Home / ಜಿಲ್ಲೆ / ಬೆಂಗಳೂರು / ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆಮುಂದಿನ ಆರು ತಿಂಗಳು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ

ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆಮುಂದಿನ ಆರು ತಿಂಗಳು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ

Spread the love

ಬೆಂಗಳೂರು : ಪ್ರಸಕ್ತ ಸಾಲಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತಷ್ಟು ಏರಿಕೆಯಾಗುವ ಸಂಭವವಿದೆ ಎಂಬ ತಜ್ಞರ ಅಭಿಪ್ರಾಯವನ್ನು ಆಧರಿಸಿ ಕೊರೊನಾ ಮಹಾಮಾರಿಯನ್ನು ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಕಂದಾಯ ಸಚಿವ ಆರ್ ಅಶೋಕ್ ಅವರು ಭಾನುವಾರ ತಾವು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಶುಶ್ರೂಷೆ ನೀಡಲು ಮುಂದಿನ ಆರು ತಿಂಗಳು ಮಾನಸಿಕವಾಗಿ ಸಿದ್ಧರಾಗಿ ಎಂದು ಮನವಿ ಮಾಡಿದುದಾಗಿ ಹೇಳಿದರು.

ಖಾಸಗಿ ಪ್ರಯೋಗಾಲಯ ಪರೀಕ್ಷಾ ಕೇಂದ್ರಗಳಲ್ಲಿ ನಡೆಸುವ ಕೋವಿಡ್ ತಪಾಸಣೆಯ ವರದಿಗಳನ್ನು ದೂರವಾಣಿಯ ಮೂಲಕ ರೋಗಿಗಳಿಗೆ ನೇರವಾಗಿ ತಿಳಿಸುತ್ತಿರುವುದರಿಂದ ರೋಗಿಗಳಲ್ಲಿ ಅನಗತ್ಯ ಆತಂಕ ಸೃಷ್ಠಿಯಾಗುತ್ತಿದೆ. ಅಲ್ಲದೆ, ರೋಗಿಗಳು ಆಸ್ಪತ್ರೆಗೆ ತೆರಳಲು ಮುಂದಾದಾಗ ಹಾಸಿಗೆಯ ಲಭ್ಯತೆ ಇಲ್ಲದ ಪ್ರಕರಣಗಳ ಬಗ್ಗೆಯೂ ಸರ್ಕಾರದ ಗಮನಕ್ಕೆ ಬಂದಿದೆ.

ಇಂತಹ ಗೊಂದಲಗಳನ್ನು ತಡೆಗಟ್ಟಲು ಕೋವಿಡ್ ತಪಾಸಣೆಯ ವರದಿಗಳನ್ನು ರೋಗಿಗಳಿಗೆ ನೇರವಾಗಿ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಲಾಗಿದೆ. ತಪಾಸಣಾ ವರದಿಯ ಮಾಹಿತಿಯನ್ನು ಯಾರಾದರೂ ನೇರವಾಗಿ ರೋಗಿಯೊಂದಿಗೆ ಹಂಚಿಕೊಂಡರೆ ಸರ್ಕಾರದ ನಿಯಮಗಳ ರೀತ್ಯಾ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.

# ಸರ್ಕಾರಿ ಅಥವಾ ಖಾಸಗಿ ಪ್ರಯೋಗಾಲಯ ಪರೀಕ್ಷಾ  : 
ಕೇಂದ್ರಗಳಲ್ಲಿ ನಡೆಸಿದ ಕೋವಿಡ್-19 ದೃಢಪಟ್ಟಲ್ಲಿ ಪರೀಕ್ಷಾ ಮಾಹಿತಿಯನ್ನು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ( ಐ ಸಿ ಎಂ ಆರ್ ) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿ ಬಿ ಎಂ ಪಿ )  ಪೋರ್ಟಲ್‍ಗೆ ಅಫ್‍ಲೋಡ್ ಮಾಡಬೇಕು.

ಈ ಮಾಹಿತಿಯ ಆಧಾರದ ಮೇಲೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ರೋಗಿಗಳ ಗುಣ  ಲಕ್ಷಣಗಳನ್ನು ಆಧರಿಸಿ ರೋಗಿಯನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕೋ ಅಥವಾ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಬೇಕೋ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಸಚಿವರು ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಆರೋಗ್ಯ ಅಧಿಕಾರಿಗಳು ಕೋವಿಡ್ ಲಕ್ಷಣಗಳನ್ನು  ಹೊಂದಿರುವವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ  ರೋಗಿಯನ್ನು ಭೇಟಿ ಮಾಡಿ ಆತನ ಗುಣ ಲಕ್ಷಣಗಳನ್ನು
ಮತ್ತೊಮ್ಮೆ ಪರಿಶೀಲನೆ ಮಾಡಿ ನಂತರ ಕೋವಿಡ್ ರೋಗ  ಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಆಸ್ಪತ್ರಗೆ ಇಲ್ಲವಾದಲ್ಲಿ
ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸುತ್ತಾರೆ.

# ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸಂಪರ್ಕ  ಅಧಿಕಾರಿಗಳ ನೇಮಕ :

ರೋಗ ಲಕ್ಷಣಗಳು ಇರುವ ಕೋವಿಡ್ ರೋಗಿಗಳನ್ನು  ಕೋವಿಡ್ ಆಸ್ಪತ್ರೆಗೆ ಕಳುಹಿಸಲು ಹಾಗೂ ರೋಗ ಲಕ್ಷಣಗಳು ಇಲ್ಲದ ಕೋವಿಡ್ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕಳುಹಿಸಲು ಸಂಯಮದಿಂದ ಮಾತನಾಡುವ ಧೈರ್ಯ ಹೇಳುವವರು ಅಗತ್ಯ. ಆದಕಾರಣ, ಎಲ್ಲಾ ಕೋವಿಡ್  ಆಸ್ಪತ್ರೆಗಳಿಗೆ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು  ನೇಮಕ ಮಾಡಲು ಕ್ರಮ ವಹಿಸಲಾಗಿದೆ. ಈವರೆಗೂ  ಸ್ವಾಗತಕಾರರಂತೆ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದ್ದ ವೈದ್ಯರ ಸೇವೆಯನ್ನು ರೋಗಿಗಳಿಗೆ ಚಿಕಿತ್ಸೆ  ನೀಡಲು ಬಳಸಬಹುದು ಎಂದು ತಿಳಿಸಿದರು.

ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ – 19 ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ದೂರುಗಳೂ ಕೇಳಿ ಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವವರ ವಿರುದ್ದ ಕಾನೂನು ಕ್ರಮ  ಜರುಗಿಸಲಾಗುವುದು ಈ ಬಗ್ಗೆ ಈಗಾಗಲೇ ಸರ್ಕಾರವು
ಸುತ್ತೋಲೆಯನ್ನೂ ಕೂಡಾ ಹೊರಡಿಸಿದೆ.

# ಗುರುತು ಪತ್ತೆಗೆ ಸ್ಟಿಕರ್ !

ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರು ವೈದ್ಯಕೀಯೇತರ ಸಿಬ್ಬಂದಿ ಎಲ್ಲರೂ ವೈಯುಕ್ತಿಕ ರಕ್ಷಣಾ ಉಪಕರಣ ( ಪಿ ಪಿ ಇ ) ಕಿಟ್ ಧರಿಸುವ ಹಿನ್ನೆಲೆಯಲ್ಲಿ ಯಾರು ವೈದ್ಯರು ಯಾರು  ವೈದ್ಯಕೀಯೇತರ ಸಿಬ್ಬಂದಿ ಎಂಬುದು ತಿಳಿಯುತ್ತಿಲ್ಲ. ಕೆಲವೊಮ್ಮೆ ವೈದ್ಯರು ಇಲ್ಲ ಎಂದೂ ಹಾಗೂ ಮತ್ತೆ ಕೆಲವೊಮ್ಮೆ ಅರೆ ವೈದ್ಯಕೀಯ ಸಿಬ್ಬಂದಿ ಬಂದಿಲ್ಲ ಎಂದೂ ದೂರುಗಳು ಕೇಳಿ
ಬರುತ್ತಿವೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಕೋವಿಡ್  ಆಸ್ಪತ್ರಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಕಾರ್ಯ
ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯ ಗುರುತನ್ನು  ಸುಲಭವಾಗಿ ಪತ್ತೆ ಹಚ್ಚಲು ಪಿಪಿಪಿ ಕಿಟ್ ಮೇಲೆ ಸ್ಟಿಕರ್ ಹಾಕಿಕೊಂಡು  ಓಡಾಡಲು ಸೂಚನೆ ನೀಡಲಾಗಿದೆ,

ಇನ್ನು ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಣಾ ವಹಿ ( ಡ್ಯೂಟಿ ರಿಜಿಸ್ಟರ್ ) ಇರಿಸಿ ದಾಖಲಿಸಲು ಹಾಗೂ ವೀಡಿಯೋ ಮಾಡುವಂತೆ ಸೂಚಿಸಲಾಗಿದೆ. ಆದರೆ, ವೀಡಿಯೋವನ್ನು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಾರದು ಅಥವಾ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಇದನ್ನು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ನಿರ್ವಹಿಸಬೇಕು.

ದೂರುಗಳು ಬಂದಾಗ ಇಲ್ಲವೇ, ತುರ್ತು ಸಂದರ್ಭಗಳಲ್ಲಿ  ಪರಿಶೀಲನೆ ಮಾಡಲಾಗುವುದು. ಯಾರಾದರೂ ವೈದ್ಯರೇ ಇರಲೀ
ಅಥವಾ ವೈದ್ಯಕೀಯೇತರ ಸಿಬ್ಬಂದಿಯೇ ಇರಲಿ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ರೋಗಿಗಳನ್ನು ದಾಖಲು ಮಾಡಲಾಗುವ ಎಲ್ಲಾ   ಹಾಸಿಗೆಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲಾಗುವುದು. ಇದರಿಂದ
ಎಷ್ಟು ಜನ ರೋಗಿಗಳಿದ್ದಾರೆ ? ಎಷ್ಟು ರೋಗಿಗಳು ಬಿಡುಗಡೆ  ಹೊಂದಿದ್ದಾರೆ ? ಎಷ್ಟು ಹಾಸಿಗೆಗಳು ಲಭ್ಯವಿದೆ ? ಎಂಬ ಬಗ್ಗೆ ಮಾಹಿತಿ   ದೊರೆಯುತ್ತದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳಿಗೂ ಈಗಾಗಲೇ ಸಂಖ್ಯೆಗಳನ್ನು (  ನಂಬರ್‍ಗಳನ್ನು ) ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ  ವೈದ್ಯಕೀಯೇತರ ಸಿಬ್ಬಂದಿಯನ್ನು ಕ್ವಾರೆಂಟೈನ್ ಮಾಡಲು
ಹೋಟಲ್‍ಗಳನ್ನು ಗುರುತಿಸಲಾಗಿದೆ. ಅದರಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗುವುದು. ಇದರಿಂದ ಸಾರ್ವಜನಿಕರಿಂದ,
ವಿಶೇಷವಾಗಿ, ನೆರೆಹೊರೆಯವರಿಂದ ಆಗುವ ಮುಜುಗರ ಹಾಗೂ ಮಾನಸಿಕ ವೇದನೆಯನ್ನು ತಪ್ಪಿಸಬಹುದಾಗಿದೆ. ಈ ಬಗ್ಗೆಯೂ ಕೂಡಾ ಕ್ರಮ ವಹಿಸಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ, ವಿಶೇಷವಾಗಿ ಅರೆ ವೈದ್ಯಕೀಯ ಸಿಬ್ಬಂದಿ, ಲಿಫ್ಟ್ ಆಪರೇಟರ್ ಹಾಗೂ  ಸ್ವಚ್ಛತಾಗಾರರ ಶ್ರಮವನ್ನು ಗಮನಿಸಿ ಅವರ ವೇತನವನ್ನು  ಹೆಚ್ಚು ಮಾಡುವ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನವನ್ನು ಹೆಚ್ಚು ಮಾಡಲು ಕೂಡಲೇ ಕ್ರಮ ವಹಿಸಲಾಗುವುದು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್  ಸೋಂಕಿತ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ.  ಅಲ್ಲಿನ ರೋಗಿಗಳಿಗೆ ಗುಣಮಟ್ಟದ ಊಟ ದೊರೆಯುತ್ತಿಲ್ಲ ಎಂದು  ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ವಿಕ್ಟೋರಿಯಾ  ಆಸ್ಪತ್ರೆಗೆ ಖುದ್ಧು ನೀಡಿದ ಸಚಿವರು ರೋಗಿಗಳಿಗೆ ನೀಡುವ  ಊಟದಲ್ಲಿ ತುಪ್ಪ, ಉಪ್ಪಿನ ಕಾಯಿ, ಚಪಾತಿ, ರಾಗಿ ಮುದ್ದೆ, ಅನ್ನ ಮತ್ತು ಸಾಂಬಾರ್ ಹೀಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಪೂರಕವಾದ ಆಹಾರ ಪದಾರ್ಥಗಳನ್ನು ನೀಡಲು ಸೂಚಿಸಿರುವುದಾಗಿ ತಿಳಿಸಿದರು.

ಶಾಂತಿನಗರದಲ್ಲಿರುವ 20 ಹಾಸಿಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 40 ಲಕ್ಷ ರೂ ಬಿಡುಗಡೆ ಮಾಡಲಾಗಿದೆ.
ಏಡ್ಸ್ ನಿಯಂತ್ರಣಾ ಸಂಸ್ಥೆಯ  ಕಚೇರಿಯನ್ನು 75 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ 40 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ
ಶಾಶ್ವತ ರೋಗಿ ಸಾಗಣಾ ವಾಹನ (ಆಂಬುಲೆನ್ಸ್) ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ. ಅಲ್ಲದೆ, ವಿಕ್ಟೋರಿಯ ಆಸ್ಪತ್ರೆಯಲ್ಲಿ ಆರು ಆಂಬ್ಯುಲೆನ್ಸ್‍ಗಳನ್ನು ಆರು ತಿಂಗಳ ಮಟ್ಟಿಗೆ ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ನಿರ್ವಹಣೆ ಮಾಡಲು ಸೂಚಿಸಲಾಗಿದೆ.

ಆಯುಷ್ ಇಲಾಖೆಯ 85 ವೈದ್ಯಾಧಿಕಾರಿಗಳನ್ನು ಗುತ್ತಿಗೆ  ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.  ಈ ವಾರಾಂತ್ಯದೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳ ಸದಸ್ಯರುಗಳ ಸಭೆ ಕರೆಯಲಾಗುತ್ತಿದೆ. ಮಾಹಾನಗರ ಪಾಲಿಕೆಯಲ್ಲಿ 198 ವಾರ್ಡುಗಳಿದ್ದು, ಪ್ರತಿ 70 ಸದಸ್ಯರು ಒಳಗೊಂಡ ಮೂರು
ವಿಭಾಗಗಳನ್ನಾಗಿ ಮಾಡಿ ಎಲ್ಲಾ ಸದಸ್ಯರೊಂದಿಗೆ  ಚರ್ಚಿಸಲಾಗುವುದು.

ಪ್ರತಿ ವಾರ್ಡ್‍ನಲ್ಲಿ ಆಯಾ ವಾರ್ಡಿನ
ಕಾರ್ಪೋರೇಟರ್ ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು   ಪಡೆದು, ಕೋವಿಡ್ – 19 ರೋಗ ಪತ್ತೆಯಾದವರನ್ನು
ಆಸ್ಪತ್ರೆಗೆ ಕಳುಹಿಸುವುದು, ಅವರ ಮನೆಯ ಹಾಗೂ ಆ   ಪ್ರದೇಶವನ್ನು ಸೀಲ್‍ಡೌನ್ ಮಾಡುವುದು, ಸೀಲ್‍ಡೌನ್ ಆದ ಪ್ರದೇಶಕ್ಕೆ ಊಟದ ಹಾಗೂ ಇನ್ನಿತರೆ ಸೌಲಭ್ಯಗಳನ್ನು   ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ. ಕಂದಾಯ   ಇಲಾಖೆಯ ಸೇವೆಯಲ್ಲಿರುವ ಖಾಯಂಪೂರ್ವ ಅವಧಿಯ 20   ತಹಸೀಲ್ದಾರ್‍ಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ನೇಮಕ   ಮಾಡಿ ಕಾರ್ಯ ನಿರ್ವಹಿಸಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 198  ವಾರ್ಡ್‍ಗಳಿದ್ದು, ಪ್ರತಿ ವಾರ್ಡ್‍ಗೆ ಸರ್ಕಾರೇತರ ಸಂಸ್ಥೆಗಳ  ಹತ್ತು ಸದಸ್ಯರನ್ನು ನೇಮಕ ಮಾಡಲಾಗುವುದು. ಈ  ಸ್ವಯಂ ಸೇವಕರು ಕೋವಿಡ್ – 19 ರೋಗ ಪತ್ತೆಯಾದವರನ್ನು ಆಸ್ಪತ್ರೆಗೆ ಕಳುಹಿಸುವುದು, ಅವರ ಮನೆಯ ಹಾಗೂ ಆ ಪ್ರದೇಶವನ್ನು ಸ್ಯಾನಿಟೈಸ್  ಮಾಡಿಸುವುದು ಸೀಲ್‍ಡೌನ್ ಮಾಡುವುದು, ಸೀಲ್‍ಡೌನ್ ಆದ ಪ್ರದೇಶಕ್ಕೆ ಊಟದ ಮತ್ತಿತರ ಸೌಲಭ್ಯಗಳನ್ನು   ಒದಗಿಸುವುದು ಹಾಗೂ ಕೋವಿಡ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ ಎಂದರು.

# ಅಧಿಕಾರಿಗಳ ನೇಮಕ  : 
ಕೋವಿಡ್ ರೋಗ ಹೊಂದಿರುವ ರೋಗಿಗಳಿಗೆ ಹಾಸಿಗೆಗಳ  ಹಂಚಿಕೆಯನ್ನು ಮಾಡಲು ಹಿರಿಯ ಐ ಎ ಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ನೇಮಕ ಮಾಡಲಾಗಿದೆ. ಕೋವಿಡ್ ಹಾಸಿಗೆ ಕೇಂದ್ರಗಳನ್ನು ಸ್ಥಾಪಿಸಲು ಐ ಎ ಎಸ್ ಅಧಿಕಾರಿ ರಾಜೇಂದ್ರ
ಕಠಾರಿಯಾ ಅವರನ್ನು ನೇಮಕ ಮಾಡಲಾಗಿದೆ.  ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ( ಮಾಸ್ಕ್ ) ಧರಿಸುವುದು
ಕಡ್ಡಾಯವಾಗಿದೆ. ಮಾಸ್ಕ್ ಧರಿಸದೆ ಇರುವವರಿಗೆ ದಂಡವನ್ನು ಹಾಕರಲಾಗುತ್ತಿದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಮಾಸ್ಕ್ ಹಾಕದ ಒಟ್ಟು 2280 ಪ್ರಕರಣಗಳು ದಾಖಲಾಗಿದ್ದು, ದಂಡದ ರೂಪದಲ್ಲಿ 4.85 ಲಕ್ಷ ರೂ ಗಳನ್ನು ವಸೂಲು ಮಾಡಲಾಗಿದೆ  ಎಂದು ತಿಳಿಸಿದರು.

# ಪ್ರತಿ ವಾರ್ಡ್‍ಗೆ ಎರಡು ಚಿರಶಾಂತಿ ವಾಹನಗಳು : 

ಕೋವಿಡ್‍ನಿಂದ ಮೃತರಾದವರ ಪಾರ್ಥಿವ ಶರೀರವನ್ನು ಅಂತ್ಯ  ಸಂಸ್ಕಾರಕ್ಕೆ ಕೊಂಡೊಯ್ಯಲು ಪಾಲಿಕೆಯ ಪ್ರತಿ ವಾರ್ಡ್‍ಗೆ
ಎರಡು ಚಿರ ಶಾಂತಿ ವಾಹನಗಳನ್ನು ಸರ್ಕಾರದಿಂದ  ಒದಗಿಸಲಾಗುವುದು. ಒಂದು ವಾಹನದಲ್ಲಿ ಪಾರ್ಥಿವ
ಶರೀರದೊಂದಿಗೆ ವಾಹನ ಚಾಲಕನೂ ಒಳಗೊಂಡಂತೆ ನಾಲ್ವರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ಸೋಂಕಿತರ ಪ್ರದೇಶವನ್ನು ಸ್ಯಾನಿಟೈಸ್ ಮಾಡಲು ಎರಡು ಮಿಕ್ಸ್ಡ್ ಕ್ಯಾನನ್ ಸೋಡಿಯಂ ಹೈಡ್ರೋ ಕ್ಲೋರೈಡ್ ದ್ರಾವಣ ಸಿಂಪಡನಾ ವಾಹನಗಳನ್ನುಖರೀದಿಸಲಾಗಿದೆಇನ್ನೂ ಹೆಚ್ಚಿನ ವಾಹನಗಳನ್ನು  ಹಂತ ಹಂತವಾಗಿ ಖರೀದಿ ಮಾಡಲಾಗುವುದು.   ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ ರಾಜ್ಯಕ್ಕೆ 742 ಕೋಟಿ ರೂ ಅನುದಾನ   ಬಿಡುಗಡೆಯಾಗಿದೆ.

ಇದೀಗ ಈ ಅನುದಾನದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 70 ಕೋಟಿ ರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 50 ಕೋಟಿ ರೂ, ಪೊಲೀಸ್ ಇಲಾಖೆಗೆ 12 ಕೋಟಿ ರೂ, ರೈಲ್ವೇ ಇಲಾಖೆಗೆ 13 ಕೋಟಿ ರೂ ಹಾಗೂ  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2.89 ಕೋಟಿ ರೂ ಸೇರಿದಂತೆ 379.89 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಇನ್ನೂ  362.11 ಕೋಟಿ ರೂ ಲಭ್ಯವಿದೆ. ಇದನ್ನೂ ಕೂಡಾ ಕೋವಿಡ್  ನಿಯಂತ್ರಣಕ್ಕಾಗಿ ಬಳಸಿಕೊಳ್ಳಲಾಗುವುದು.

# ಹಾಸಿಗೆ ವ್ಯವಸ್ಥೆ : 

ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಹೆಚ್ಚು ಮಾಡಲು ಈಗಾಗಲೇ ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ 176 ಹಾಸಿಗೆಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಹಜ್ ಭವನದಲ್ಲಿ 432 ಹಾಸಿಗೆಗಳು, ಕೃಷಿ ವಿಶ್ವವಿದ್ಯಾಲಯದಲ್ಲಿ 1000 ಹಾಸಿಗಗಳು,  ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಹಾಸಿಗೆಗಳು, ಸರ್ಕಾರಿ ಆರ್ಯುವೇದ ವಸತಿ ನಿಲಯದಲ್ಲಿ 300 ಹಾಸಿಗೆಗಳು,  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1000 ಹಾಸಿಗೆಗಳು ಹಾಗೂ  ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ  ಕೇಂದ್ರದಲ್ಲಿ 5000 ಹಾಸಿಗೆಗಳನ್ನು ವ್ಯವಸ್ಥೆ ಮಾಡಲು  ಕ್ರಮವಹಿಸಲಾಗಿದೆ.

ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ  ದಾಖಲಾಗುವ ರೋಗಿಗಳಿಗೆ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ
ಸಿಬ್ಬಂದಿಗಳಿಗೆ ಒಳ್ಳಯ ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ. ಬೆಂಗಳೂರಿನ ತಾಜ್ ಹೋಟೆಲ್, ಹೋಟೆಲ್ ಏಟ್ರಿಯಾ ಹಾಗೂ ಇಸ್ಕಾನ್ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕೋವಿಡ್ ರೋಗಿಗಳು ಮಧುಮೇಹಿಗಳಾಗಿದ್ದಲ್ಲಿ ಅವರಿಗೆ ಹೊಂದುವಂತಹ ಊಟವನ್ನು, ಕಿಡ್ನಿ ಸಮಸ್ಯೆಯಿಂದ ಬಳಲುವ
ಕೋವಿಡ್ ರೋಗಿಗಳಿಗೆ ಅವರಿಗೆ ಹೊಂದುವಂತಹ ಊಟವನ್ನು ಹಾಗೂ ಸಾಮಾನ್ಯ ಜನರು ಕೋವೀಡ್ ರೋಗಿಗಳಾಗಿದ್ದಲ್ಲಿ ಅವರಿಗೆ  ಪೂರಕವಾಗುವ ಊಟವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿ ಮಕ್ಕಳಿಗೆ ಹೊಂದುವಂತಹ ಊಟವನ್ನು ಮಕ್ಕಳಿಗೆ ಹಾಗೂ ಆಹಾರ ಸೇವನೆ ಮಾಡದ ರೋಗಿಗಳಿಗೆ ದ್ರವ ರೂಪದ ಆಹಾರವನ್ನು ನೀಡಲಾಗುತ್ತಿದೆ. ಮಧುಮೇಹಿಗಳನ್ನು  ನೋಡಿಕೊಳ್ಳಲು ಪ್ರತಿ ಸೆಂಟರ್‍ನಲ್ಲಿ ಓರ್ವ ಮಧುಮೇಹಿ ವೈದ್ಯರನ್ನು ನೇಮಿಸಲಾಗುವುದು. ರೋಗಿಗಳಿಗೆ ಪ್ರತಿ ದಿನ ಬೆಳಿಗ್ಗೆ 7-30 ಗಂಟೆಗೆ ಉಪಾಹಾರ, 10-30 ಗಂಟೆಗೆ ಸ್ನಾಕ್ಸ್, ಮಧ್ಯಾಹ್ನ 1-00 ಗಂಟೆಗೆ ಬೋಜನ, ಮಧ್ಯಾಹ್ನ 3-30 ಗಂಟೆಗೆ ಲಘು ಉಪಾಹಾರ ಸಂಜೆ 5-00 ಗಂಟೆಗೆ ಕಾಫಿ ಅಥವಾ ಟೀ ಹಾಗೂ
ರಾತ್ರಿ 7-00 ಗಂಟೆಗೆ ಊಟವನ್ನು ಸರ್ಕಾರವೇ ಉಚಿತವಾಗಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಕಂದಾಯ ಇಲಾಖೆಯ ಸರ್ಕಾರದ  ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಅವರೂ ಈ   ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ