. ಮತ್ತು ಶಾಸನಾತ್ಮವಾಗಿ ರಚನೆಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರಗಳಿಗೆ ಉತ್ತರ ನೀಡದಿರಲು ಸೂಕ್ತ ಕಾರಣವನ್ನು ಸಭೆಯಲ್ಲಿ ತಿಳಿಸುವಂತೆ ಕುಲಪತಿಗಳಿಗೆ ಸೂಚಿಸಿದರು.

ನಾರಾಯಣಸ್ವಾಮಿಯವರು ಕುಲಪತಿಗಳಾಗಿ ಬಂದು 2 ವರ್ಷಗಳು ಕಳೆದಿವೆ. ಅಂದಿನಿಂದ ನಿಮ್ಮ ಕನ್ನಡದ ಬಗ್ಗೆ ಯಾವ ಕೆಲಸಗಳನ್ನು ಮಾಡಿದ್ದೀರಿ. ಜಾಲತಾಣ ಸಂಪೂರ್ಣ ಇಂಗ್ಲಿಷ್ನಲ್ಲಿದೆ. ಎಲ್ಲ ಟಿಪ್ಪಣಿಗಳು ಕೂಡ ಇಂಗ್ಲಿಷ್ನಲ್ಲಿವೆ. ಕನ್ನಡದಲ್ಲಿ ಇವೆ ಎನ್ನುವುದಾದರೆ ಆನ್ಲೈನ್ನಲ್ಲಿ ಪ್ರದರ್ಶಿಸಿ ಎಂದು ಒತ್ತಾಯಿಸಿದರು.

ಕನ್ನಡಿಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನುಸರಿಸಲಾಗುತ್ತಿರುವ ವಿಶೇಷ ಪ್ರೋತ್ಸಾಹದಾಯಕ ಕ್ರಮಗಳಿದ್ದಲ್ಲಿ ವಿವರ ನೀಡಿ ಎಂದರೆ ಇಲ್ಲ ಎಂದು ಹೇಳುತ್ತೀರಿ, ಕನ್ನಡ ಭಾಷೆ-ಸಂಸ್ಕೃತಿಯನ್ನು ಪ್ರೋತ್ಸಾಹಿಸುವಲ್ಲಿ ಕೈಗೊಂಡ ಕ್ರಮದ ಬಗ್ಗೆ ತಿಳಿಸಿ ಎಂದರೆ ಇಲ್ಲ ಎಂದು ಉತ್ತರಿಸುತ್ತೀರಿ. ಹಾಗಿದ್ದರೆ ನೀವು ಕರ್ನಾಟಕದಲ್ಲಿಲ್ಲವೆ ಎಂದು ಪ್ರಶ್ನಿಸಿದರು.

ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾರಾಯಣಸ್ವಾಮಿ ಅವರು ಮಾತನಾಡಿ, ನಮ್ಮಿಂದ ತಪ್ಪುಗಳು ಆಗಿರುವುದು ನಿಜ. ಕನ್ನಡ ಪಠ್ಯಕ್ರಮ ಬೋಧನೆ ಸಂಬಂಧ ಕೂಡಲೇ ಕ್ರಮಕೈಗೊಳ್ಳಲಾಗುವುದು ಮತ್ತು ಜಾಲತಾಣವನ್ನು ಕನ್ನಡೀಕರಣಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುವುತ್ತೇವೆ ಮತ್ತು 3 ತಿಂಗಳ ಒಳಗೆ ಕನ್ನಡದ ಪ್ರಗತಿಯ ವರದಿ ಪ್ರಾಧಿಕಾರಕ್ಕೆ ನೀಡುವುದಾಗಿ ಭರವಸೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಧಿಕಾರದ ರೂಪು-ರೇಷೆಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು. ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು ಮಾದರಿ ಜಾಲತಾಣಗಳ ಕುರಿತು ಮಾಹಿತಿ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಮಾನ್ಯ ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ, ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳು ಪ್ರೊ.ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಹೆಚ್.ಡಿ. ನಾರಾಯಣಸ್ವಾಮಿ, ಕುಲಸಚಿವರಾದ ಡಾ.ಕೆ.ಸಿ.ವೀರಣ್ಣ, ವಿಸ್ತರಣಾ ನಿರ್ದೇಶಕರಾದ ಡಾ.ಎನ್.ಎ. ಪಾಟೀಲ್, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ.ವೀರಶೆಟ್ಟಿ, ಪ್ರಾಧಿಕಾರದ ಸದಸ್ಯರಾದ ವಿಜಯಲಕ್ಷ್ಮಿ ಬಾಳೆಕುಂದ್ರಿ, ಸುರೇಶ್ ಬಡಿಗೇರ್, ಡಾ.ಕಿಶೋರ್,ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸೆಂಥಿಲ್ ವೆಲ್, ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 20 ಮಂದಿ ವಿಶ್ವವಿದ್ಯಾಲಯ ಮಟ್ಟದ ಮುಖ್ಯಸ್ಥರುಗಳು, ಮುಖ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಡಿಸಿಎಂ ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಮೇ.27ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆಗೆ ಸರ್ಕಾರದ ಸಮ್ಮತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ