Breaking News
Home / ಜಿಲ್ಲೆ / ಬೆಂಗಳೂರು / ಎದ್ದು ಬಿದ್ದು ಸ್ವಗ್ರಾಮಕ್ಕೆ ತೆರಳಿದ್ದ ಕಾರ್ಮಿಕರು ಅಷ್ಟೇ ವೇಗದಲ್ಲಿ ಬೆಂಗಳೂರಿಗೆ ವಾಪಾಸ್..!

ಎದ್ದು ಬಿದ್ದು ಸ್ವಗ್ರಾಮಕ್ಕೆ ತೆರಳಿದ್ದ ಕಾರ್ಮಿಕರು ಅಷ್ಟೇ ವೇಗದಲ್ಲಿ ಬೆಂಗಳೂರಿಗೆ ವಾಪಾಸ್..!

Spread the love

ಬೆಂಗಳೂರು, ಮೇ 9- ದೇಶಾದ್ಯಂತ ಲಾಕ್ ಡೌನ್ ಸಡಿಲಿಸಿ ವಲಸೆ ಕಾರ್ಮಿಕರಿಗೆ ತಮ್ಮೂರಿಗೆ ಸೇರಿಕೊಳ್ಳಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿರುವ ಚೆಕ್ ಪೋಸ್ಟ್ ಗಳಿಗೆ ಬರುತ್ತಿರುವ ವಾಹನಗಳ ಸಂಖ್ಯೆ 20 ಪಟ್ಟು ಹೆಚ್ಚಾಗಿದೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶದಗಳಿಂದ ಸಾವಿರಾರು ವಾಹನಗಳು ಬರಲಾರಂಭಿಸಿವೆ. ಇಲ್ಲಿಂದ ಬೇರೆ ಹೋಗಿ ಕೆಲಸ ಮಾಡುತ್ತಿದ್ದವರು ವಾಪಸ್ ಬರುವುದು ಒಂದು ಕತೆಯಾದರೆ, ಇಲ್ಲಿದ್ದು ಮೇ 4ರ ನಂತರ ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ತಮ್ಮ ಊರಿಗೆ ಹೋಗಿದ್ದವರು ಅಲ್ಲಿ ಸ್ವಗ್ರಾಮಕ್ಕೆ ತೆರಳಲು ಅವಕಾಶ ಸಿಗದೆ ವಾಪಾಸ್ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಸ್ವಗ್ರಾಮಕ್ಕೆ ತೆರಳುವ ಆಸೆಯಲ್ಲಿ ಎದ್ದು ಬಿದ್ದು ಹೋಗಿದ್ದವರು ಅಷ್ಟೇ ವೇಗದಲ್ಲಿ ವಾಪಾಸ್ ಬರುತ್ತಿದ್ದಾರೆ. ಪ್ರಯಾಣ ಮಾಡಿದವರು ದೇಶದ ಯಾವುದೇ ಪ್ರದೇಶಕ್ಕೆ ಹೋದರು ಅಲ್ಲಿ ನೆಲಸಬೇಕಾದರೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನಲ್ಲಿ ಇರಲೇಬೇಕಿದೆ.

ಬಹುತೇಕ ರಾಜ್ಯಗಳಲ್ಲಿ ಎರಡು ರೀತಿಯ ಕ್ವಾರಂಟೈನ್ ವ್ಯವಸ್ಥೆ ಇದೆ. ಸ್ವಂತ ಖರ್ಚಿನಲ್ಲಿ ಹೋಟೆಲ್ ನಲ್ಲಿ ಪ್ರತ್ಯೇಕವಾಗಿ ಉಳಿಯುವುದು. ಇನ್ನೊಂದು ವ್ಯವಸ್ಥೆಯಂದರೆ ಸರ್ಕಾರ ಹಾಸ್ಟೇಲ್, ಕಲ್ಯಾಣ ಮಂಡಪ ಅಥವಾ ಇತರ ಸಮುದಾಯ ಭವನಗಳಲ್ಲಿ ಮಾಡಿರುವ ಉಚಿತ ವ್ಯವಸ್ಥೆ.

ಬಹುತೇಕ ಕಾರ್ಮಿಕರು ಹಣ ಪಾವತಿಸಿ ಕ್ವಾರಂಟೈನ್ ನಲ್ಲಿ ಇರಲು ಇಚ್ಚಿಸುತ್ತಿಲ್ಲ. ಹಾಗಂತ ಸರ್ಕಾರದ ಕ್ವಾರಂಟೈನ್ ನಲ್ಲೂ ಇರಲಾಗುತ್ತಿಲ್ಲ. ಸರಿಯಾದ ಸೌಲಭ್ಯಗಳಿಲ್ಲದೆ ಕುರಿ ದೊಡ್ಡಿಯಂತಹ ಕ್ವಾರಂಟೈನ್ ನಲ್ಲಿ ಕಾಲ ಕಳೆಯಲು ಆಸಕ್ತಿ ತೋರಿಸುತ್ತಿಲ್ಲ.

ಮತ್ತೊಂದು ಗೊಂದಲವೆಂದರೆ ಮೇ 17ಕ್ಕೆ ದೇಶಾದ್ಯಂತ ಘೋಷಣೆಯಾಗಿರುವ ಲಾಕ್ ಡೌನ್ ಸಡಿಲಗೊಳ್ಳಬುದು. ಅನಂತರ ಕೆಲಸಕ್ಕೆ ಮರಳಬೇಕಾಗುತ್ತದೆ. ಈಗ ಊರಿಗೆ ಹೋಗಿ ಕ್ವಾರಂಟೈನ್ ನಲ್ಲಿ ಸಿಲುಕಿದರೆ 14 ದಿನ ಕಾಲಹರಣವಾಗುತ್ತದೆ. ಇತ್ತ ಮನೆಯವರ ಜೊತೆಯೂ ಇದ್ದ ಹಾಗಲ್ಲ. ದುಡ್ಡುಕೊಟ್ಟು ಪ್ರತ್ಯಕವಾಗಿ ಇರುವುದು ಬೇಡ. ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ವಾಪಾಸ್ ಹೋಗೋಣ ಎಂದು ವಾಪಾಸ್ ಬರುತ್ತಿದ್ದಾರೆ.

ಕಾರ್ಮಿಕರ ದುರಾವಸ್ಥೆ ಹೇಗಿದೆ ಎಂದರೆ ಮೇ 17ರ ನಂತರ ಲಾಕ್ ಡೌನ್ ಅಂತ್ಯಗೊಳ್ಳಲಿದೆಯೋ ಇಲ್ಲವೋ ಎಂಬುದು ಗೋತ್ತಿಲ್ಲ. ಒಂದು ವೇಳೆ ಮುಂದುವರೆದರೆ ಎಂಬ ಗೊಂದಲವೂ ಇದೆ. ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಹಾಗಾಗಿ ಮೇ 17ರ ನಂತರ ಲಾಕ್ ಡೌನ್ ಅಂತ್ಯಗೊಳ್ಳಲಿದೆ ಎಂಬ ಅಂದಾಜು ಬಹುತೇಕ ನಡೆಯುತ್ತಿದೆ. ಒಂದು ವೇಳೆ ಮುಂದುವರೆದರೆ ಮತ್ತೆ ಬೀದಿಗೆ ಬೀಳಲಿದೆ.

ಈ ಗೊಂದಲದಲ್ಲೇ ಊರಿಗೆ ಹೋಗಿ ಅಲ್ಲಿ ನೆಲೆ ಇಲ್ಲದೆ ಕೆಲಸ ಮಾಡುತ್ತಿದ್ದ ಜಾಗಕ್ಕೆ ವಾಪಾಸ್ ಬಂದರೆ ಇಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಮತ್ತೆ ಪರೀಕ್ಷೆ, ಇಲ್ಲಿಯೂ ಕ್ವಾರಂಟೈನ್ ನ ಶಿಕ್ಷೆ ಎದುರಾಗುತ್ತಿದೆ. ಇದ್ದ ಜಾಗದಲ್ಲಿ ಇರಲಾಗದೆ ತವರೂರಿಗೆ ಹೋಗುವ ಆಸೆಯಿಂದ ಹೋಗಿದ್ದವರು ಮತ್ತೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.

ಕರ್ನಾಟಕದಲ್ಲಿ ಎಲ್ಲಿಂದ ಬಂದರೂ ಹೆಚ್ಚು ತಕರಾರು ಮಾಡದೆ ಊರಿಗೆ ಬಿಟ್ಟುಕೊಳ್ಳುತ್ತಿದ್ದೇವೆ. ಆದರೆ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಆಗಿಲ್ಲ. ದುಡಿಯಲು ಬೇರೆ ಕಡೆ ಹೋಗಿದ್ದವರನ್ನು ಸುಲಭವಾಗಿ ಊರಿಗೆ ಸೇರಿಸಿಕೊಳ್ಳುತ್ತಿಲ್ಲ. ಅಲ್ಲಿನ ಬಿಗಿ ನಿಯಮಗಳನ್ನು ಕಂಡು ಗಡಿ ಭಾಗದಲ್ಲಿರುವ ಚೆಕ್ ಪೋಸ್ಟ್ ಗಳಿಂದಲೇ ಕಾರ್ಮಿಕರು ವಾಪಾಸ್ ಬರುತ್ತಿದ್ದಾರೆ.

ಬೆಂಗಳೂರಿನ ಗಡಿಗೆ ಬಂದ ಕಾರ್ಮಿಕರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ. ಮತ್ತೆ ಇಲ್ಲಿಯೂ ಹಣ ಪಾವತಿಸುವ ಅಥವಾ ಸರ್ಕಾರ ಏರ್ಪಡಿಸುವ ಉಚಿತ ವ್ಯವಸ್ಥೆಯಲ್ಲಿ ಕ್ವಾರಂಟೈನ್ ನಲ್ಲಿ ಇರಬೇಕಾದ ಅನಿವಾರ್ಯ ಎದುರಾಗಿದೆ. ದೂರದೂರಿಗೆ ಪ್ರಯಾಣ ಮಾಡಿದ ಕಾರ್ಮಿಕರು ತಮ್ಮ ಬಳಿ ಹಣವಿಲ್ಲ. ನಿಯಮಗಳು ಈಗಿವೇ ಎಂದಿದ್ದರೆ ಊರಿನಲ್ಲೆ ಇರುತ್ತಿದ್ದೇವು ಎಂದು ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳ ಜೊತೆ ಜಗಳವಾಡುತ್ತಿದ್ದಾರೆ.

ಉಚಿತ ಕ್ವಾರಂಟೈನ್ ಗೆ ಒಪ್ಪುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೆ ಉಳಿಯಲು ವ್ಯವಸ್ಥೆ ಮಾಡುವುದು ಕಷ್ಟಸಾಧ್ಯವಾಗಿ ಚೆಕ್ ಪೋಸ್ಟ್ ನಲ್ಲಿ ರಾತ್ರಿ ಪಾಳೇಯದಲ್ಲಿ ಕೆಲಸ ಮಾಡುವು ಅಧಿಕಾರಿಗಳು ಹೈರಾಣಾಗಿದ್ದಾರೆ. ಬೇರೆ ಕಡೆಯಿಂದ ಬೆಂಗಳೂರಿಗೆ ವಾಪಾಸಾದವರು ನಿಯಮಾವಳಿಗಳನ್ನು ಕೇಳಿ ಮತ್ತೆ ಇಲ್ಲಿಂದ ಮರಳುತ್ತಿದ್ದಾರೆ. ಹೆದ್ದಾರಿಯಲ್ಲಿ ಈ ಪಿಕಲಾಟಗಳು ವ್ಯಾಪಕವಾಗಿ ನಡೆಯುತ್ತಿವೆ.

ಪಾಸ್ ಗಳ ಗೊಂದಲ:

ಬೆಂಗಳೂರಿನಲ್ಲಿ ನೆಲಮಂಗಲದ ಮಾದಾವರ, ಹೊಸಕೋಟೆಯ ಬೂದಿಗೆರೆ, ದೇವನಹಳ್ಳಿ, ಹೂಸೂರು ಮಾರ್ಗದ ಅತ್ತಿಬೆಲೆ, ಮೈಸೂರು ಮಾರ್ಗದ ಕೆಂಗೇರಿ ಬಳಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಈ ಮೊದಲಿಗಿಂತಲೂ ಇಲ್ಲಿಗೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬಸ್ ಗಳು, ಲಘುವಾಹನಗಳಲ್ಲಿ ಜನ ಸಾಗರವೇ ಹರಿದು ಬರುತ್ತಿದೆ. ಅವುಗಳಲ್ಲಿ ಬಹಳಷ್ಟು ಮಂದಿ ಹೆದ್ದಾರಿಯಲ್ಲಿ ಬೆಂಗಳೂರು ದಾಟಿ ಹೋಗುವವ ವಾಹನಗಳಿವೆ. ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಬೇಕಿದೆ.

ತಪಾಸಣೆಯೂ ನೆಪ ಮಾತ್ರಕ್ಕೆ ಎನ್ನುವಂತಾಗಿದೆ. ನೆರೆ ರಾಜ್ಯಗಳಲ್ಲಿದ್ದವರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಂಡಿದ್ದಾರೆ. ಅವುಗಳ ಸಾಚಾತನ ಪರೀಕ್ಷೆ ಮಾಡಲು ಸೂಕ್ತ ವ್ಯವಸ್ಥೇ ಇಲ್ಲ. ರಾಜ್ಯ ರಾಜ್ಯಗಳ ನಡುವೆ ಸಮನ್ವಯತೆಯ ಕೊರತೆಯಿಂದ ಪಾಸ್ ಗಳನ್ನು ಪರೀಕ್ಷೆ ಮಾಡಲಾಗುತ್ತಿಲ್ಲ. ಬಹಳಷ್ಟು ಮಂದಿ ಕ್ರಮ ಸಂಖ್ಯೆ ಬದಲಾವಣೆ ಮಾಡಿ ನಕಲಿ ಪಾಸ್ ಬಳಸಿ ಚೆಕ್ ಪೋಸ್ಟ್ ದಾಟುತ್ತಿದ್ದಾರೆ.

ಒಟ್ಟಿನಲ್ಲಿ ಕಳೆದೆರಡು ದಿನಗಳಿಂದ ಜನ ಸಂಚಾರ 20 ಪಟ್ಟು ಹೆಚ್ಚಾಗಿದೆ. ಲಕ್ಷಾಂತರ ಜನ ಓಡಾಡುತ್ತಿದ್ದಾರೆ. ಸಾಮಾಜಿಕ ಅಂತರ ಎಂಬುದು ಪಾಲನೆಯಾಗುತ್ತಿಲ್ಲ. ಚೆಕ್ ಪೋಸ್ಟ್ ಗಳಲ್ಲಿ ನಡೆಸಲಾಗುತ್ತಿರುವ ಥರ್ಮಲ್ ಸ್ಕ್ಯಾನಿಂಗ್ ಹೆಚ್ಚು ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ಮುಂದೆ ಸೋಂಕು ಇನ್ನಷ್ಟು ಹೆಚ್ಚು ಹರಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ